KMVSTDCL and Karnataka HC 
ಸುದ್ದಿಗಳು

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ: ಆರೋಪಿ ಸತ್ಯನಾರಾಯಣ ವರ್ಮಾ ಅರ್ಜಿ ವಜಾಗೊಳಿಸಿದ ಹೈಕೋರ್ಟ್‌

ಸತ್ಯನಾರಾಯಣ ವರ್ಮಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪ್ರಕಟಿಸಿತು.

Bar & Bench

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಹಗರಣದ ಮೊದಲ ಆರೋಪಿ ಹೈದರಾಬಾದ್‌ನ ಸತ್ಯನಾರಾಯಣ ವರ್ಮಾ ಅವರು ತಮ್ಮ ವಿರುದ್ಧದ ಕ್ರಿಮಿನಲ್‌ ಪ್ರಕರಣ ರದ್ದತಿ ಕೋರಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ಸೋಮವಾರ ವಜಾಗೊಳಿಸಿದೆ.

ಸತ್ಯನಾರಾಯಣ ವರ್ಮಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಇಂದು ಪ್ರಕಟಿಸಿತು.

“ಗುರುತರ ಆರೋಪದ ಪ್ರಕರಣಗಳಲ್ಲಿ, ಆರೋಪಿಗಳು ಪೂರ್ಣ ಪ್ರಮಾಣದ ವಿಚಾರಣೆಗೂ ಮುನ್ನವೇ ಹೊಸ ಅಂಶಗಳಿಲ್ಲದ, ಪುನರಾವರ್ತಿತ ಅಂಶಗಳನ್ನೇ ಮುಂದೆ ಮಾಡಿಕೊಂಡು ತಾವು ಸಾಚಾ ಎಂದು ನಿರೂಪಿಸಿಕೊಳ್ಳುವ ಅತ್ಯಾತುರದ ಪ್ರಯತ್ನಗಳಿಗೆ ಸೊಪ್ಪು ಹಾಕಲು ಆಗದು” ಎಂಬ ಪೀಠ ಕಟು ಅಭಿಪ್ರಾಯ ವ್ಯಕ್ತಪಡಿಸಿದೆ.

“ಒಂದು ಅರ್ಜಿಯಲ್ಲಿ ಪರಿಹಾರ ದೊರಕದಿದ್ದರೆ ಬೇರೊಂದು ಅಂಶಗಳನ್ನು ಹುಡುಕಿಕೊಂಡು ಮತ್ತೊಂದು ಹೊಸ ಅರ್ಜಿ ಸಲ್ಲಿಸಿ ರಿಟ್‌ ವ್ಯಾಪ್ತಿಯ ವಿಶಾಲತೆ ಜಾಲಾಡುವುದು ಸಲ್ಲದ ನಡೆ. ಇಂತಹ ಹೆಜ್ಜೆಗಳಿಂದ ಪ್ರಕರಣದ ವಿಚಾರಣಾ ಗಂಭೀರತೆಗೆ ನಷ್ಟವುಂಟಾಗುತ್ತದೆ” ಎಂದು ಪೀಠ ವಿವರಿಸಿದೆ.

ಸತ್ಯನಾರಾಯಣ ವರ್ಮಾ ವಿರುದ್ಧ ಐಪಿಸಿ ಸೆಕ್ಷನ್‌ 120ಬಿ, 409, 420, 467, 468, 471 ಮತ್ತು ಭ್ರಷ್ಟಾಚಾರ ನಿಗ್ರಹ ಕಾಯಿದೆ ಸೆಕ್ಷನ್‌ 13(1), 13(2)ರ ಅನ್ವಯ ವಿಚಾರಣಾ ನ್ಯಾಯಾಲಯಕ್ಕೆ ವಿಶೇಷ ತನಿಖಾ ದಳವು ಆರೋಪ ಪಟ್ಟಿ ಸಲ್ಲಿಸಿದೆ.

ಪ್ರಾಸಿಕ್ಯೂಷನ್‌ ಪರ ರಾಜ್ಯ ಹೆಚ್ಚುವರಿ ಪ್ರಾಸಿಕ್ಯೂಟರ್‌ ಬಿ ಎನ್‌ ಜಗದೀಶ್‌ ಮತ್ತು ನಿಗಮದ ಪರ ಹಿರಿಯ ವಕೀಲ ವಿಕ್ರಮ ಹುಯಿಲಗೋಳ ವಾದಿಸಿದ್ದರು.