Congress MLA B Nagendra, ED & Karnataka HC 
ಸುದ್ದಿಗಳು

ವಾಲ್ಮೀಕಿ ನಿಗಮದ ಹಣ ದುರ್ಬಳಕೆ ಪ್ರಕರಣ: ರಾಜ್ಯ ಬಿಟ್ಟು ತೆರಳದಂತೆ ವಿಧಿಸಿದ್ದ ಷರತ್ತು ರದ್ದುಪಡಿಸಿದ ಹೈಕೋರ್ಟ್‌

ಯೋಜನೆ ಮತ್ತು ಸಾಂಖ್ಯಿಕ ಸಚಿವ ಬಿ ನಾಗೇಂದ್ರ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

Bar & Bench

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಹಗರಣದಲ್ಲಿ ಆರೋಪಿಯಾಗಿರುವ ಸಚಿವ ಬಿ ನಾಗೇಂದ್ರ ಅವರು ಪೂರ್ವಾನುಮತಿ ಇಲ್ಲದೇ ರಾಜ್ಯ ಬಿಟ್ಟು ತೆರಳುವಂತಿಲ್ಲ ಎಂದು ಜನಪ್ರತಿನಿಧಿಗಳ ಸತ್ರ ನ್ಯಾಯಾಲಯ ವಿಧಿಸಿದ್ದ ಷರತ್ತನ್ನು ಕರ್ನಾಟಕ ಹೈಕೋರ್ಟ್‌ ಗುರುವಾರ ರದ್ದುಪಡಿಸಿದೆ.

ಯೋಜನೆ ಮತ್ತು ಸಾಂಖ್ಯಿಕ ಸಚಿವ ಬಿ ನಾಗೇಂದ್ರ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

ವಿಚಾರಣೆ ವೇಳೆ ನಾಗೇಂದ್ರ ಪರ ಹಿರಿಯ ವಕೀಲ ಕೆ ಎನ್‌ ಫಣೀಂದ್ರ ಅವರು “ಅರ್ಜಿದಾರರು ಸದ್ಯ ರಾಜ್ಯ ಸರ್ಕಾರದ ಸಚಿವ ಸಂಪುಟ ದರ್ಜೆ ಸಚಿವರಾಗಿದ್ದಾರೆ. ತಮ್ಮ ಅಧಿಕೃತ ಕೆಲಸಗಳ ನಿಮಿತ್ತ ರಾಜ್ಯದ ಗಡಿ ಮೀರಿ ಹೊರ ರಾಜ್ಯಗಳಿಗೆ ತೆರಳಬೇಕಾಗುತ್ತದೆ. ಪ್ರತಿ ಬಾರಿಯೂ ಅವರು ವಿಚಾರಣಾ ನ್ಯಾಯಾಲಯದ ಮುಂದೆ ಹೋಗಿ ಅನುಮತಿ ಕೋರಲಾಗದು. ಅದಕ್ಕೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ, ಈ ಕುರಿತ ಷರತ್ತನ್ನು ರದ್ದುಪಡಿಸಬೇಕು” ಎಂದು ಕೋರಿದರು.

ಇದನ್ನು ಆಕ್ಷೇಪಿಸಿದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ ಅರವಿಂದ ಕಾಮತ್‌ “ಅರ್ಜಿದಾರರಿಗೆ 2024ರ ಅಕ್ಟೋಬರ್‌ನಲ್ಲೇ ಜಾಮೀನು ಮಂಜೂರಾಗಿದೆ. ಆನಂತರ ಅವರು ರಾಜ್ಯಬಿಟ್ಟು ತೆರಳಬೇಕಾದ ಪರಿಸ್ಥಿತಿ ಒದಗಿದಾಗಲೆಲ್ಲಾ ವಿಚಾರಣಾ ನ್ಯಾಯಾಲಯದ ಅನುಮತಿ ಪಡೆದೇ ಹೊರ ರಾಜ್ಯಕ್ಕೆ ಪ್ರಯಾಣ ಬೆಳೆಸಿದ್ದಾರೆ. ಆ ವಿಧಾನವನ್ನು ಈಗಲೂ ಅನುಸರಿಸಬಹುದು. ಅದು ಬಿಟ್ಟು ಷರತ್ತು ರದ್ದುಪಡಿಸುವಂತೆ ಕೋರುತ್ತಿರುವುದು ಸರಿಯಲ್ಲ” ಎಂದರು.

“ನಾಗೇಂದ್ರ ಅವರು ಸಚಿವರಾಗಿರುವ ಹಿನ್ನೆಲೆಯಲ್ಲಿ ಅವರ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲಾಗದು. ಆದರೆ, ಆ ಸ್ವಾತಂತ್ರ್ಯವನ್ನು ನಿಯಂತ್ರಣ ಮಾಡಬಹುದು. ಆದಾಗ್ಯೂ, ಅವರು ಈ ಮನವಿಯನ್ನು ಅವರು ವಿಚಾರಣಾ ನ್ಯಾಯಾಲಯದ ಮುಂದೆಯೇ ಸಲ್ಲಿಸಬಹುದಾಗಿತ್ತು” ಎಂದು ಆಕ್ಷೇಪಿಸಿದರು.

ವಾದ–ಪ್ರತಿವಾದ ಆಲಿಸಿದ ಪೀಠವು “ಅರ್ಜಿದಾರರು ಸದ್ಯ ರಾಜ್ಯ ಸರ್ಕಾರದ ಸಂಪುಟ ದರ್ಜೆ ಸಚಿವರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಅವರು ರಾಜ್ಯದ ಗಡಿ ಬಿಟ್ಟು ತೆರಳಬೇಕಾಗುತ್ತದೆ. ಅವರಿಗೆ ದೇಶದಾದ್ಯಂತ ಮುಕ್ತವಾಗಿ ಪ್ರಯಾಣಿಸಲು ಅನುಮತಿ ನೀಡದೇ ಹೋದರೆ, ಅವರ ಸ್ವಾತಂತ್ರ್ಯ ಹಾಗೂ ಸದ್ಯ ಹೊಂದಿರುವ ಸ್ಥಾನಮಾನವನ್ನು ಮೊಟಕಗೊಳಿಸಿದಂತಾಗುತ್ತದೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿ ವಿಚಾರಣಾ ನ್ಯಾಯಾಲಯದ ಜಾಮೀನು ಆದೇಶದಲ್ಲಿನ ಮೂರನೇ ಷರತ್ತನ್ನು ರದ್ದುಪಡಿಸಿತು.

ಇದೇ ವೇಳೆ ಪೀಠವು “ಅರ್ಜಿದಾರರು ಕರ್ನಾಟಕ ರಾಜ್ಯ ಬಿಟ್ಟು ಹೊರಗೆ ತೆರಳಬಾರದು ಎಂಬ ಸತ್ರ ನ್ಯಾಯಾಲಯ ವಿಧಿಸಿರುವ ಷರತ್ತನ್ನು ಮಾತ್ರವೇ ರದ್ದುಪಡಿಸಲಾಗುತ್ತಿದೆ. ಆದರೆ, ವಿಚಾರಣಾ ನ್ಯಾಯಾಲಯ ಅಥವಾ ಹೈಕೋರ್ಟ್‌ ಅನುಮತಿಯಿಲ್ಲದೆ ಯಾವುದೇ ಸಂದರ್ಭದಲ್ಲೂ ಅವರು ದೇಶಬಿಟ್ಟು ತೆರಳುವಂತಿಲ್ಲ” ಎಂದು ಸ್ಪಷ್ಟಪಡಿಸಿತು.

ವಿಶೇಷ ಸತ್ರ ನ್ಯಾಯಾಲಯವು 2024ರ ಅಕ್ಟೋಬರ್ 14ರಂದು ಜಾಮೀನು ಮಂಜೂರು ಮಾಡಿದಾಗ, ಪೂರ್ವಾನುಮತಿ ಇಲ್ಲದೆ ರಾಜ್ಯಬಿಟ್ಟು ತೆರಳುವಂತಿಲ್ಲ ಎಂದು ನಾಗೇಂದ್ರ ಅವರಿಗೆ ಷರತ್ತು ವಿಧಿಸಿತ್ತು.