Dr. Varavara Rao and Karnataka HC
Dr. Varavara Rao and Karnataka HC 
ಸುದ್ದಿಗಳು

ಬಾಂಬೆ ಹೈಕೋರ್ಟ್‌, ಎನ್‌ಐಎ ನ್ಯಾಯಾಲಯ ಆದೇಶ ಮಾಡುವವರೆಗೆ ವರವರರಾವ್‌ ಬಂಧನ ಇಲ್ಲ: ಹೈಕೋರ್ಟ್‌ಗೆ ಸರ್ಕಾರದ ವಿವರಣೆ

Siddesh M S

ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ವೆಂಕಟಮ್ಮನಹಳ್ಳಿ ನಕ್ಸಲ್‌ ದಾಳಿ ಪ್ರಕರಣದ ವಿಚಾರಣೆಯಲ್ಲಿ ಭಾಗವಹಿಸುವ ಏಕೈಕ ಕಾರಣಕ್ಕಾಗಿ ತೆಲುಗು ಕವಿ ಪೆಂಡ್ಯಾಲ ವರವರರಾವ್‌ ಅವರ ಜಾಮೀನು ಷರತ್ತಿನಲ್ಲಿ ಸಡಿಲಿಕೆ ಮಾಡುವಂತೆ ಬಾಂಬೆ ಹೈಕೋರ್ಟ್‌ ಅಥವಾ ಎನ್‌ಐಎ ನ್ಯಾಯಾಲಯದ ಮುಂದೆ ಸೂಕ್ತ ಮನವಿ ಸಲ್ಲಿಸಲಾಗುವುದು. ಸಕ್ಷಮ ನ್ಯಾಯಾಲಯದಿಂದ ಆದೇಶ ಬರುವವರೆಗೆ ವರವರರಾವ್‌ ಅವರನ್ನು ಬಂಧಿಸುವುದಿಲ್ಲ ಎಂದು ರಾಜ್ಯ ಸರ್ಕಾರವು ಈಚೆಗೆ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದೆ.

ಹೀಗಾಗಿ, ಜಾಮೀನು ರಹಿತ ವಾರೆಂಟ್‌ ಆದೇಶ ಮಾಡಿದ್ದ ವಿಚಾರಣಾಧೀನ ನ್ಯಾಯಾಲಯದ ಆದೇಶ ವಜಾ ಮಾಡುವಂತೆ ಮನವಿ ಸಲ್ಲಿಸಿದ್ದ ವರವರರಾವ್‌ ಅವರ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕ ಸದಸ್ಯ ಪೀಠವು ಇತ್ಯರ್ಥಪಡಿಸಿದೆ.

ವಿಶೇಷ ಸರ್ಕಾರಿ ಅಭಿಯೋಜಕ ವಿ ಎಸ್‌ ಹೆಗ್ಡೆ ಅವರು “ವರವರರಾವ್‌ ಅವರು ಮುಂಬೈನಲ್ಲಿರುವ ರಾಷ್ಟ್ರೀಯ ತನಿಖಾ ಸಂಸ್ಥೆ ಪ್ರಕರಣಗಳ ವಿಚಾರಣೆಗೆ ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಲಯದ ವ್ಯಾಪ್ತಿ ಬಿಟ್ಟು ತೆರಳುವಂತಿಲ್ಲ ಎಂದು ಜಾಮೀನು ಷರತ್ತು ವಿಧಿಸಿರುವುದರಲ್ಲಿ ಸಡಲಿಕೆ ಕೋರಿ ಬಾಂಬೆ ಹೈಕೋರ್ಟ್‌ ಅಥವಾ ಎನ್‌ಐಎ ನ್ಯಾಯಾಲಯದ ಮುಂದೆ ಸೂಕ್ತ ಮನವಿ ಸಲ್ಲಿಸಲಾಗುವುದು. ಈ ಕುರಿತು ಸಂಬಂಧಪಟ್ಟ ನ್ಯಾಯಾಲಯದಿಂದ ಆದೇಶ ಬರುವವರೆಗೆ ವರವರ ರಾವ್‌ ಅವರನ್ನು ಬಂಧಿಸುವುದಿಲ್ಲ” ಎಂದಿದ್ದರು.

ಇದಕ್ಕೆ ವರವರ ರಾವ್‌ ಪರ ವಕೀಲ ಎಸ್‌ ಬಾಲಕೃಷ್ಣನ್‌ ಅವರು “ಸರ್ಕಾರವು ಮೇಲಿನ ನಿರ್ಧಾರ ಕೈಗೊಂಡಿರುವುದರಿಂದ ಮನವಿಯ ಹೆಚ್ಚಿನ ಪರಿಗಣನೆ ಅವಶ್ಯವಿಲ್ಲ” ಎಂದಿದ್ದರು. ಇದನ್ನು ದಾಖಲಿಸಿಕೊಂಡಿರುವ ಪೀಠವು ಅರ್ಜಿ ವಿಲೇವಾರಿ ಮಾಡಿತು.

ಪ್ರಕರಣದ ಹಿನ್ನೆಲೆ

2005ರ ಫೆಬ್ರವರಿ 10ರಂದು ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ವೆಂಕಟಮ್ಮನಹಳ್ಳಿ ಶಾಲೆ ಬಳಿ ನಕ್ಸಲರು ಕರ್ನಾಟಕ ರಾಜ್ಯ ಸಶಸ್ತ್ರ ಮೀಸಲು ಪಡೆಯ ಏಳು ಮಂದಿ ಪೊಲೀಸರು ಮತ್ತು ಒಬ್ಬ ನಾಗರಿಕರನ್ನು ಗುಂಡಿಟ್ಟು ಕೊಂದಿದ್ದರು. 2005ರ ಫೆಬ್ರವರಿ 5ರಂದು ಚಿಕ್ಕಮಗಳೂರಿನ ಮೆಣಸಿನಹಾಡ್ಯದಲ್ಲಿ ನಕ್ಸಲ್‌ ನಾಯಕ ಸಾಕೇತ್‌ ರಾಜನ್‌ ಅವರನ್ನು ಎನ್‌ಕೌಂಟರ್‌ನಲ್ಲಿ ಪೊಲೀಸರು ಕೊಂದಿದ್ದಕ್ಕೆ ಪ್ರತೀಕಾರವಾಗಿ ಈ ಕೃತ್ಯ ಎಸಗಲಾಗಿದೆ ಎಂದು ಆರೋಪಿಸಲಾಗಿತ್ತು. ಈ ಪ್ರಕರಣದಲ್ಲಿ ರಾವ್‌ ಆರೋಪಿಯಾಗಿದ್ದಾರೆ.

ಈ ಪ್ರಕರಣದ ವಿಚಾರಣೆಗೆ ಗೈರಾದ ಹಿನ್ನೆಲೆಯಲ್ಲಿ 2021ರ ಅಕ್ಟೋಬರ್‌ 21ರಂದು ಮಧುಗಿರಿಯಲ್ಲಿರುವ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು ರಾವ್‌ ಅವರ ವಿರುದ್ಧ ಜಾಮೀನು ರಹಿತ ವಾರೆಂಟ್‌ ಜಾರಿ ಮಾಡಿತ್ತು. ಅಕ್ಟೋಬರ್‌ 28ರಂದು ವರವರ ರಾವ್‌ ಅವರನ್ನು ನ್ಯಾಯಾಲಯದಲ್ಲಿ ಹಾಜರುಪಡಿಸುವಂತೆ ವಿಚಾರಣಾಧೀನ ನ್ಯಾಯಾಲಯವು ಆದೇಶ ಮಾಡಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಲಾಗಿತ್ತು. ಈಗ ಮನವಿ ಇತ್ಯರ್ಥವಾಗಿದೆ.

Varavara Rao Versus State of Karnataka.pdf
Preview