Madurai Bench of Madras High Court  Madras High Court website
ಸುದ್ದಿಗಳು

ಐಟಿ ಅಧಿಕಾರಿಗಳ ಮೇಲೆ ಹಲ್ಲೆ: ಸಚಿವ ಸೆಂಥಿಲ್ ಬೆಂಬಲಿಗರೆನ್ನಲಾದ 15 ಮಂದಿಯ ಜಾಮೀನು ರದ್ದುಗೊಳಿಸಿದ ಮದ್ರಾಸ್ ಹೈಕೋರ್ಟ್

Bar & Bench

ಕಳೆದ ಮೇನಲ್ಲಿ ತಮಿಳುನಾಡಿನ ಕರೂರು ಜಿಲ್ಲೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದ ತೆರಿಗೆ ಅಧಿಕಾರಿಗಳ ಮೇಲೆ ದಾಳಿ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಸಚಿವ ವಿ ಸೆಂಥಿಲ್‌ ಬಾಲಜಿ ಅವರ ಬೆಂಬಲಿಗರೆನ್ನಲಾದ ಹದಿನೈದು ಜನರಿಗೆ ಸ್ಥಳೀಯ ನ್ಯಾಯಾಲಯ ನೀಡಿದ್ದ ಜಾಮೀನನ್ನು ಮದ್ರಾಸ್ ಹೈಕೋರ್ಟ್ ಈಚೆಗೆ ರದ್ದುಗೊಳಿಸಿದೆ.

ಜಾಮೀನು ಮಂಜೂರು ಮಾಡಲು ಕಾರಣ ಏನೆಂಬುದನ್ನು ವಿವರಿಸಲು ಮ್ಯಾಜಿಸ್ಟ್ರೇಟ್‌ ವಿಫಲರಾಗಿದ್ದು ಯಾಂತ್ರಿಕವಾಗಿ ಆದೇಶ ನೀಡಿದ್ದಾರೆ ಎಂದು ಹೈಕೋರ್ಟ್‌ ಮಧುರೈ ಪೀಠದ ನ್ಯಾಯಮೂರ್ತಿ ಜಿ ಇಳಂಗೋವನ್ ಅವರು ಜುಲೈ 28ರಂದು ನೀಡಿದ ಆದೇಶದಲ್ಲಿ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಜಾಮೀನು ಅರ್ಜಿಗಳನ್ನು ʼಹಿರಿಯ ನ್ಯಾಯಾಧೀಶರು ಹೊಸದಾಗಿ ನಿರ್ಧರಿಸಬೇಕು ಎಂದಿರುವ ನ್ಯಾಯಾಲಯ ಮತ್ತೊಮ್ಮೆ ವಿಚಾರಣೆ ನಡೆಸುವಂತೆ  ಕರೂರ್ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅವರಿಗೆ ಸೂಚಿಸಿದೆ.

“ಎಂದಿನಂತೆ ಆರೋಪ ಮತ್ತು ಪ್ರತ್ಯಾರೋಪಗಳಿದ್ದು ಅವುಗಳಲ್ಲಿ ಒಂದು ನಿಜವಾಗಿರುವುದರಿಂದ ಅದು ತನಿಖೆಯ ವಿಷಯವಾಗಿದೆ. ಜಾಮೀನು ಅರ್ಜಿ ಪರಿಗಣಿಸುವಾಗ ಆರೋಪಿಗಳ ವಿರುದ್ಧ ಯಾವುದೇ ಪ್ರಾಥಮಿಕ ಆಧಾರ ಇದೆಯೇ ಎಂಬುದನ್ನು ಪತ್ತೆಹಚ್ಚುವುದು ನ್ಯಾಯಾಲಯದ ಕರ್ತವ್ಯವಾಗಿದೆ. ಆದರೆ ಅರ್ಜಿದಾರರ ಪರ ವಕೀಲರು ಹೇಳಿರುವಂತೆ ಈ ತತ್ವವನ್ನು ವಿಚಾರಣಾ ನ್ಯಾಯಾಯಗಳು ಸಂಪೂರ್ಣ ನಿರ್ಲಕ್ಷಿಸುತ್ತವೆ. ವಕೀಲರ ಪ್ರಕಾರ ಹೀಗೆ ಜಾಮೀನಿಗೆ ಸಮ್ಮತಿಸಿದರೆ ಯಾವುದೇ ಅಧಿಕಾರಿ ಸುಗಮ, ನ್ಯಾಯಯುತ ಹಾಗೂ ಮುಕ್ತ ರೀತಿಯಲ್ಲಿ ಕಾರ್ಯ ನಿರ್ವಹಿಸಲಾಗದು. ಮೊದಲೇ ಹೇಳಿದಂತೆ, ಜಾಮೀನು ನೀಡುವಾಗ, ಕಾನೂನುಬಾಹಿರ ರೀತಿಯಲ್ಲಿ ಸಾರ್ವಜನಿಕ ಸೇವಕರ ಕರ್ತವ್ಯ ನಿರ್ವಹಣೆಗೆ  ಅಡ್ಡಿಪಡಿಸಿದ್ದನ್ನು ಗಂಭೀರವಾಗಿ ಪರಿಗಣಿಸಬೇಕು ಎಂಬುದರಲ್ಲಿ ಸಂದೇಹವಿಲ್ಲ. ಒಂದು ತುದಿಯಲ್ಲಿ ಸಮಾಜದ ಹಿತಾಸಕ್ತಿ ಇದ್ದರೆ ಇನ್ನೊಂದು ತುದಿಯಲ್ಲಿ ವೈಯಕ್ತಿಕ ಸ್ವಾತಂತ್ರ್ಯ ಇರುತ್ತದೆ”ಎಂದು ನ್ಯಾಯಾಲಯ ಹೇಳಿದೆ.

ಮೇ 26ರಂದು ಕರೂರಿನಲ್ಲಿ ಸಚಿವರ ಆಪ್ತರ ಮನೆಗಳಲ್ಲಿ ತಪಾಸಣೆ ನಡೆಸುತ್ತಿದ್ದಾಗ ಅವರ ಬೆಂಬಲಿಗರ ದಾಳಿಗೆ ತುತ್ತಾದ ಆದಾಯ ತೆರಿಗೆ ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಾಲಯ ಈ ಆದೇಶ ನೀಡಿದೆ. ಜಾಮೀನು ರದ್ದುಗೊಳಿಸುವಂತೆ ಅಧಿಕಾರಿಗಳು ಕೋರಿದ್ದರು.

ಕರೂರಿನ ಪ್ರಥಮ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಅವರು ನೀಡಿದ ಜಾಮೀನು ಆದೇಶ ರದ್ದುಗೊಳಿಸಿದ ಹೈಕೋರ್ಟ್,  ಆರೋಪಿಗಳು ವಿಚಾರಣಾ ನ್ಯಾಯಾಲಯದ ಮುಂದೆ ಶರಣಾಗುವಂತೆ ಸೂಚಿಸಿತು. ಸಿಜೆಎಂ ಅವರು ಜಾಮೀನು ಅರ್ಜಿಗಳನ್ನು ಜುಲೈ 31ರಂದು ಅಥವಾ ಗರಿಷ್ಠ ಮೂರು ದಿನಗಳ ಒಳಗೆ ಹೊಸದಾಗಿ ತೀರ್ಮಾನಿಸಬೇಕು ಎಂದು ಹೈಕೋರ್ಟ್‌ ಆದೇಶಿಸಿತು.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Smt_SN_Yogapriyangaa_v_Sub_Inspector.pdf
Preview