“ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕದಲ್ಲಿ ಸರ್ಕಾರಿ ಅಧಿಕಾರಿಗಳು ಅಥವಾ ರಾಜಕೀಯ ಮುಖಂಡರು ಹೇಯ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುವುದು ಅತೀ ವಿರಳ” ಎಂದು ಕರ್ನಾಟಕ ಹೈಕೋರ್ಟ್ ಸೋಮವಾರ ಮೌಖಿಕವಾಗಿ ಹೇಳಿತು.
ಧಾರವಾಡದ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಕಾಂಗ್ರೆಸ್ ಮುಖಂಡ ವಿನಯ್ ಕುಲಕರ್ಣಿ ಮತ್ತು ಚಂದ್ರಶೇಖರ್ ಇಂಡಿ ತಮಗೆ ವಿಧಿಸಿರುವ ಶಿಕ್ಷೆ ಅಮಾನತುಗೊಳಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎಂದು ಕೋರಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಮೊಹಮ್ಮದ್ ನವಾಜ್ ಮತ್ತು ಜಿ ಬಸವರಾಜ ಅವರ ವಿಭಾಗೀಯ ಪೀಠ ಮೇಲಿನಂತೆ ಹೇಳಿತು.
ವಿಚಾರಣೆಯ ವೇಳೆ ಸಿಬಿಐ ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು ಅವರು “ಅತಿ ಜವಾಬ್ದಾರಿ ಸ್ಥಾನದಲ್ಲಿರುವ ಜನಪ್ರತಿನಿಧಿಯು ರಾಜಕೀಯ ವಿರೋಧಿಯ ಕೊಲೆ ಪಿತೂರಿ ನಡೆಸಿದ್ದಾರೆ. ಅಲ್ಲದೇ, ನೈಜ ಆರೋಪಿಗಳನ್ನು ರಕ್ಷಿಸುವ ಕೆಲಸ ಮಾಡಲಾಗಿದೆ. ತನಿಖೆಯು ಸಿಬಿಐ ಹೆಗಲಿಗೆ ಬಿದ್ದಿದ್ದರಿಂದ ವಿನಯ್ ಕುಲಕರ್ಣಿ ಮತ್ತಿತರರ ಯೋಜನೆ ವಿಫಲವಾಗಿದೆ. ಸಿಬಿಐ ಕೊಲೆ ಭೇದಿಸಿದ್ದು, 7-14ನೇ ಆರೋಪಿಗಳು ನೈಜ ಅಪರಾಧಿಗಳು ಪಿತೂರಿ ನಡೆಸಿದ್ದಾರೆ ಎಂದು ಪತ್ತೆ ಹಚ್ಚಿದೆ. ಇಂಥ ಅತ್ಯುನ್ನತ ಜವಾಬ್ದಾರಿ ಸ್ಥಾನದಲ್ಲಿರುವ ಜನಪ್ರತಿನಿಧಿಗೆ ಜಾಮೀನು ನೀಡುವುದು ಹೇಗೆ?” ಎಂದರು.
ಈ ಹಂತದಲ್ಲಿ ನ್ಯಾ. ನವಾಜ್ ಅವರು “ಸರ್ಕಾರಿ ಅಧಿಕಾರಿಗಳು ಅಥವಾ ರಾಜಕಾರಣಿಗಳು ಹೇಯ ಕೃತ್ಯಗಳಲ್ಲಿ ಭಾಗವಹಿಸುವುದು ಬೇರೆ ರಾಜ್ಯಗಳಲ್ಲಿ ಹೆಚ್ಚು. ಕರ್ನಾಟಕ ರಾಜ್ಯದಲ್ಲಿ ಇದು ವಿರಳ. ಅದು ಈ ಕಡೆ ಅಥವಾ ಆ ಕಡೆಯಾಗಿರಬಹುದು. ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳು ಹೇಯ ಕೃತ್ಯಗಳಲ್ಲಿ ಭಾಗಿಯಾಗಿರುವ ಉದಾಹರಣೆಗಳಿವೆ” ಎಂದರು.
ಆಗ ರಾಜು ಅವರು “ಕರ್ನಾಟಕದಲ್ಲಿ ಹೀನ ಕೃತ್ಯಗಳಲ್ಲಿ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳು ಭಾಗಿಯಾಗುವುದು ಕಡಿಮೆ ಎಂದು ಕೇಳಲು ಸಂತೋಷವಾಗುತ್ತದೆ. ಇಂಥ ಟ್ರೆಂಡ್ ಆರಂಭವಾದರೆ ಅದನ್ನು ಎಳೆಯದರಲ್ಲಿ ಮೊಟಕಿ ಹಾಕಬೇಕಿದೆ” ಎಂದರು.
“ಘೋರ ಅಪರಾಧದ ಫಲವನ್ನು ಅನುಭವಿಸಲು ಯಾರಿಗೂ ಅವಕಾಶ ನೀಡಬಾರದು. ತಾನು ಶಾಸಕ ಎಂದ ಮಾತ್ರಕ್ಕೆ ಏನು ಮಾಡಿದರೂ ಗೆದ್ದುಕೊಳ್ಳಬಲ್ಲೆ ಎಂಬುದಕ್ಕೆ ಅವಕಾಶ ನೀಡಬಾರದು. ಹೀಗಾಗಿ, ಶಿಕ್ಷೆ ಅಮಾನತುಗೊಳಿಸಿ ಜಾಮೀನು ನೀಡಿದರೆ ಪ್ರಭಾವಿಯಾಗಿರುವುದರಿಂದ ಏನು ಬೇಕಾದರೂ ಮಾಡಬಹುದು ಎಂಬ ಭಾವನೆ ದಟ್ಟವಾಗಲಿದೆ. ಅದನ್ನು ಚಿವುಟಿ ಹಾಕಬೇಕು” ಎಂದರು.
ಇದೇ ಕಾರಣಕ್ಕೆ ಶಿಕ್ಷೆಯಾದ ತಕ್ಷಣ ಚುನಾಯಿತ ಜನಪ್ರತಿನಿಧಿಗಳಿಗೆ ಅನರ್ಹತೆಯಿಂದ ರಕ್ಷಣೆ ಒದಗಿಸಿದ್ದ ಪ್ರಜಾಪ್ರತಿನಿಧಿ ಕಾಯಿದೆ ಸೆಕ್ಷನ್ 8(4) ಅನ್ನು ರದ್ದುಪಡಿಸಲಾಗಿದೆ ಎಂದರು.
ಆಗ ಪೀಠವು “ಅದು ಸತ್ಯ. ಇಂಥ ಘೋರ ಕೃತ್ಯಗಳನ್ನು ಒಪ್ಪಲಾಗದು. ಇಲ್ಲಿ, ಅಲ್ಲಿ ಎಂದೇನು ಇಲ್ಲ. ಇದು ಎಲ್ಲಾ ಕಡೆ ಇದ್ದು, ಕೆಲವು ಕಾರಣಗಳಿಗೆ ಕೆಲವು ಸಂದರ್ಭದಲ್ಲಿ ಕೆಲವರು ಪಾರಾಗುತ್ತಾರೆ. ಕೆಲವರು ಆರೋಪಿಗಳಾದರೂ ಕೆಲವರು ಮಾತ್ರ ಶಿಕ್ಷೆಗೆ ಗುರಿಯಾಗುತ್ತಾರೆ” ಎಂದಿತು.
“ಕೆಲವು ಪ್ರಕರಣಗಳಲ್ಲಿ ಇದನ್ನು ಲಘುವಾಗಿ ಪರಿಗಣಿಸಲಾಗುತ್ತದೆ. ಏಕೆಂದರೆ ಆರೋಪಿಗಳ ಸಂಪರ್ಕ ಕಾರಣ ಇರಬಹುದು, ಗೊತ್ತಿಲ್ಲ. ಸರ್ಕಾರಿ ಸೇವಕರು ಅಥವಾ ಅತ್ಯುನ್ನತ ರಾಜಕೀಯ ಪ್ರಭಾವಿಗಳು ಭಾಗಿಯಾಗಿರುವ ವಿಚಾರವನ್ನು ಉಲ್ಲೇಖಿಸಿದ್ದೇವೆ. ಇದೇ ಕಾರಣಕ್ಕೆ ಈ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ. ಕೆಲವು ಪ್ರಕರಣಗಳಲ್ಲಿ ಸರ್ಕಾರಕ್ಕೂ ಇಷ್ಟವಿರುವುದಿಲ್ಲ” ಎಂದಿತು.
ಇದಕ್ಕೆ ಸಹಮತಿಸಿದ ರಾಜು ಅವರು “ಭ್ರಷ್ಟ ರಾಜಕಾರಣಿಗಳನ್ನು ಸರ್ಕಾರಗಳೇ ರಕ್ಷಿಸಿರುವ ಸಾಕಷ್ಟು ಪ್ರಕರಣಗಳಿವೆ. ಸರ್ಕಾರ ಬದಲಾದ ತಕ್ಷಣ ಪ್ರಾಸಿಕ್ಯೂಷನ್‌ಗೆ ಅನುಮತಿಸಿದ್ದನ್ನು ಹಿಂಪಡೆದಿರುವ ಐತಿಹ್ಯಗಳೂ ಇವೆ” ಎಂದರು. ಪ್ರಕರಣದ ಭಾಗಶಃ ವಿಚಾರಣೆ ನಡೆಸಿರುವ ನ್ಯಾಯಾಲಯವು, ವಿಚಾರಣೆಯನ್ನು ನಾಳೆಗೆ ಮುಂದೂಡಿತು.