ED and Bengaluru city civil court 
ಸುದ್ದಿಗಳು

ವಾಲ್ಮೀಕಿ ನಿಗಮದ ಹಣ ದುರ್ಬಳಕೆ ಪ್ರಕರಣ: ಆದೇಶ ಪಾಲಿಸದ ಕಾರಾಗೃಹ ಮಹಾನಿರ್ದೇಶಕರ ಖುದ್ದು ಹಾಜರಿಗೆ ಸೂಚಿಸಿದ ನ್ಯಾಯಾಲಯ

Bar & Bench

ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಸೇರಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಸತ್ಯನಾರಾಯಣ ವರ್ಮಾ ಅವರನ್ನು ಜಾರಿ ನಿರ್ದೇಶನಾಲಯದ ವಶಕ್ಕೆ ನೀಡುವ ಸಂಬಂಧ ಮಾಡಿರುವ ಆದೇಶ ಪಾಲಿಸದ ಹಿನ್ನೆಲೆಯಲ್ಲಿ ರಾಜ್ಯ ಕಾರಾಗೃಹ ಇಲಾಖೆಯ ಮಹಾನಿರ್ದೇಶಕರು ಮತ್ತು ಪೊಲೀಸ್‌ ವರಿಷ್ಠಾಧಿಕಾರಿಗೆ ಖುದ್ದು ನ್ಯಾಯಾಲಯದ ಮುಂದೆ ಹಾಜರಾಗಿ ವಿವರಣೆ ನೀಡುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸೋಮವಾರ ಆದೇಶಿಸಿದೆ.

ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಬೇರೆ ಬೇರೆ ಬ್ಯಾಂಕ್‌ ಖಾತೆಗಳಿಗೆ ವರ್ಗಾವಣೆ ಮಾಡಿ ದುರ್ಬಳಕೆ ಮಾಡಿರುವ ಪ್ರಕರಣದಲ್ಲಿ ಹೈದರಾಬಾದ್‌ನ ಫಸ್ಟ್‌ ಫೈನಾನ್ಸ್‌ ಕ್ರೆಡಿಟ್‌ ಕೋ ಅಪರೇಟಿವ್‌ ಸೊಸೈಟಿ (ಎಫ್‌ಎಫ್‌ಸಿಸಿಎಸ್‌ಎಲ್‌) ಅಧ್ಯಕ್ಷ ಸತ್ಯನಾರಾಯಣ ವರ್ಮಾ ಪ್ರಮುಖ ಅರೋಪಿಯಾಗಿದ್ದಾರೆ. ಪ್ರಕರಣದ ತನಿಖೆಗಾಗಿ ಅವರನ್ನು ತನ್ನ ವಶಕ್ಕೆ ನೀಡಬೇಕೆಂದು ಜಾರಿ ನಿರ್ದೇಶನಾಲಯ ಕೋರಿತ್ತು. ಇದನ್ನು ಪುರಸ್ಕರಿಸಿ ಬಾಡಿ ವಾರೆಂಟ್‌ ಮೂಲಕ ವಶಕ್ಕೆ ನೀಡುವಂತೆ ನ್ಯಾಯಾಲಯ ಕಾರಾಗೃಹ ಇಲಾಖೆಗೆ ಆದೇಶಿಸಿತ್ತು. ಆದರೆ, ಆದೇಶ ಪಾಲನೆಯಾಗದ ಹಿನ್ನೆಲೆಯಲ್ಲಿ ರಾಜ್ಯ ಕಾರಾಗೃಹ ಇಲಾಖೆಯ ಮಹಾನಿರ್ದೇಶಕರು ಮತ್ತು ಪೊಲೀಸ್‌ ವರಿಷ್ಠಾಧಿಕಾರಿಗೆ ಖುದ್ದು ನ್ಯಾಯಾಲಯದ ಮುಂದೆ ಹಾಜರಾಗಿ ಈ ಕುರಿತು ವಿವರಣೆ ನೀಡುವಂತೆ ಜನಪ್ರತಿನಿಧಿಗಳ ವಿಶೇಷ ಸತ್ರ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್‌ ಗಜಾನನ ಭಟ್‌ ಆದೇಶಿಸಿದರು

ಜಾರಿ ನಿರ್ದೇಶನಾಲಯದ ಪರವಾಗಿ ಹಾಜರಾಗಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನಕುಮಾರ್‌ ಅವರು “ರಾಜ್ಯ ಸರ್ಕಾರ ನೇಮಿಸಿರುವ ವಿಶೇಷ ತನಿಖಾ ದಳದ ವಶದಲ್ಲಿದ್ದ ಸತ್ಯನಾರಾಯಣ ವರ್ಮಾ ಅವರನ್ನು ಇ ಡಿ ವಶಕ್ಕೆ ಕೋರಿ ಜುಲೈ 22ರಂದು ಅರ್ಜಿ ಸಲ್ಲಿಸಲಾಗಿತ್ತು. ಇದನ್ನು ನ್ಯಾಯಾಲಯ ಪುರಸ್ಕರಿಸಿ, ಜುಲೈ 23ರಂದು ಸತ್ಯನಾರಾಯಣ ವರ್ಮಾ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ಜೈಲು ಅಧೀಕ್ಷಕರಿಗೆ ಸೂಚಿಸಿತ್ತು. ಇದನ್ನು ಪಾಲಿಸಲಾಗಿಲ್ಲ. ಹೀಗಾಗಿ, ಅಂದು ನ್ಯಾಯಾಲಯವು ಜೈಲಿನ ಅಧಿಕಾರಿಗಳಿಗೆ ಶೋಕಾಸ್‌ ನೋಟಿಸ್‌ ಜಾರಿ ಮಾಡಿತ್ತು ಎಂದರು.

ಅಂತೆಯೇ, “ವರ್ಮಾ ಅವರ ಎಸ್‌ಐಟಿ ಕಸ್ಟಡಿಯು ಆಗಸ್ಟ್‌ 3ರಂದು ಮುಗಿಯುವ ಹಿನ್ನೆಲೆಯಲ್ಲಿ ಆಗಸ್ಟ್‌ 1ರಂದೇ ಇ ಡಿ ಮತ್ತೊಮ್ಮೆ ಅರ್ಜಿ ಸಲ್ಲಿಸಿ, ವರ್ಮಾ ಅವರನ್ನು ಬಾಡಿ ವಾರೆಂಟ್‌ ಮೇಲೆ ತಮ್ಮ ವಶಕ್ಕೆ ನೀಡುವಂತೆ ಕೋರಿದೆ. ಅದರಂತೆ ನ್ಯಾಯಾಲಯವು ಆಗಸ್ಟ್‌ 5ರಂದು ವರ್ಮಾ ಅವರನ್ನು ತನ್ನ ಮುಂದೆ ಹಾಜರುಪಡಿಸಲು ಸೂಚಿಸಿತ್ತು. ಇಂದೂ ಸಹ ಜೈಲಿನ ಅಧಿಕಾರಿಗಳು ವರ್ಮಾರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿಲ್ಲ” ಎಂದರು.

ಆಗ ಪೀಠವು ಜೈಲಿನ ಅಧಿಕಾರಿಗಳು ಬೇರೆ ಪ್ರಕರಣದಲ್ಲಿ ವರ್ಮಾ ಅವರ ಅಗತ್ಯವಿರುವುದರಿಂದ ಅವರನ್ನು ಸದರಿ ಪೊಲೀಸ್‌ ಕಸ್ಟಡಿಗೆ ನೀಡಲಾಗಿದೆ ಎಂದು ಪ್ರಕರಣದ ವಿವರಗಳನ್ನು ಒಳಗೊಂಡ ಇ-ಮೇಲ್‌ ಕಳುಹಿಸಿದ್ದಾರೆ. ಇದನ್ನು ಒಪ್ಪಲಾಗದು. ನ್ಯಾಯಾಲಯದ ಆದೇಶ ಉಲ್ಲಂಘಿಸಿರುವುದರಿಂದ ಕಾರಾಗೃಹ ಇಲಾಖೆಯ ಪೊಲೀಸ್‌ ಮಹಾನಿರ್ದೇಶಕರು ಮತ್ತು ಜೈಲಿನ ಪೊಲೀಸ್‌ ವರಿಷ್ಠಾಧಿಕಾರಿ ಖುದ್ದು ನ್ಯಾಯಾಲಯದ ಮುಂದೆ ಹಾಜರಾಗಿ ವಿವರಣೆ ನೀಡಬೇಕು ಎಂದು ಆದೇಶಿಸಿ, ವಿಚಾರಣೆಯನ್ನು ಆಗಸ್ಟ್‌ 14ಕ್ಕೆ ಮುಂದೂಡಿತು.

ಈ ಮಧ್ಯೆ, ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಸಚಿವ ಬಿ ನಾಗೇಂದ್ರ ಅವರ ನ್ಯಾಯಾಂಗ ಬಂಧನವನ್ನು ಆಗಸ್ಟ್‌ 3ರಿಂದ ಅನ್ವಯಿಸಿ, ಆಗಸ್ಟ್‌ 14ರವರೆಗೆ ವಿಸ್ತರಿಸಲಾಗಿದೆ.

ಎಫ್‌ಎಫ್‌ಸಿಸಿಎಸ್‌ಎಲ್‌ ಅಧ್ಯಕ್ಷರಾದ ವರ್ಮಾ ಅವರನ್ನು ಎಸ್‌ಐಟಿ ಪೊಲೀಸರು ಜೂನ್‌ 3ರಂದು ಹೈದರಾಬಾದ್‌ನಲ್ಲಿ ಬಂಧಿಸಿದ್ದರು. ಎಫ್‌ಎಫ್‌ಸಿಸಿಎಸ್‌ಎಲ್‌ಗೆ ವರ್ಗಾವಣೆಯಾಗಿದ್ದ ವಾಲ್ಮೀಕಿ ನಿಗಮದ ಹಣದಲ್ಲಿ ಹತ್ತಾರು ಕೆಜಿ ಚಿನ್ನಾಭರಣ ಖರೀದಿಸಿ, ಪ್ರಕರಣದಲ್ಲಿ ಭಾಗಿಯಾಗಿರುವ ಇತರೆ ಆರೋಪಿಗಳಿಗೆ ಉಳಿಕೆ ಹಣ ಹಂಚಿ, ಬಾಕಿ ಉಳಿದ ಆಭರಣಗಳನ್ನು ತನ್ನಲ್ಲಿ ಇಟ್ಟುಕೊಂಡಿರುವ ಆರೋಪ ವರ್ಮಾ ಮೇಲಿದೆ.

ವಾಲ್ಮೀಕಿ ನಿಗಮದ ಹಣ ದುರ್ಬಳಕೆ ಪ್ರಕರಣ ಬೆಳಕಿಗೆ ಬರುತ್ತಲೇ ಬೆಂಗಳೂರಿನ ಹೈಗ್ರೌಂಡ್ಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ಆನಂತರ ರಾಜ್ಯ ಸರ್ಕಾರವು ಎಸ್‌ಐಟಿಗೆ ಪ್ರಕರಣ ವರ್ಗಾವಣೆ ಮಾಡಿತ್ತು. ಈ ಮಧ್ಯೆ, ಜಾರಿ ನಿರ್ದೇಶನಾಲಯವು ನಾಗೇಂದ್ರರನ್ನು ಬಂಧಿಸಿತ್ತು.