Karnataka High Court 
ಸುದ್ದಿಗಳು

ನ್ಯಾಯಮೂರ್ತಿಗಳಿಗೆ ನಿವಾಸ ನಿರ್ಮಿಸಲು ಪಶು ವೈದ್ಯಕೀಯ ವಿವಿ ಭೂಮಿ ಹಂಚಿಕೆ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ಪಶು ಸಂಗೋಪನಾ ಚಟುವಟಿಕೆಗಳಿಗೆ ಮೀಸಲಾದ ಜಾಗವನ್ನು ಕಟ್ಟಡಗಳ ನಿರ್ಮಾಣಕ್ಕೆ ನೀಡಿರುವುದು ಸರಿಯಲ್ಲ ಎಂದು ಕರ್ನಾಟಕ ವೆರ್ಟನರಿ ಅಸೋಸಿಯೇಷನ್‌ ಆಕ್ಷೇಪಿಸಿದೆ.

Bar & Bench

ಬೆಂಗಳೂರಿನ ಹೆಬ್ಬಾಳ ಸಮೀಪ ಪಶು ವೈದ್ಯಕೀಯ ವಿಶ್ವವಿದ್ಯಾಲಯಕ್ಕೆ ಸೇರಿದ ನಾಲ್ಕು ಎಕರೆ ಭೂಮಿಯನ್ನು ಹೈಕೋರ್ಟ್‌ ನ್ಯಾಯಮೂರ್ತಿಗಳಿಗೆ ನಿವಾಸ ನಿರ್ಮಾಣಕ್ಕಾಗಿ ಹಂಚಿಕೆ ಮಾಡಿರುವ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಸಂಬಂಧ ರಾಜ್ಯ ಸರ್ಕಾರಕ್ಕೆ ಶುಕ್ರವಾರ ಕರ್ನಾಟಕ ಹೈಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ. 

ಕರ್ನಾಟಕ ವೆರ್ಟನರಿ ಅಸೋಸಿಯೇಷನ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಡಿ ಕೆ ಸಿಂಗ್‌ ಮತ್ತು ಟಿ ಎಂ ನದಾಫ್‌ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಕೆಲ ಕಾಲ ಅರ್ಜಿದಾರರ ಪರ ಹಿರಿಯ ವಕೀಲ ಕೆ ಎನ್‌ ಫಣೀಂದ್ರ ಅವರ ವಾದ ಆಲಿಸಿದ ಪೀಠವು ರಾಜ್ಯ ಸರ್ಕಾರ, ಪಶು ವೈದ್ಯಕೀಯ ಇಲಾಖೆ, ಬೀದರ್‌ನ ಕರ್ನಾಟಕ ಪಶು ವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನಗಳ ಇಲಾಖೆ, ಪಶು ವೈದ್ಯಕೀಯ ಕಾಲೇಜು, ಹೈಕೋರ್ಟ್‌ನ ರಿಜಿಸ್ಟ್ರಾರ್‌ ಜನರಲ್‌ ಸೇರಿದಂತೆ ಎಲ್ಲಾ ಪ್ರತಿವಾದಿಗಳಿಗೆ ನೋಟಿಸ್‌ ಜಾರಿಗೊಳಿಸಿ ಹತ್ತು ದಿನಗಳಲ್ಲಿ ಆಕ್ಷೇಪಣೆ ಸಲ್ಲಿಸಲು ನಿರ್ದೇಶಿಸಿ, ವಿಚಾರಣೆಯನ್ನು ಮಾರ್ಚ್‌ 25ಕ್ಕೆ ಮುಂದೂಡಿತು.

1958ರಲ್ಲಿ ಪಶುವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ಮೈಸೂರು ಮಹಾರಾಜರು ಭೂಮಿ ಹಂಚಿಕೆ ಮಾಡಿದ್ದರು. ಅದರಂತೆ ಅಲ್ಲಿ ಕಾಲೇಜು ಸ್ಥಾಪನೆಯಾಗಿದೆ. 2004ರಲ್ಲಿ ಕರ್ನಾಟಕ ಪಶು ವೈದ್ಯಕೀಯ, ಪ್ರಾಣಿಗಳು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಸ್ಥಾಪನೆಯಾಗಿದ್ದು, ಸಂಶೋಧನಾ ಚಟುವಟಿಕೆಗಳೂ ಸಹ ನಡೆಯುತ್ತಿದ್ದವು ಎಂದು ವಿವರಿಸಲಾಗಿದೆ.

ಆಕ್ಷೇಪಾರ್ಹ ಭೂಮಿಗೆ ಸಂಬಂಧಿಸಿದಂತೆ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಮತ್ತು ಪಶುಸಂಗೋಪನಾ ವಿಶ್ವವಿದ್ಯಾಲಯ ನಡುವೆ ಹಲವು ಸುತ್ತಿನ ವ್ಯಾಜ್ಯ ನಡೆದಿದ್ದವು. ಈ ಮಧ್ಯೆ, 2026ರ ಜನವರಿ 8ರಂದು ಸರ್ಕಾರವು ಪಶು ವೈದ್ಯಕೀಯ ಕಾಲೇಜಿನ ವಶದಲ್ಲಿರುವ ನಾಲ್ಕು ಎಕರೆ ಜಾಗವನ್ನು ಹೈಕೋರ್ಟ್‌ನ ನ್ಯಾಯಮೂರ್ತಿಗಳಿಗೆ ನಿವಾಸ ನಿರ್ಮಾಣಕ್ಕೆ ಮತ್ತು ಮೂರು ಎಕರೆಯನ್ನು ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಮಂಜೂರು ಮಾಡಿದೆ. ಇದು ನಿಯಮಗಳನ್ನು ಉಲ್ಲಂಘನೆ ಮಾಡಿರುವುದಲ್ಲದೆ, ಪಶು ಸಂಗೋಪನೆ ಉದ್ದೇಶಕ್ಕೆ ಮೀಸಲಾದ ಜಾಗವನ್ನು ಈ ರೀತಿ ಕಟ್ಟಡಗಳ ನಿರ್ಮಾಣಕ್ಕೆ ನೀಡಿರುವುದು ಸರಿಯಲ್ಲ. ಇದರಿಂದ ವಿಶ್ವವಿದ್ಯಾಲಯದ ಶೈಕ್ಷಣಿಕ, ಸಂಶೋಧನೆ ಮತ್ತು ವಿಸ್ತರಣಾ ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮ ಉಂಟು ಮಾಡಲಿದೆ. ಆ ಬಗ್ಗೆ ಸರ್ಕಾರದ ಗಮನಕ್ಕೆ ತಂದರೂ ಏನೂ ಕ್ರಮ ಕೈಗೊಂಡಿಲ್ಲಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಹೀಗಾಗಿ, ಗಿಡ, ಮರಗಳಿಂದ ಹೂಡಿರುವ ಹಚ್ಚ ಹಸಿರಿನ ಪ್ರದೇಶವನ್ನು ಹಾಗೆಯೇ ಉಳಿಸಬೇಕು. ಸರ್ಕಾರದ ಭೂಮಿ ಹಂಚಿಕೆ ಆದೇಶ ರದ್ದುಗೊಳಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.