P Varavara Rao
P Varavara Rao 
ಸುದ್ದಿಗಳು

ಭೀಮಾ ಕೋರೆಗಾಂವ್ ಪ್ರಕರಣ: ಕವಿ ವರವರ ರಾವ್‌ಗೆ ವೈದ್ಯಕೀಯ ಕಾರಣಗಳ ಹಿನ್ನೆಲೆಯಲ್ಲಿ ಜಾಮೀನು ನೀಡಿದ ಸುಪ್ರೀಂ ಕೋರ್ಟ್

Bar & Bench

ಭೀಮಾ ಕೋರೆಗಾಂವ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ 2018 ರಲ್ಲಿ ಬಂಧಿತರಾಗಿದ್ದ ತೆಲುಗು ಕವಿ, ಹೋರಾಟಗಾರ ವರವರ ರಾವ್ ಅವರಿಗೆ ವೈದ್ಯಕೀಯ ಕಾರಣಗಳ ಹಿನ್ನಲೆಯಲ್ಲಿ ಸುಪ್ರೀಂ ಕೋರ್ಟ್ ಬುಧವಾರ ಜಾಮೀನು ಮಂಜೂರು ಮಾಡಿದೆ.

ನ್ಯಾಯಮೂರ್ತಿಗಳಾದ ಯು ಯು ಲಲಿತ್ ಮತ್ತು ಎಸ್ ರವೀಂದ್ರ ಭಟ್ ಅವರಿದ್ದ ಪೀಠ “ಈವರೆಗೂ ಆರೋಪ ನಿಗದಿಪಡಿಸಲು ಪ್ರಕರಣವನ್ನು ಎತ್ತಿಕೊಂಡಿಲ್ಲ, ಅದೇ ರೀತಿ ಆರೋಪಿಗಳು ಮತ್ತಿತರರು ತಮ್ಮ ಬಿಡುಗಡೆಗಾಗಿ ಕೋರಿದ್ದ ಅರ್ಜಿಗಳು ಕೂಡ ಬಾಕಿ ಇವೆ. ಜಾಮೀನು ಹಿಂಪಡೆಯಲು ಕಾರಣವಾಗುವಂತೆ ರಾವ್ ಅವರ ಆರೋಗ್ಯದ ಸ್ಥಿತಿ ಸಾಕಷ್ಟು ಕಾಲದಿಂದ ಸುಧಾರಿಸಿಲ್ಲ. ವರವರ ರಾವ್‌ ಅವರು ವೈದ್ಯಕೀಯ ನೆಲೆಯಲ್ಲಿ ಜಾಮೀನು ಪಡೆಯಲು ಅರ್ಹರಾಗಿದ್ದು ಜಾಮೀನನ್ನು ನಿರ್ದಿಷ್ಟ ಅವಧಿಗೆ ಸೀಮಿತಗೊಳಿಸುವ ಅಂಶಗಳುಳ್ಳ ಪ್ಯಾರಾವನ್ನು ನಾವು ತೆಗೆದುಹಾಕುತ್ತೇವೆ” ಎಂದು ಹೇಳಿತು.

ಆದೇಶ ಇತರೆ ಆರೋಪಿಗಳ ಮೇಲೆ ಪ್ರಭಾವ ಬೀರುವುದಿಲ್ಲ ಮತ್ತು ರಾವ್‌ ಅವರು ಮುಂಬೈ ನ್ಯಾಯವ್ಯಾಪ್ತಿ ತೊರೆಯುವಂತಿಲ್ಲ ಎಂದು ಪೀಠ ಆದೇಶದಲ್ಲಿ ತಿಳಿಸಿದೆ.

ರಾವ್ ಅವರಿಗೆ 82 ವರ್ಷ ವಯಸ್ಸಾಗಿದೆ. ತನಿಖಾ ಸಂಸ್ಥೆ 2018 ರಿಂದ ಕಸ್ಟಡಿ ವಿಚಾರಣೆಯ ಅವಕಾಶವನ್ನು ಹೊಂದಿತ್ತು. ಆರೋಪಪಟ್ಟಿ ಸಲ್ಲಿಕೆಯಾದರೂ ಪ್ರಕರಣದ ಕೆಲ ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ. ರಾವ್ ಅವರ ವೈದ್ಯಕೀಯ ಸ್ಥಿತಿಯು ದೀರ್ಘಕಾಲದವರೆಗೆ ಸುಧಾರಿಸಿಲ್ಲ ಎಂಬ ಅಂಶಗಳನ್ನು ನ್ಯಾಯಾಲಯ ಜಾಮೀನು ನೀಡುವಾಗ ಪರಿಗಣಿಸಿದೆ.

ರಾವ್‌ ಅವರ ಪರವಾಗಿ ಹಿರಿಯ ನ್ಯಾಯವಾದಿ ಆನಂದ್‌ ಗ್ರೋವರ್‌ ವಾದ ಮಂಡಿಸಿದರು. ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌ ವಿ ರಾಜು ಡಿಸ್ಚಾರ್ಜ್‌ ಅರ್ಜಿ ಮೂಲಕ ವಿಚಾರಣೆ ವಿಳಂಬಗೊಳಿಸಲು ರಾವ್‌ ಯತ್ನಿಸುತ್ತಿದ್ದಾರೆ ಎಂದರು. ಇದಕ್ಕೂ ಮುನ್ನ ಎನ್‌ಐಎ ಪರ ವಕೀಲರು “ವರವರ ರಾವ್‌ ಅವರು ಭಾರತ ಸರ್ಕಾರದ ಪರ ನಿರಂತರ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದಾರೆ” ಎಂದು ಆರೋಪಿಸಿದರು.

ನ್ಯಾಯಾಲಯ ಅವಲೋಕನದ ಪ್ರಮುಖ ಅಂಶಗಳು

  • (ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಅವರನ್ನು ಉದ್ದೇಶಿಸಿ) "ನೀವು ಅವರ ಕಾಯಿಲೆಗಳ ಬಗ್ಗೆ ತಕರಾರು ತೆಗೆದಿಲ್ಲ. ಅವರ ವಯಸ್ಸನ್ನು ನೋಡಿ. ಅವರು ಬಳಲುತ್ತಿದ್ದರೆ, ಅದು ಹೀಗೆಯೇ ಮುಂದುವರಿಯಲಿದೆ ಇಲ್ಲವೇ ಅವರ ಆರೋಗ್ಯ ಮತ್ತಷ್ಟು ಹದಗೆಡಲಿದೆ. ಅದನ್ನು ಸುಧಾರಿಸಲು ಸಾಧ್ಯವಿಲ್ಲ. ಅವರ ಆರೋಗ್ಯ ಹೇಗೆ ಸುಧಾರಿಸುತ್ತಿದೆ ಎಂಬುದನ್ನು ನಿರೂಪಿಸಿ…

  • ಎನ್‌ಐಎ ಏಕೆ ತಡವಾಗಿ ತನಿಖೆಯ ಹೊಣೆ ವಹಿಸಿಕೊಂಡಿತು. ಯುಎಪಿಎ ಅಡಿ ಆರೋಪ ಇದ್ದರೆ ಕೂಡಲೇ ರಾಜ್ಯ ಸರ್ಕಾರ ಪ್ರಕರಣವನ್ನು ಎನ್‌ಐಎಗೆ ವಹಿಸಬೇಕು. ನಾವು ಸಮಗ್ರ ದೃಷ್ಟಿಕೋನದಿಂದ ನೋಡಬೇಕು. ತಮ್ಮ 82ನೇ ವಯಸ್ಸಿನಲ್ಲಿ ಅವರು 2.5 ವರ್ಷಗಳ ಕಾಲ ಜೈಲಿನಲ್ಲಿದ್ದಾರೆ. ಅವರಿಗೆ ನೀಡಲಾದ ಸ್ವಾತಂತ್ರ್ಯವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಕೂಡ ನೀವು ಹೇಳುತ್ತಿಲ್ಲ.

  • ಜಾಮೀನು ಷರತ್ತು ಉಲ್ಲಂಘಿಸಿದರೆ ಜಾಮೀನು ರದ್ದುಗೊಳಿಸಲಾಗುವುದು ಎಂಬ ಷರತ್ತು ವಿಧಿಸುತ್ತಿದ್ದೇವೆ.

ಹಿನ್ನೆಲೆ

2018ರಲ್ಲಿ ನಡೆದ ಭೀಮಾ ಕೋರೆಗಾಂವ್ ಹಿಂಸಾಚಾರದ ಆರೋಪಿಯಾಗಿರುವ ವರವರ ರಾವ್ ಅವರು ವೈದ್ಯಕೀಯ ಕಾರಣಗಳಿಗಾಗಿ ಶಾಶ್ವತ ಜಾಮೀನು ಕೋರಿ ಕಳೆದ ಜೂನ್‌ನಲ್ಲಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ವರವರ ರಾವ್‌ ಸೇರಿದಂತೆ ಎಂಟು ಆರೋಪಿಗಳಿಗೆ ಬಾಂಬೆ ಹೈಕೋರ್ಟ್‌ ಡಿಸೆಂಬರ್ 1, 2021 ರಂದು ಜಾಮೀನು ನಿರಾಕರಿಸಿತ್ತು. ಆದರೆ ಪ್ರಕರಣದ ಸಹ ಆರೋಪಿ, ವಕೀಲೆ ಹಾಗೂ ಆದಿವಾಸಿ ಹಕ್ಕುಗಳ ಹೋರಾಟಗಾರ್ತಿ ಸುಧಾ ಭಾರದ್ವಾಜ್‌ ಅವರಿಗೆ ಜಾಮೀನು ನೀಡಿತ್ತು.