ED and B Nagendra 
ಸುದ್ದಿಗಳು

ವಾಲ್ಮೀಕಿ ನಿಗಮದ ಹಣ ದುರ್ಬಳಕೆ: ಮಾಜಿ ಸಚಿವ ನಾಗೇಂದ್ರ, ನೆಕ್ಕುಂಟಿ ನಾಗರಾಜ್‌ ಜಾಮೀನು ಆದೇಶ ಕಾಯ್ದಿರಿಸಿದ ನ್ಯಾಯಾಲಯ

ಎಸ್‌ಐಟಿ ದಾಖಲಿಸಿರುವ ಪ್ರಕರಣದಲ್ಲಿ 12ನೇ ಆರೋಪಿಯಾಗಿರುವ ನೆಕ್ಕುಂಟಿ ನಾಗರಾಜ್‌ಗೆ ಕರ್ನಾಟಕ ಹೈಕೋರ್ಟ್‌ ಈಚೆಗೆ ಜಾಮೀನು ಮಂಜೂರು ಮಾಡಿದೆ.

Bar & Bench

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ (ಕೆಎಂವಿಎಸ್‌ಟಿಡಿಸಿಎಲ್‌) ಬ್ಯಾಂಕ್ ಖಾತೆಯಿಂದ ಅಕ್ರಮವಾಗಿ ₹95 ಕೋಟಿ ಹಣ ವರ್ಗಾಯಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ದಾಖಲಿಸಿರುವ ಪ್ರಕರಣದಲ್ಲಿ ಮಾಜಿ ಸಚಿವ ಬಿ ನಾಗೇಂದ್ರ ಮತ್ತು ಅವರ ಆಪ್ತ ನೆಕ್ಕುಂಟಿ ನಾಗರಾಜ್‌ ಅವರ ಜಾಮೀನು ಅರ್ಜಿಗಳ ಆದೇಶವನ್ನು ಜನಪ್ರತಿನಿಧಿಗಳ ವಿಶೇಷ ಸತ್ರ ನ್ಯಾಯಾಲಯವು ಬುಧವಾರ ಕಾಯ್ದಿರಿಸಿದ್ದು, ಸೋಮವಾರ (ಅ.14) ಆದೇಶ ಪ್ರಕಟಿಸುವುದಾಗಿ ತಿಳಿಸಿದೆ.

ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿರುವ ನಾಗೇಂದ್ರ ಮತ್ತು ನೆಕ್ಕುಂಟಿ ನಾಗರಾಜ್ ಸಲ್ಲಿಸಿರುವ ಜಾಮೀನು ಅರ್ಜಿಗಳ ವಿಚಾರಣೆಯನ್ನು ವಿಶೇಷ ಸತ್ರ ನ್ಯಾಯಾಧೀಶರಾದ ಸಂತೋಷ್‌ ಗಜಾನನ ಭಟ್‌ ಅವರು ನಡೆಸಿದರು.

ಈ ಪ್ರಕರಣದಲ್ಲಿ ಸೆಪ್ಟೆಂಬರ್‌ 9ರಂದು ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ಕಾಯಿದೆಯ ಸೆಕ್ಷನ್‌ 3 ಮತ್ತು 4ರ ಅಡಿಯ ಆರೋಪಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ 4,970 ಪುಟಗಳ ಆರೋಪ ಪಟ್ಟಿ ಹಾಗೂ 144 ಪುಟಗಳ ದೂರನ್ನು ಸಲ್ಲಿಸಿತ್ತು. ಪ್ರಕರಣದಲ್ಲಿ ನಾಗೇಂದ್ರ ಅವರನ್ನು ಮೊದಲ ಆರೋಪಿಯನ್ನಾಗಿ ಮಾಡಲಾಗಿದೆ. ಈ ಮಧ್ಯೆ, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ದಾಖಲಿಸಿರುವ ಪ್ರಕರಣದಲ್ಲಿ 12ನೇ ಆರೋಪಿಯಾಗಿರುವ ನೆಕ್ಕುಂಟಿ ನಾಗರಾಜ್‌ಗೆ ಕರ್ನಾಟಕ ಹೈಕೋರ್ಟ್‌ ಈಚೆಗೆ ಜಾಮೀನು ಮಂಜೂರು ಮಾಡಿದೆ.

ನಿಗಮದ ಖಾತೆಯಿಂದ ಒಟ್ಟಾರೆ 84 ಕೋಟಿಯ ಅಕ್ರಮವಾಗಿ ಬಳಕೆ ಮಾಡಲಾಗಿದೆ. ಮಾಜಿ ಸಚಿವ ನಾಗೇಂದ್ರ ಅವರು ನಕಲಿ ಖಾತೆ ಸೃಷ್ಟಿಸಲು ಸೂಚಿಸಿ, ಹಣ ವರ್ಗಾವಣೆ ಮಾಡಲು ನಿರ್ದೇಶಿಸಿದ್ದಾರೆ. ನಾಗೇಂದ್ರ ಸೂಚನೆಯಂತೆ ಪದ್ಮನಾಭರಿಂದ ಹಣ ವರ್ಗಾವಣೆಯಾಗಿದೆ. ಈ ಪ್ರಕರಣದಲ್ಲಿ ನಾಗೇಂದ್ರ ಒಳಸಂಚು ರೂಪಿಸಿದ್ದು, ಆನಂತರ ಸಾಕ್ಷ್ಯ ನಾಶಕ್ಕೆ ಪ್ರಯತ್ನಿಸಿದ್ದಾರೆ. ಆನಂತರ ವಸಂತ ನಗರದ ಶಾಂಗ್ರಿಲಾ ಹೋಟೆಲ್‌ನಲ್ಲಿ ನಾಗೇಂದ್ರ ಸಭೆ ನಡೆಸಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮನಕ್ಕೆ ಪದ್ಮನಾಭ ಅವರನ್ನು ನಾಗೇಂದ್ರ ಆಪ್ತನಾದ ನೆಕ್ಕಂಟಿ ನಾಗರಾಜ್‌ ಮೂಲಕ ನೇಮಕ ಮಾಡಲಾಗಿತ್ತು ಎಂದು ಆರೋಪಿಸಲಾಗಿದೆ.

ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಬಳಕೆ ಮಾಡಲಾಗಿದೆ. ನಾಗೇಂದ್ರನ ಆಪ್ತ ಸಹಾಯಕನಾದ 8ನೇ ಆರೋಪಿ ವಿಜಯ್ ಕುಮಾರ್ ಮೊಬೈಲಿನಲ್ಲಿ ಹಣದ ಮೊತ್ತ, ಯಾರಿಗೆಲ್ಲಾ ಪೂರೈಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಬಳ್ಳಾರಿ ಲೋಕಸಭಾ ಚುನಾವಣೆಗೆ 20.19 ಕೋಟಿ ರೂಪಾಯಿ ಬಳಕೆ ಮಾಡಲಾಗಿದೆ ಎಂದು ವಿವರಿಸಲಾಗಿದೆ. ಈ ಸಂಬಂಧ ಎಲ್ಲಾ ಆರೋಪಿಗಳ ಹೇಳಿಕೆ ದಾಖಲಿಸಲಾಗಿದೆ ಎನ್ನಲಾಗಿದೆ.

ಪ್ರಕರಣದಲ್ಲಿ ಸದ್ಯ 15 ಸಾಕ್ಷ್ಯಗಳ ಕಲೆ ಹಾಕಲಾಗಿದ್ದು, ನಾಗೇಂದ್ರ 5.26 ಕೋಟಿ ರೂಪಾಯಿ ಬಳಕೆ ಮಾಡಿದ್ದಾರೆ. ಆದರೆ, ಈ ಸಂಬಂಧ ಉತ್ತರಿಸಲು ನಾಗೇಂದ್ರ ನಿರಾಕರಿಸಿದ್ದಾರೆ. ಸಣ್ಣ ಕೆಲಸಗಳಿಗೆ ಹೆಚ್ಚಿನ ಮೊತ್ತದ ನಕಲಿ ಬಿಲ್‌ಗಳನ್ನು ಸೃಷ್ಟಿಸಲಾಗಿದೆ. ಹಗರಣದಲ್ಲಿ ಆರ್ಥಿಕ ಇಲಾಖೆ ಅಧಿಕಾರಿಗಳು ಭಾಗಿಯಾಗಿರುವ ಬಗ್ಗೆ ಜಾರಿ ನಿರ್ದೇಶನಾಲಯ ಸಂಶಯ ವ್ಯಕ್ತಪಡಿಸಿದೆ ಎನ್ನಲಾಗಿದೆ.

ಬಳ್ಳಾರಿ ಗ್ರಾಮೀಣ ಶಾಸಕರಾದ ಬಿ ನಾಗೇಂದ್ರ ಅವರು ಜುಲೈ 22ರಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇ ಡಿ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನಕುಮಾರ್‌ ಮತ್ತು ನಾಗೇಂದ್ರ ಪರವಾಗಿ ಹಿರಿಯ ವಕೀಲ ಸಿ ವಿ ನಾಗೇಶ್‌ ಅವರು ವಾದಿಸಿದ್ದಾರೆ.