ಸುದ್ದಿಗಳು

ಬಿಗ್‌ ಬಾಸ್‌ ಚಿತ್ರೀಕರಣದ ಜಾಲಿವುಡ್‌ಗೆ ಬೀಗಮುದ್ರೆ: ಹೈಕೋರ್ಟ್‌ ಕದತಟ್ಟಿದ ವಿಇಎಲ್‌ಎಸ್‌ ಸ್ಟುಡಿಯೋಸ್‌ ವಾದವೇನು?

2025ರ ಅಕ್ಟೋಬರ್‌ 6ರಂದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್‌ ಜಾರಿ ಮಾಡಿದ್ದನ್ನು ಪ್ರಶ್ನಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಆರ್‌ ನಟರಾಜ್‌ ಅವರ ಏಕಸದಸ್ಯ ಪೀಠ ಗುರುವಾರ ವಿಚಾರಣೆ ನಡೆಸಲಿದೆ.

Bar & Bench

ಪರಿಸರ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲ್ಲೂಕಿನ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಬಿಗ್‌ ಬಾಸ್‌ ರಿಯಾಲಿಟಿ ಶೋದ ಚಿತ್ರೀಕರಣ ನಡೆಯುವ ಜಾಲಿವುಡ್‌ ಸ್ಟುಡಿಯೋಸ್‌ ಅಂಡ್‌ ಅಡ್ವೆಂಚರ್ಸ್‌ ಪಾರ್ಕ್‌ಗೆ ಬೀಗ ಜಡಿದಿರುವ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ವಿಇಎಲ್‌ಎಸ್‌ ಸ್ಟುಡಿಯೋಸ್‌ ಅಂಡ್‌ ಎಂಟರ್‌ಟೈನ್‌ಮೆಂಟ್‌ ಪ್ರೈವೇಟ್‌ ಲಿಮಿಟೆಡ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್‌ ಗುರುವಾರ ನಡೆಸಲಿದೆ.

ವಕೀಲ ಜಿ ಎಂ ವಿಶ್ವಾಸ್‌ ಗೌಡ ಅವರ ಮೂಲಕ ಸಲ್ಲಿಕೆಯಾಗಿರುವ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸುವಂತೆ ಕೋರಿ ನ್ಯಾಯಮೂರ್ತಿ ಆರ್‌ ನಟರಾಜ್‌ ಅವರ ಏಕಸದಸ್ಯ ಪೀಠಕ್ಕೆ ಮನವಿ ಮಾಡಲಾಗಿದ್ದು, ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಲಾಗುವುದು ಎಂದು ಪೀಠ ತಿಳಿಸಿದೆ.

2025ರ ಅಕ್ಟೋಬರ್‌ 6ರಂದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್‌ ಜಾರಿ ಮಾಡಿದ್ದು, ಅದರ ಅನ್ವಯ ವಿಇಎಲ್‌ಎಸ್‌ ಸ್ಟುಡಿಯೋಸ್‌ ಅಂಡ್‌ ಎಂಟರ್‌ಟೈನ್‌ಮೆಂಟ್‌ಗೆ ಸೂಕ್ತ ಕಾಲಾವಕಾಶ ನೀಡದೇ ಅಕ್ಟೋಬರ್‌ 7ರಂದು ಜಾಲಿವುಡ್‌ ಸ್ಟುಡಿಯೋಸ್‌ ಅಂಡ್‌ ಅಡ್ವೆಂಚರ್ಸ್‌ ಪಾರ್ಕ್‌ಗೆ ರಾಮನಗರ ತಹಶೀಲ್ದಾರ್‌ ಬೀಗ ಜಡಿದಿದ್ದಾರೆ. ಇದು ಕಾನೂನುಬಾಹಿರ ಮತ್ತು ಸ್ವೇಚ್ಛೆಯ ಕ್ರಮವಾಗಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

ಜಾಲಿವುಡ್‌ ಸ್ಟುಡಿಯೋಸ್‌ ಅಂಡ್‌ ಅಡ್ವೆಂಚರ್ಸ್‌ ಪಾರ್ಕ್‌ನಲ್ಲಿ ದೇಶಾದ್ಯಂತ ಜನಪ್ರಿಯವಾಗಿರುವ ಬಿಗ್‌ ಬಾಸ್‌ ಕಾರ್ಯಕ್ರಮ ಸೇರಿ ಟಿವಿ ಕಾರ್ಯಕ್ರಮಗಳ ಚಿತ್ರೀಕರಣ ನಡೆಯುತ್ತದೆ. ಬಿಗ್‌ ಬಾಸ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬೆನ್ನಲೇ ಆಕ್ಷೇಪಾರ್ಹವಾದ ಆದೇಶ ಮಾಡಲಾಗಿದ್ದು, ಇದು ನಿರ್ದಿಷ್ಟ ಉದ್ದೇಶ ಇಟ್ಟುಕೊಂಡು ಮಾಡಿರುವ ಆದೇಶವಾಗಿದೆ. ಸಹಜ ನ್ಯಾಯ ತತ್ವಕ್ಕೆ ವಿರುದ್ಧವಾದ ಆಕ್ಷೇಪಾರ್ಹ ಆದೇಶವನ್ನು ವಜಾಗೊಳಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಬಿಗ್‌ ಬಾಸ್‌ ರಿಯಾಲಿಟಿ ಶೋನಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸುಮಾರು ಎರಡು ಸಾವಿರ ಮಂದಿ ಬದುಕು ಕಟ್ಟಿಕೊಂಡಿದ್ದಾರೆ. ವಾಯು (ಮಾಲಿನ್ಯ ನಿಯಂತ್ರಣ ಮತ್ತು ನಿಷೇಧ) ಕಾಯಿದೆಗೆ ವಿರುದ್ಧವಾಗಿ ನೋಟಿಸ್‌ ಜಾರಿ ಮಾಡಲಾಗಿದೆ. ಆಕ್ಷೇಪಾರ್ಹ ಪ್ರದೇಶವು ಬಿಗ್‌ ಬಾಸ್‌ ಸ್ಪರ್ಧಿಗಳು ನೆಲೆಸುವ ತಾಣವಾಗಿದ್ದು, ಅದು ಕೈಗಾರಿಕೆಯಾಗುವುದಿಲ್ಲ. ಕಾಯಿದೆಯ ಸೆಕ್ಷನ್‌ 2(ಡಿ) ಅಡಿ ಮನುಷ್ಯನ ಬದುಕಿಗೆ ಎರವಾಗುವ ಅಂಶ ಇರಬೇಕು. ಇದಕ್ಕೆ ಪ್ರಯೋಗಾಲಯದ ದತ್ತಾಂಶ/ಕ್ಲಿನಿಕಲ್‌ ಪರೀಕ್ಷೆ ಪೂರಕವಾಗಿರಬೇಕು. ಇಂಥ ಯಾವುದೇ ದತ್ತಾಂಶ ಇಲ್ಲದೇ ಊಹೆಗಳ ಆಧಾರದಲ್ಲಿ ಆಕ್ಷೇಪಾರ್ಹ ಆದೇಶ ಮಾಡಲಾಗಿದೆ. ಹೀಗಾಗಿ, ಅದನ್ನು ವಜಾಗೊಳಿಸಬೇಕು ಎಂದು ಕೋರಲಾಗಿದೆ.