ಸಿಎಂ ಪುಷ್ಕರ್ ಸಿಂಗ್ ಧಾಮಿ, ಏಕರೂಪ ನಾಗರಿಕ ಸಂಹಿತೆ
ಸಿಎಂ ಪುಷ್ಕರ್ ಸಿಂಗ್ ಧಾಮಿ, ಏಕರೂಪ ನಾಗರಿಕ ಸಂಹಿತೆ ಪುಷ್ಕರ್ ಸಿಂಗ್ ಧಾಮಿ (ಎಫ್ ಬಿ)
ಸುದ್ದಿಗಳು

ಲಿವ್‌- ಇನ್‌ ಸಂಬಂಧ ನೋಂದಣಿಯಾಗದಿದ್ದರೆ ಜೋಡಿಗೆ ಸೆರೆವಾಸ: ಉತ್ತರಾಖಂಡ ಯುಸಿಸಿ ಮಸೂದೆ

Bar & Bench

ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರುವ ಭಾರತೀಯ ಜನತಾ ಪಕ್ಷದ ಪ್ರಮುಖ ಕಾರ್ಯಸೂಚಿಯ ಭಾಗವಾಗಿ ಉತ್ತರಾಖಂಡದಲ್ಲಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ನೇತೃತ್ವದ ಸರ್ಕಾರವು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಮಸೂದೆಯನ್ನು ಜಾರಿಗೊಳಿಸಿದೆ. ಮಸೂದೆಯಲ್ಲಿ ಲಿವ್‌-ಇನ್‌ ಸಂಬಂಧಗಳನ್ನು ನಿಯಂತ್ರಿಸುವ ವಿಷಯವೂ ಅಡಕಾಗಿದ್ದು ಚರ್ಚೆಯನ್ನು ಹುಟ್ಟುಹಾಕಿದೆ.

ಲಿವ್-ಇನ್ ಸಂಬಂಧಗಳನ್ನು ನೋಂದಾಯಿಸದ ವ್ಯಕ್ತಿಗಳಿಗೆ ಜೈಲು ಶಿಕ್ಷೆಯೊಂದಿಗೆ ದಂಡ ವಿಧಿಸುವುದಾಗಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮಂಡಿಸಿರುವ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಮಸೂದೆಯ ಕರಡು ಮಸೂದೆ ಹೇಳುತ್ತದೆ. ಪ್ರಸ್ತಾವಿತ ಮಸೂದೆ ಉತ್ತರಾಖಂಡದಲ್ಲಿ ಮದುವೆ, ವಿಚ್ಛೇದನ ಮತ್ತು ಉತ್ತರಾಧಿಕಾರದಂತಹ ಇತರ ಅಂಶಗಳನ್ನೂ ಒಳಗೊಂಡಿದೆ.

ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ನೇತೃತ್ವದ ಐವರು ಸದಸ್ಯರ ಸಮಿತಿ ಯುಸಿಸಿ ಮಸೂದೆಯ ರೂಪುರೇಷೆಗಳನ್ನು ಸಿದ್ಧಪಡಿಸಿತ್ತು. ಸಮಿತಿ ತನ್ನ ಅಂತಿಮ ವರದಿಯನ್ನು ಫೆಬ್ರವರಿ 2ರಂದು ಧಾಮಿ ಅವರಿಗೆ ಸಲ್ಲಿಸಿತ್ತು.

ವಿವಿಧ ಧಾರ್ಮಿಕ ಕಟ್ಟುಪಾಡುಗಳಾಚೆಗೆ ಜನರ ಜೀವನದ ವಿವಿಧ ವಿಚಾರಗಳನ್ನು ಒಂದೇ ಕಾನೂನಿನಡಿ ತರುವ ಸಲುವಾಗಿ ವೈಯಕ್ತಿಕ ಸಾಂಪ್ರದಾಯಿಕ ಕಾನೂನುಗಳಿಗೆ ಒಳಪಟ್ಟು ಸಂಬಂಧಗಳಲ್ಲಿ ಯಾವುದು ಅನುಮತಿಸಬೇಕು ಮತ್ತು ಯಾವುದನ್ನು ನಿಷೇಧಿಸಬೇಕು ಎಂಬುದನ್ನು ಹೇಳುತ್ತದೆ ಯುಸಿಸಿ.

UCC ಲೈವ್ ನಲ್ಲಿ

ಮಸೂದೆಯ ಪ್ರಮುಖಾಂಶಗಳು

ರಾಜ್ಯದ ಲಿವ್‌-ಇನ್‌ ಸಂಗಾತಿಗಳು ನೋಂದಣಾಧಿಕಾರಿಗೆ ಹೇಳಿಕೆ ನೀಡಿ ತಮ್ಮ ಸಂಬಂಧವನ್ನು ನೋಂದಾಯಿಸಿಕೊಳ್ಳಬೇಕಾಗುತ್ತದೆ.

ಯುಸಿಸಿಯಲ್ಲಿ ಪಟ್ಟಿ ಮಾಡಲಾದ ಯಾವುದೇ ಷರತ್ತುಗಳನ್ನು ಉಲ್ಲಂಘಿಸಿದ ಜೋಡಿ ನೋಂದಾಯಿಸಿಕೊಳ್ಳಲಾಗುವುದಿಲ್ಲ.

ಸಂಗಾತಿಗಳಲ್ಲಿ ಒಬ್ಬರು 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ, ಲಿವ್‌-ಇನ್‌ ಸಂಬಂಧದ ವಿಚಾರವನ್ನು ತಮ್ಮ ಪೋಷಕರಿಗೆ ತಿಳಿಸಬೇಕಾಗುತ್ತದೆ.

ಲಿವ್‌- ಇನ್‌ ಸಂಬಂಧದಲ್ಲಿರುವುದಾಗಿ ಅಧಿಕಾರಿಗಳಿಗೆ ಹೇಳಿಕೆ ನೀಡದೆ ಸಂಬಂಧ ಮುಂದುವರಿಸಿದ್ದರೆ ಅವರಿಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ.

ಅಧಿಕಾರಿಗಳಿಗೆ ಹೇಳಿಕೆ ನೀಡದೆ ಸಂಬಂಧ ಮುಂದುವರೆಸಿದ್ದರೆ ಒಟ್ಟು ಮೂರು ಹಂತದ ಶಿಕ್ಷೆಗಗಳನ್ನು ವಿಧಿಸಲಾಗುತ್ತದೆ. ಮೂರರಿಂದ ಆರು ತಿಂಗಳವರೆಗೆ ಜೈಲು ಶಿಕ್ಷೆ ಅಥವಾ 10,000 ರೂಪಾಯಿಯಿಂದ 25,000 ರೂಪಾಯಿಯವರೆಗೆ ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ.

UCC ಲೈವ್ ನಲ್ಲಿ

ನ್ಯಾಯಾಲಯದ ಪ್ರಕರಣಗಳಲ್ಲಿ ಲಿವ್‌- ಇನ್‌ ಜೋಡಿಗಳ ಪರ ವಾದ ಮಂಡಿಸುವ ವಕೀಲ ಉತ್ಕರ್ಷ್ ಸಿಂಗ್ ಅವರು, ಸಂಹಿತೆಯು ಒಂದು ಹೆಜ್ಜೆ ಮುಂದೆ, ಎರಡು ಹೆಜ್ಜೆ ಹಿಂದೆ ಎನ್ನುವಂತಿದೆ ಎಂದಿದ್ದಾರೆ.

"ಲಿವ್-ಇನ್ ಸಂಬಂಧದ ಸಂಪೂರ್ಣ ಉದ್ದೇಶವೆಂದರೆ ಯಾವುದೇ ಶಾಸನಬದ್ಧ ಹೊಣೆಗಾರಿಕೆ ಇಲ್ಲದೆ ಇನ್ನೊಬ್ಬ ವ್ಯಕ್ತಿಯೊಂದಿಗೆ ವಾಸಿಸುವುದನ್ನು ಅನ್ವೇಷಿಸುವುದಾಗಿದೆ. ಅದನ್ನು ನೋಂದಾಯಿಸಬೇಕು ಎಂಬುದೇ ಸಹಜೀವನ ಬಯಸುವ ವ್ಯಕ್ತಿಗಳು ಒಂದಾಗುವುದನ್ನು ತಡೆಯುತ್ತದೆ. ಅಲ್ಲದೆ ಮಸೂದೆಯಡಿ ದಂಡ ಮತ್ತು ಶಿಕ್ಷೆಯನ್ನು ಕಲ್ಪಿಸುವುದು ಸಹಜೀವನಕ್ಕೆ ಮುಂದಾಗುವ ನಿರುತ್ಸಾಹಗೊಳಿಸುವುದಷ್ಟೇ ಅಲ್ಲದೆ ಮುಕ್ತ ಇಚ್ಛೆಯನ್ನು ಅಸಹನೀಯಗೊಳಿಸುತ್ತದೆ" ಎಂದು ಅವರು ಹೇಳುತ್ತಾರೆ.

[ಮಸೂದೆಯ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

civil code bill english_0001.pdf
Preview