Uttarakhand HC & Covid-19
Uttarakhand HC & Covid-19 
ಸುದ್ದಿಗಳು

ಸ್ಥಳೀಯ ಯಾತ್ರಾರ್ಥಿಗಳಿಗೆ ಚಾರ್‌ ಧಾಮ್‌ ಯಾತ್ರೆ ಆರಂಭಿಸುವ ಸರ್ಕಾರದ ನಿರ್ಧಾರಕ್ಕೆ ಉತ್ತರಾಖಂಡ ಹೈಕೋರ್ಟ್‌ ತಡೆ

Bar & Bench

ಉತ್ತರಾಖಂಡದಲ್ಲಿ ಜುಲೈ 1ರಿಂದ ಆರಂಭವಾಗಲಿರುವ ಚಾರ್‌ ಧಾಮ್‌ ಯಾತ್ರೆಯಲ್ಲಿ ಪಾಲ್ಗೊಳ್ಳಲು ಸ್ಥಳೀಯ ಯಾತ್ರಾರ್ಥಿಗಳಿಗೆ ಅನುಮತಿಸಿದ್ದ ರಾಜ್ಯ ಸಚಿವ ಸಂಪುಟದ ತೀರ್ಮಾನಕ್ಕೆ ಸೋಮವಾರ ಉತ್ತರಾಖಂಡ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ.

ಕೋವಿಡ್‌ ಮೂರನೇ ಅಲೆ ಅಪ್ಪಳಿಸಬಹುದು ಎಂಬ ಆತಂಕವನ್ನು ಮುಂದು ಮಾಡಿ ಮುಖ್ಯ ನ್ಯಾಯಮೂರ್ತಿ ಆರ್‌ ಎಸ್‌ ಚೌಹಾಣ್‌ ಮತ್ತು ನ್ಯಾಯಮೂರ್ತಿ ಅಲೋಕ್‌ ವರ್ಮಾ ನೇತೃತ್ವದ ವಿಭಾಗೀಯ ಪೀಠವು ಆದೇಶ ಹೊರಡಿಸಿದೆ.

“ಮೂರನೇ ಅಲೆಯಲ್ಲಿ ಮಕ್ಕಳು ಸಮಸ್ಯೆಗೆ ಸಿಲುಕಬಹುದು ಎಂದು ವೈಜ್ಞಾನಿಕ ಸಮುದಾಯ ಎಚ್ಚರಿಸಿದೆ. ಮಗುವನ್ನು ಕಳೆದುಕೊಂಡರೆ ಅದರಿಂದ ಪೋಷಕರಿಗೆ ಮಾತ್ರ ನೋವಾಗುವುದಿಲ್ಲ, ವಿಶಾಲಾರ್ಥದಲ್ಲಿ ಅದು ರಾಷ್ಟ್ರಕ್ಕೆ ನೋವಿನ ಸಂಗತಿ. ಡೆಲ್ಟಾ ಪ್ಲಸ್‌ ವೈರಸ್‌ ತಳಿಯು ಒಂದೊಮ್ಮೆ ಅಪಾಯಕಾರಿಯಾಗಿ ನಮ್ಮ ಮಕ್ಕಳ ಜೀವಕ್ಕೆ ಎರವಾದರೆ ನಮ್ಮ ದೇಶ ತನ್ನ ಮುಂದಿನ ಪೀಳಿಗೆಯ ಒಂದು ಭಾಗವನ್ನು ಕಳೆದುಕೊಳ್ಳ ಬೇಕಾಗುತ್ತದೆ. ಇಂಥ ಒಂದು ಉತ್ಪಾತವು ದೇಶದ ಬೆಳವಣಿಗೆಯ ಮೇಲೆ ಮಾರಕ ಪರಿಣಾಮ ಬೀರುತ್ತದೆ” ಎಂದು ನ್ಯಾಯಾಲಯ ಹೇಳಿದೆ.

ದಾಖಲೆಯಲ್ಲಿ ಸಲ್ಲಿಕೆಯಾದ ಅಂಶಗಳು ಮತ್ತು ವಸ್ತುಸ್ಥಿತಿಯನ್ನು ಪರಿಗಣಿಸಿದ ನಂತರ ಈ ವಿಷಯದಲ್ಲಿ ಸಮತೋಲಿತೆಯ ಅನುಕೂಲವು ದೇಶದ ಜನರ ಹಿತವನ್ನು ಅವಲಂಬಿಸಿರುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತು. ಈಗ ಹೇಳುತ್ತಿರುವಂತೆ ಮೂರನೇ ಅಲೆಯು ಅಪ್ಪಳಿಸುವುದು ದಿಟವಾದರೆ ದೇಶದ ಮಕ್ಕಳಿಗೆ ತೀವ್ರ ಸಮಸ್ಯೆಯಾಗಲಿದ್ದು, ಅದರಿಂದಾಗುವ ನಷ್ಟ ಭಯಾನಕವಾಗಿರಲಿದೆ ಎಂದು ಪೀಠ ಒತ್ತಿ ಹೇಳಿತು.

ಈ ಹಿನ್ನೆಲೆಯಲ್ಲಿ, “ಸಾರ್ವಜನಿಕ ಹಿತದೃಷ್ಟಿಯಿಂದ ಜೂನ್‌ 25ರ ರಾಜ್ಯ ಸಂಪುಟದ ತೀರ್ಮಾನವನ್ನು ತಡೆ ಹಿಡಿಯುತ್ತಿದ್ದು, ಚಾರ್‌ ಧಾಮ್‌ ದೇವಾಲಯಗಳಿಗೆ ಯಾತ್ರಾರ್ಥಿಗಳು ತೆರಳುವುದನ್ನು ನಿಷಿದ್ಧಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಲಾಗಿದೆ” ಎಂದು ಪೀಠವು ಆದೇಶಿಸಿತು.

ಇದೇ ವೇಳೆ ನ್ಯಾಯಾಲಯವು ದೇವತಾ ಉತ್ಸವಗಳನ್ನು ಲೈವ್‌ ಸ್ಟ್ರೀಮಿಂಗ್‌ ಮಾಡುವ ಮೂಲಕ ಅದನ್ನು ಜನರು ಮನೆಯಲ್ಲೇ ಕುಳಿತು ಕಣ್ತುಂಬಿಕೊಳ್ಳಲು ವ್ಯವಸ್ಥೆ ಮಾಡುವಂತೆ ನ್ಯಾಯಾಲಯ ಸಲಹೆ ನೀಡಿತು. ಈ ಸಂಬಂಧ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿಲಾಯಿತು.

“ನ್ಯಾಯಾಲಯದ ಜೊತೆ ಸರ್ಕಾರವು ಪ್ರಾಮಾಣಿಕವಾಗಿ ನಡೆದುಕೊಳ್ಳಬೇಕು. ತನ್ನ ದತ್ತಾಂಶದ ಮೂಲಕ ಉದ್ದೇಶಪೂರ್ವಕವಾಗಿ ಪೀಠವನ್ನು ದಿಕ್ಕುತಪ್ಪಿಸುವ ಪ್ರಯತ್ನ ಮಾಡಿದೆ. ಹೈಕೋರ್ಟ್‌ ಅನ್ನು ಸರ್ಕಾರ ಲಘುವಾಗಿ ಪರಿಗಣಿಸಬಾರದು. ನಕಲಿ ದಾಖಲೆಗಾಗಿ ನಿಮ್ಮ ಮೇಲೆ ಕ್ರಮ ಜರುಗಿಸಬಹುದು” ಎಂದು ನ್ಯಾಯಾಲಯ ಹೇಳಿದೆ.

“ರಾಜ್ಯ ಸರ್ಕಾರದ ಅತ್ಯುತ್ತಮ ಉದ್ದೇಶದ ಹೊರತಾಗಿಯೂ ಕುಂಭಮೇಳದ ವೇಳೆ ಜಿಲ್ಲಾಡಳಿತಗಳು ಕ್ರಮಬದ್ಧವಾಗಿ ಕೋವಿಡ್‌ ತಡೆ ಮಾರ್ಗಸೂಚಿ ಜಾರಿ ಮಾಡಲು ವಿಫಲವಾಗಿವೆ. ಹೆಚ್ಚಿನ ಜನರು ಮಾಸ್ಕ್‌ ಧರಿಸುವುದು, ಸ್ಯಾನಿಟೈಸರ್‌ ಬಳಸುವುದನ್ನು ಮಾಡುತ್ತಿರಲಿಲ್ಲ, ಸಾಮಾಜಿಕ ಅಂತರ ಪಾಲಿಸುತ್ತಿರಲಿಲ್ಲ. ಲಕ್ಷಾಂತರ ಜನರನ್ನು ಗಂಗಾ ನದಿಯ ತಟದಲ್ಲಿ ನೆರೆಯುವುದಲ್ಲದೇ ಅವರು ಅಲ್ಲಿ ಸ್ನಾನ ಮಾಡಲು ಅವಕಾಶ ಮಾಡಿಕೊಡಲಾಗಿತ್ತು” ಎಂದು ಪೀಠವು ಕುಂಭಮೇಳದ ಸಂದರ್ಭದಲ್ಲಿ ಉಂಟಾದ ವೈಫಲ್ಯದತ್ತ ಬೆರಳು ಮಾಡಿತು.

ವಿಚಾರಣೆಯ ಒಂದು ಹಂತದಲ್ಲಿ “ಚಾರ್‌ ಧಾಮ್‌ ಯಾತ್ರೆಯ ನಡುವೆ ಕೋವಿಡ್‌ನಿಂದ ಸಾವು ಸಂಭವಿಸಿದರೆ ಪ್ರತಿಯೊಬ್ಬರಿಗೂ 4-5 ಲಕ್ಷ ರೂಪಾಯಿ ನೀಡುವುದಾಗಿ ನೀವು ಭರವಸೆ ನೀಡುವಿರಾ?” ಎಂದು ಮುಖ್ಯ ನ್ಯಾಯಮೂರ್ತಿಯವರು ಸರ್ಕಾರವನ್ನು ಪ್ರಶ್ನಿಸಿದರು.

“ನಮ್ಮ ಜನರು ಹೆಚ್ಚು ಧಾರ್ಮಿಕವಾಗಿದ್ದಾರೆ ಎಂಬುದು ನ್ಯಾಯಾಲಯಕ್ಕೆ ಗೊತ್ತಿದೆ. ಆದ್ದರಿಂದ, ಹಿಂದಿನ ಸಂದರ್ಭವೊಂದರಲ್ಲಿ ಈ ನ್ಯಾಯಾಲಯವು ಚಾರ್ ಧಾಮ್‌ನಲ್ಲಿ ನಡೆಸುವ ಎಲ್ಲಾ ಸಮಾರಂಭಗಳನ್ನು ಲೈವ್-ಸ್ಟ್ರೀಮಿಂಗ್ ಅನ್ನು ಗಮನದಲ್ಲಿಟ್ಟುಕೊಂಡು ಮಾಡಬೇಕೆಂದು ಸೂಚಿಸಿತ್ತು” ಎಂದು ಪೀಠ ಹೇಳಿತು.

ಚಾರ್‌ ಧಾಮ್‌ ಅನ್ನು ಲೈವ್‌ ಸ್ಟ್ರೀಮ್‌ ಮಾಡುವುದು ನಮ್ಮ ಸಂಪ್ರದಾಯ ಮತ್ತು ಶಾಸ್ತ್ರಕ್ಕೆ ವಿರುದ್ಧವಾಗಿದೆ ಎಂದು ಅಡ್ವೊಕೇಟ್‌ ಜನರಲ್‌ ಹೇಳಿದಾಗ ನ್ಯಾಯಾಲಯವು ನಮ್ಮ ಪೂರ್ವಜರಿಗೆ ಈ ತಂತ್ರಜ್ಞಾನದ ಬಗ್ಗೆ ತಿಳಿದಿರಲಿಲ್ಲ. ಇದಕ್ಕಾಗಿ ಅದನ್ನು ಶಾಸ್ತ್ರದೊಳಗೆ ಸೇರಿಸಿರಲಿಲ್ಲ ಎಂದಿತು. “ದೇಶಾದ್ಯಂತ ಕುಳಿತು ಲೈವ್‌ ಸ್ಟ್ರೀಮಿಂಗ್‌ ನೋಡುವ ವ್ಯವಸ್ಥೆಯನ್ನು ಸರ್ಕಾರ ಮಾಡಬೇಕು” ಎಂದು ಪೀಠ ಸ್ಪಷ್ಟವಾಗಿ ಹೇಳಿದ್ದು, ಮುಂದಿನ ವಿಚಾರಣೆಯ ವೇಳೆಗೆ ಈ ಸಂಬಂಧ ವರದಿ ಸಲ್ಲಿಸುವಂತೆ ಸೂಚಿಸಿದೆ. ಜುಲೈ 7ಕ್ಕೆ ವಿಚಾರಣೆ ನಿಗದಿಗೊಳಿಸಲಾಗಿದೆ.