ಜ್ಞಾನವಾಪಿ, ವಾರಣಾಸಿ ಜಿಲ್ಲಾ ನ್ಯಾಯಾಲಯ 
ಸುದ್ದಿಗಳು

ಹಿಂದೂ ದಾವೆದಾರರಿಗೆ ಜ್ಞಾನವಾಪಿ ಮಸೀದಿ ದಕ್ಷಿಣ ನೆಲಮಾಳಿಗೆ ಹಸ್ತಾಂತರಿಸಲು ವಾರಾಣಸಿ ನ್ಯಾಯಾಲಯದ ಆದೇಶ; ಪೂಜೆಗೆ ಅಸ್ತು

ಜ್ಞಾನವಾಪಿ ಮಸೀದಿ ಆವರಣದಲ್ಲಿರುವ 'ಸೋಮನಾಥ ವ್ಯಾಸ್' ತೆಹ್‌ಖಾನಾಗೆ (ನೆಲಮಾಳಿಗೆ) ಸಂಬಂಧಿಸಿದ ಪ್ರಕರಣ ಇದಾಗಿದ್ದು 1993ರವರೆಗೆ, ವ್ಯಾಸ್ ಕುಟುಂಬ ನೆಲಮಾಳಿಗೆಯಲ್ಲಿ ಧಾರ್ಮಿಕ ಚಟುವಟಿಕೆ ನಡೆಸುತ್ತಿತ್ತು, ನಂತರ ಇದು ಸ್ಥಗಿತವಾಗಿತ್ತು.

Bar & Bench

ಜ್ಞಾನವಾಪಿ ಮಸೀದಿ ಇರುವ ಭೂಮಿಯ ಧಾರ್ಮಿಕ ಸ್ವರೂಪ ಕುರಿತಂತೆ ನ್ಯಾಯಾಲಯದಲ್ಲಿ ಬಿರುಸಿನ ವಿಚಾರಣೆ ನಡೆಯುತ್ತಿರುವ ಮಧ್ಯೆಯೇ ಜ್ಞಾನವಾಪಿ ಮಸೀದಿಯ ದಕ್ಷಿಣ ನೆಲಮಾಳಿಗೆಯನ್ನು ಹಿಂದೂಗಳು ಪೂಜೆ ಸಲ್ಲಿಸಲು ಹಸ್ತಾಂತರಿಸಬೇಕು ಎಂದು ವಾರಾಣಸಿ ನ್ಯಾಯಾಲಯ ನಿರ್ದೇಶನ ನೀಡಿದೆ.

ಈ ಪ್ರದೇಶವನ್ನು ಹಿಂದೂ ಪಕ್ಷಕಾರರು ಮತ್ತು ಕಾಶಿ ವಿಶ್ವನಾಥ ಟ್ರಸ್ಟ್ ಮಂಡಳಿಯು ಸೂಚಿಸುವ ಅರ್ಚಕರಿಗೆ ಪೂಜೆ ಪುನಸ್ಕಾರ ಸಲ್ಲಿಸಲು ಹಸ್ತಾಂತರಿಸಬೇಕು. ಈ ಉದ್ದೇಶಕ್ಕಾಗಿ, ಬೇಲಿಯನ್ನು ಸಹ ನಿರ್ಮಿಸಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ವಾರಣಾಸಿ ಜಿಲ್ಲೆಯ ಥಾನಾ ಚೌಕ್‌ನ ಸೆಟಲ್ಮೆಂಟ್ ಪ್ಲಾಟ್ ಸಂಖ್ಯೆ 9130 ರಲ್ಲಿರುವ ಕಟ್ಟಡದ ದಕ್ಷಿಣ ಭಾಗದಲ್ಲಿರುವ ನೆಲಮಾಳಿಗೆಯನ್ನು ವಾದಿಗೆ ಹಾಗೂ ಕಾಶಿ ವಿಶ್ವನಾಥ ಟ್ರಸ್ಟ್ ಮಂಡಳಿ ಹೆಸರಿಸುವ ಅರ್ಚಕರಿಗೆ ಹಸ್ತಾಂತರಿಸುವಂತೆ ವಾರಣಾಸಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ನಿರ್ದೇಶಿಸಲಾಗಿದೆ. ಪೂಜೆ, ರಾಗ-ಭೋಗಕ್ಕಾಗಿ ನೆಲಮಾಳಿಗೆಯಲ್ಲಿರುವ ವಿಗ್ರಹಗಳನ್ನು ಹಸ್ತಾಂತರಿಸಬೇಕು. ಈ ಉದ್ದೇಶಕ್ಕಾಗಿ, ಕಬ್ಬಿಣದ ಬೇಲಿ ಇತ್ಯಾದಿಗಳನ್ನು 7 ದಿನಗಳಲ್ಲಿ ನಿರ್ಮಿಸಬೇಕು" ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಜ್ಞಾನವಾಪಿ ಮಸೀದಿ ಇರುವವ ವಿವಾದಿತ ಭೂಮಿಯ 'ತೆಹ್ಖಾನಾ'ದಲ್ಲಿ (ನೆಲಮಾಳಿಗೆ) ಪೂಜಾ ಹಕ್ಕುಗಳನ್ನು ಕೋರಿ ಹಿಂದೂ ಪಕ್ಷಕಾರರು ಸಲ್ಲಿಸಿದ್ದ ಮನವಿಗೆ ಪ್ರತಿಕ್ರಿಯೆಯಾಗಿ ಈ ಆದೇಶ ಹೊರಡಿಸಲಾಗಿದೆ.

ಈ ಅಂಶಕ್ಕೆ ಸಂಬಂಧಿಸಿದಂತೆ ವಾದ ಆಲಿಸಿದ್ದ ನ್ಯಾ. ಎ ಕೆ ವಿಶ್ವೇಶ ಅವರು ನಿನ್ನೆ (ಜ. 30) ತೀರ್ಪು ಕಾಯ್ದಿರಿಸಿದ್ದರು.

ಪ್ರಕರಣ ಜ್ಞಾನವಾಪಿ ಮಸೀದಿ ಆವರಣದಲ್ಲಿರುವ 'ಸೋಮನಾಥ ವ್ಯಾಸ್' ತೆಹ್‌ಖಾನಾಗೆ (ನೆಲಮಾಳಿಗೆ) ಸಂಬಂಧಿಸಿದ ಪ್ರಕರಣ ಇದಾಗಿದ್ದು 1993ರವರೆಗೆ, ವ್ಯಾಸ್ ಕುಟುಂಬ ನೆಲಮಾಳಿಗೆಯಲ್ಲಿ ಧಾರ್ಮಿಕ ಸಮಾರಂಭ ನಡೆಸುತ್ತಿತ್ತು. ನಂತರ ಈ ಧಾರ್ಮಿಕ ಆಚರಣೆ ಸ್ಥಗಿತವಾಗಿತ್ತು. ಮುಲಾಯಂ ಸಿಂಗ್ ಯಾದವ್ ನೇತೃತ್ವದ ಅಂದಿನ ಸರ್ಕಾರವು ನವೆಂಬರ್ 1993 ರ ನಂತರ ಆ ಸ್ಥಳದಲ್ಲಿ ಪೂಜೆ ನಿಷೇಧಿಸಿತ್ತು. 17ನೇ ಶತಮಾನದಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬ್ ಆಳ್ವಿಕೆಯಲ್ಲಿ ದೇವಾಲಯದ ಒಂದು ಭಾಗವನ್ನು ನಾಶಪಡಿಸಲಾಗಿದೆ ಎಂಬುದು ಹಿಂದೂ ಪಕ್ಷಕಾರರ ವಾದವಾಗಿತ್ತು.

ಆದರೆ, ಮಸೀದಿ ಔರಂಗಜೇಬನ ಆಳ್ವಿಕೆಗಿಂತ ಮುಂಚಿನದು ಕಾಲಾನಂತರದಲ್ಲಿ ಇದು ವಿವಿಧ ಬದಲಾವಣೆಗಳಿಗೆ ಒಳಪಟ್ಟಿದೆ ಎಂದು ಮುಸ್ಲಿಂ ಪಕ್ಷಕಾರರು ಸಮರ್ಥಿಸಿಕೊಂಡಿದ್ದರು.

ವುಜುಖಾನಾ ಸಮೀಕ್ಷೆಗೆ ಕೋರಿಕೆ; ಮುಸ್ಲಿಂ ಪಕ್ಷಕಾರರಿಗೆ ನೋಟಿಸ್‌: ಮೇಲಿನ ಈ ಬೆಳವಣಿಗೆಗಳ ನಡುವೆಯೇ ವಾರಣಾಸಿಯ ಜ್ಞಾನವಾಪಿ ಮಸೀದಿ ಆವರಣದಲ್ಲಿರುವ ವುಜುಖಾನಾ ಪ್ರದೇಶದ ಎಎಸ್ಐ ಸಮೀಕ್ಷೆಯನ್ನು ಕೋರಿ ಹಿಂದೂ ಪಕ್ಷಕಾರರೊಬ್ಬರು ಸಲ್ಲಿಸಿದ ಮನವಿಗೆ ಪ್ರತಿಕ್ರಿಯೆ ನೀಡುವಂತೆ ಅಲಾಹಾಬಾದ್ ಹೈಕೋರ್ಟ್ ಇಂದು ಅಂಜುಮನ್ ಇಂತೆಜಾಮಿಯಾ ಮಸೀದಿ ಸಮಿತಿಗೆ (ಮುಸ್ಲಿಂ ಪಕ್ಷಕಾರ) ನೋಟಿಸ್ ನೀಡಿದೆ.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Gyanvapi Tehkhana Handover for Worship Order.pdf
Preview