Gyanvapi Mosque and the ancient temple Varanasi  
ಸುದ್ದಿಗಳು

ಜ್ಞಾನವಾಪಿ ಮಸೀದಿ ಪ್ರಕರಣ: ಪೂಜೆ ಸಲ್ಲಿಕೆಗೆ ಕೋರಿರುವ ಮನವಿಯ ವಿಚಾರಣಾ ಅರ್ಹತೆ ಬಗ್ಗೆ ಇಂದು ತೀರ್ಪು

ಆಗಸ್ಟ್ 24ರಂದು ಪ್ರಕರಣದ ವಿಚಾರಣೆ ನಡೆಸಿದ್ದ ವಾರಾಣಸಿ ಜಿಲ್ಲಾ ನ್ಯಾಯಾಲಯದ ನ್ಯಾ. ಎ ಕೆ ವಿಶ್ವೇಶ್ ಅವರು ತೀರ್ಪನ್ನು ಇಂದಿಗೆ ಕಾಯ್ದಿರಿಸಿದ್ದರು.

Bar & Bench

ಕಾಶಿ ವಿಶ್ವನಾಥ- ಜ್ಞಾನವಾಪಿ ಮಸೀದಿ ಆವರಣದಲ್ಲಿದೆ ಎನ್ನಲಾದ ಧೇವತಾ ಮೂರ್ತಿಗಳಿಗೆ ಪ್ರತಿನಿತ್ಯ ಪೂಜೆ ಸಲ್ಲಿಸಲು ಅವಕಾಶ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಗೆ ಯೋಗ್ಯವೋ ಅಲ್ಲವೋ ಎಂಬ ಕುರಿತಂತೆ ವಾರಾಣಸಿ ಜಿಲ್ಲಾ ನ್ಯಾಯಾಲಯ ಇಂದು ತೀರ್ಪು ನೀಡಲಿದೆ.

ಮಸೀದಿಯಲ್ಲಿ ಹಿಂದೂ ದೈವಗಳ ವಿಗ್ರಹಗಳಿದ್ದು ಅವುಗಳ ನಿತ್ಯ ಪೂಜೆಗೆ ಅವಕಾಶ ಕೋರಿ ಹಿಂದೂ ಪಕ್ಷಕಾರರು ಸಲ್ಲಿಸಿದ್ದ ಅರ್ಜಿಯ ಕುರಿತಂತೆ ಆಗಸ್ಟ್‌ 24ರಂದು ವಿಚಾರಣೆ ನಡೆಸಿದ್ದ ಜಿಲ್ಲಾ ನ್ಯಾಯಾಧೀಶ ಎ ಕೆ ವಿಶ್ವೇಶ್‌ ಅವರು ತೀರ್ಪನ್ನು ಇಂದಿಗೆ ಕಾಯ್ದಿರಿಸಿದ್ದರು.

ಆಗಸ್ಟ್‌ 24ರ ವಿಚಾರಣೆ ವೇಳೆ ಮುಸ್ಲಿಂ ಪಕ್ಷಕಾರರ ಪರ ವಕೀಲ ಶಮೀಮ್‌ ಅಹಮದ್‌ ಜ್ಞಾನವಾಪಿ ಮಸೀದಿ ವಕ್ಫ್‌ ಆಸ್ತಿಯಾಗಿದ್ದು ನ್ಯಾಯಾಲಯಕ್ಕ ಪ್ರಕರಣದ ವಿಚಾರಣೆ ನಡೆಸುವ ಅಧಿಕಾರ ವ್ಯಾಪ್ತಿ ಇಲ್ಲ ಎಂದಿದ್ದರು. ಮತ್ತೊಂದೆಡೆ ಹಿಂದೂ ಪಕ್ಷಕಾರರ ಪರ ವಾದ ಮಂಡಿಸಿದ್ದ ವಕೀಲ ಮದನ್‌ ಮೋಹನ್‌ ಯಾದವ್‌ “ಜ್ಞಾನವಾಪಿ ಮಸೀದಿಯಲ್ಲ ಅದೊಂದು ದೇವಾಲಯದ ಭಾಗ ಎಂದಿದ್ದರು. 1991ರ ಪೂಜಾ ಸ್ಥಳ ಕಾಯಿದೆ ಈ ಪ್ರಕರಣಕ್ಕೆ ಅನ್ವಯವಾಗದು ಎಂದಿದ್ದರು.

ತೀರ್ಪು ಪ್ರಕಟವಾಗುವ ಹಿನ್ನೆಲೆಯಲ್ಲಿ ವಾರಾಣಸಿ ನ್ಯಾಯಾಲಯ ಸೇರಿದಂತೆ ಜಿಲ್ಲೆಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಸೆಕ್ಷನ್ 144 ಜಾರಿಗೊಳಿಸಲು ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಪೊಲೀಸ್‌ ಆಯುಕ್ತ ಸತೀಶ್‌ ಗಣೇಶ್‌ ಅವರು ಭಾನುವಾರ ಮಾಹಿತಿ ನೀಡಿದ್ದಾರೆ.