ರಾಜ್ಯ ಗ್ರಾಹಕರ ವಿವಾದಗಳ ಪರಿಹಾರ ಆಯೋಗ ಮತ್ತು ಗ್ರಾಹಕರ ನ್ಯಾಯಾಲಯಗಳಲ್ಲಿ ಖಾಲಿ ಇರುವ ಅಪಾರ ಹುದ್ದೆಗಳ ನೇಮಕಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಮಂಗಳವಾರ ನೋಟಿಸ್ ಜಾರಿ ಮಾಡಿದೆ.
ರಾಜ್ಯ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗ ಸೇರಿದಂತೆ ಎಲ್ಲಾ ಗ್ರಾಹಕರ ಒಕ್ಕೂಟಗಳಲ್ಲಿನ (ಮಹಿಳೆಯರೂ ಸೇರಿದಂತೆ) ಅಧ್ಯಕ್ಷ ಮತ್ತು ಸದಸ್ಯರ ಹುದ್ದೆಗಳನ್ನು ವಿಳಂಬ ಮಾಡದೇ ತುಂಬಲು ರಾಜ್ಯ ಸರ್ಕಾರಕ್ಕೆ ಆದೇಶಿಸುವಂತೆ ಕೋರಿ ಮೈಸೂರಿನ ವಿ ಆರ್ ರಘುನಾಥನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಖಾಲಿ ಇರುವ ಹಲವು ಹುದ್ದೆಗಳನ್ನು ಇದುವರೆಗೂ ತುಂಬಲಾಗಿಲ್ಲ. 2022ರಿಂದಲೂ ಹಲವು ಹುದ್ದೆಗಳು ಖಾಲಿ ಇವೆ ಎಂದು ಆದೇಶದಲ್ಲಿ ಪೀಠವು ಉಲ್ಲೇಖಿಸಿದ್ದು, ರಾಜ್ಯ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಲು ಸೂಚಿಸಿ, ವಿಚಾರಣೆಯನ್ನು ಆಗಸ್ಟ್ 5ಕ್ಕೆ ಮುಂದೂಡಿದೆ.
ಸರ್ಕಾರ ಖಾಲಿ ಹುದ್ದೆಗಳನ್ನು ತುಂಬುವವರೆಗೆ ಹಾಲಿ ಅಧ್ಯಕ್ಷರು ಮತ್ತು ಸದಸ್ಯರ ಸೇವೆ ಮುಂದುವರಿಸಬೇಕು ಎಂಬ ಮಧ್ಯಂತರ ಪರಿಹಾರ ನೀಡಲು ಹೈಕೋರ್ಟ್ ನಿರಾಕರಿಸಿದ್ದು, ಸರ್ಕಾರ ಆಕ್ಷೇಪಣೆ ಸಲ್ಲಿಸಿದ ಬಳಿಕ ಮಧ್ಯಂತರ ಪರಿಹಾರದ ಕೋರಿಕೆ ಪರಿಗಣಿಸಲಾಗುವುದು ಎಂದಿದೆ.
ಅರ್ಜಿದಾರರ ಪರ ವಕೀಲ ಪಿ ರುದ್ರಪ್ಪ ಅವರು “ರಾಜ್ಯ ಗ್ರಾಹಕರ ಪರಿಹಾರ ಆಯೋಗದ ಅಧ್ಯಕ್ಷರ ಅವಧಿ ಮೇ 17ಕ್ಕೇ ಮುಕ್ತಾಯಗೊಂಡಿದೆ. ಇದುವರೆಗೂ ಆ ಹುದ್ದೆಗೆ ಹೊಸ ಅಭ್ಯರ್ಥಿಯ ನೇಮಕ ಆಗಿಲ್ಲ. ಹೀಗಾಗಿ, ಹಾಲಿ ಇರುವ ಅಧ್ಯಕ್ಷರು ಮತ್ತು ಸದಸ್ಯರ ಸೇವೆಯನ್ನು ಮುಂದುವರಿಸಬೇಕು” ಎಂದು ಕೋರಿದರು. ಇದನ್ನು ನ್ಯಾಯಾಲಯ ಪುರಸ್ಕರಿಸಲಿಲ್ಲ.