Justice H P Sandesh and Karnataka HC 
ಸುದ್ದಿಗಳು

ಶಿಕ್ಷೆ ಪ್ರಮಾಣ ಹೆಚ್ಚಳಕ್ಕೆ ಮನವಿ ಸಲ್ಲಿಸಲು ಸಂತ್ರಸ್ತರಿಗೂ ಅವಕಾಶ: ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್‌ ಸಲಹೆ

ಶಿಕ್ಷೆ ಪ್ರಮಾಣ ಅಸರ್ಮಪಕವಾಗಿದ್ದರೆ ಅದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಸರ್ಕಾರಕ್ಕೆ ಮಾತ್ರ ಅವಕಾಶವಿದೆ ಹೊರತು ಸಂತ್ರಸ್ತರಿಗೆ ಇಲ್ಲ. ಇದರಿಂದ ಸಂತ್ರಸ್ತರಿಗೆ ತಾರತಮ್ಯ ಮಾಡಿದಂತಾಗುತ್ತದೆ ಎಂದಿರುವ ನ್ಯಾಯಾಲಯ.

Bar & Bench

ಅಪರಾಧ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ವಿಧಿಸಲಾಗುವ ಶಿಕ್ಷೆ ಪ್ರಮಾಣ ಹೆಚ್ಚಿಸಲು ಕೋರಿ ಮೇಲ್ಮನವಿ ಸಲ್ಲಿಸಲು ಪ್ರಕರಣದ ಸಂತ್ರಸ್ತರಿಗೂ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್ 372ಕ್ಕೆ ಅಗತ್ಯ ತಿದ್ದುಪಡಿ ತರುವಂತೆ ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಈಚೆಗೆ ಸಲಹೆ ನೀಡಿದೆ.

ಮಾನನಷ್ಟ ಮೊಕದ್ದಮೆಯಲ್ಲಿ ‘ಪಾರಿವಾಳ’ ಪತ್ರಿಕೆಯ ಸಂಪಾದಕ ಆರ್ ಕೆ ರವಿಕುಮಾರ್‌ಗೆ ವಿಚಾರಣಾ ನ್ಯಾಯಾಲಯಗಳು ವಿಧಿಸಿರುವ ಜೈಲು ಶಿಕ್ಷೆ ಪ್ರಮಾಣವನ್ನು ಹೆಚ್ಚಿಸುವಂತೆ ಕೋರಿ ಮೂಲ ದೂರುದಾರರಾದ ನಿವೃತ್ತ ಐಎಎಸ್ ಅಧಿಕಾರಿ ಬಿ ಎ ಹರೀಶ್ ಗೌಡ ಅವರು ಸಲ್ಲಿಸಿದ್ದ ಕ್ರಿಮಿನಲ್ ಮರು ಪರಿಶೀಲನಾ ಅರ್ಜಿ ವಿಚಾರಣೆ ನಡೆಸಿ ನ್ಯಾಯಮೂರ್ತಿ ಎಚ್ ಪಿ ಸಂದೇಶ್ ಅವರ ನೇತೃತ್ವದ ಏಕಸದಸ್ಯ ಪೀಠವು ಆದೇಶ ಮಾಡಿದೆ.

ಶಿಕ್ಷೆ ಪ್ರಮಾಣ ಅಸರ್ಮಪಕವಾಗಿದ್ದರೆ ಅದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಸರ್ಕಾರಕ್ಕೆ ಮಾತ್ರ ಅವಕಾಶವಿದೆ ಹೊರತು ಸಂತ್ರಸ್ತರಿಗೆ ಇಲ್ಲ. ಇದರಿಂದ ಸಂತ್ರಸ್ತರಿಗೆ ತಾರತಮ್ಯ ಮಾಡಿದಂತಾಗುತ್ತದೆ. ಮೇಲ್ಮನವಿ ಸಲ್ಲಿಸಲು ಸಂತ್ರಸ್ತರಿಗೂ ಅವಕಾಶ ಕಲ್ಪಿಸುವ ಸಂಬಂಧ ಸಿಆರ್‌ಪಿಸಿ ಸೆಕ್ಷನ್ 372ಕ್ಕೆ ತಿದ್ದುಪಡಿ ತರುವ ಅಗತ್ಯತೆಯನ್ನು ಕೇಂದ್ರ ಸರ್ಕಾರ ಪರಿಗಣಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದ ಹಿನ್ನೆಲೆ: ಪತ್ರಿಕೆಯಲ್ಲಿ ಲೇಖನ ಬರೆದು ತಮ್ಮ ಮಾನಹಾನಿ ಮಾಡಲಾಗಿದೆ ಎಂದು ಆರೋಪಿಸಿ ರವಿಕುಮಾರ್ ವಿರುದ್ಧ ಹರೀಶ್ ಗೌಡ 2000ನೇ ಇಸವಿಯಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಪ್ರಕರಣದಲ್ಲಿ ರವಿಕುಮಾರ್‌ಗೆ ಆರು ತಿಂಗಳ ಜೈಲು ಶಿಕ್ಷೆ ಮತ್ತು 25 ಸಾವಿರ ರೂಪಾಯಿ ದಂಡ ವಿಧಿಸಿ 2017ರ ಆಗಸ್ಟ್‌ 30ರಂದು ಮ್ಯಾಜಿಸ್ಟೇಟ್ ನ್ಯಾಯಾಲಯ ಆದೇಶಿಸಿತ್ತು. ಶಿಕ್ಷೆ ರದ್ದುಪಡಿಸುವಂತೆ ಕೋರಿ ಆರೋಪಿ ಮತ್ತು ಶಿಕ್ಷೆ ಪ್ರಮಾಣ ಹೆಚ್ಚಿಸುವಂತೆ ಕೋರಿ ದೂರುದಾರರು (ಸಂತ್ರಸ್ತರು) ಪ್ರತ್ಯೇಕ ಮೇಲ್ಮನವಿ ಸಲ್ಲಿಸಿದ್ದರು.

ಈ ಅರ್ಜಿಗಳ ವಿಚಾರಣೆ ನಡೆಸಿದ್ದ ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯವು ಆರೋಪಿಯ ಮೇಲ್ಮನವಿ ವಜಾಗೊಳಿಸಿತು. ಇದೇ ವೇಳೆ ದೂರುದಾರರ ಮೇಲ್ಮನವಿ ಪುರಸ್ಕರಿಸಿ ಆರೋಪಿಗೆ ವಿಧಿಸಲಾಗಿದ್ದ ಶಿಕ್ಷೆ ಪ್ರಮಾಣವನ್ನು ಒಂಭತ್ತು ತಿಂಗಳಿಗೆ ಹೆಚ್ಚಿಸಿತ್ತು. ಇದರಿಂದ ಆರೋಪಿಗೆ ವಿಧಿಸಿರುವ ಒಂಭತ್ತು ತಿಂಗಳ ಜೈಲು ಶಿಕ್ಷೆ ಸೂಕ್ತವಾಗಿಲ್ಲ. ಶಿಕ್ಷೆ ಪ್ರಮಾಣ ಹೆಚ್ಚಿಸಬೇಕು ಎಂದು ಕೋರಿ ದೂರುದಾರರು ಹೈಕೋರ್ಟ್‌ಗೆ ಕ್ರಿಮಿನಲ್ ತೀರ್ಪು ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಮತ್ತೊಂದೆಡೆ ಆರೋಪಿ ಸಹ ಪ್ರತ್ಯೇಕ ಮೇಲ್ಮನವಿ ಸಲ್ಲಿಸಿ, ಶಿಕ್ಷೆ ರದ್ದುಪಡಿಸುವಂತೆ ಕೋರಿದ್ದರು.

ಆರು ತಿಂಗಳ ಶಿಕ್ಷೆ ಕಾಯಂ: ಸಿಆರ್‌ಪಿಸಿ ಸೆಕ್ಷನ್ 372 ಪ್ರಕಾರ ಆರೋಪಿಗಳಿಗೆ ವಿಚಾರಣಾಧೀನ ನ್ಯಾಯಾಲಯ ವಿಧಿಸಿರುವ ಶಿಕ್ಷೆಯನ್ನು ಹೆಚ್ಚಿಸುವಂತೆ ಕೋರಿ ಸಂತ್ರಸ್ತರು ಮೇಲ್ಮನವಿ ಸಲ್ಲಿಸಲು ಅವಕಾಶವಿಲ್ಲ. ಆದರೂ, ಸಂತ್ರಸ್ತರ ಮೇಲ್ಮನವಿ ಪರಿಗಣಿಸಿ ಅಧೀನ ನ್ಯಾಯಾಲಯ ಶಿಕ್ಷೆ ಪ್ರಮಾಣವನ್ನು ಒಂಭತ್ತು ತಿಂಗಳಿಗೆ ಹೆಚ್ಚಿಸಿರುವುದು ಸರಿಯಲ್ಲ. ಇದು ದೋಷಪೂರಿತವಾಗಿದೆ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್, ಸಂತ್ರಸ್ತರ ಕ್ರಿಮಿನಲ್ ಮರು ಪರಿಶೀಲನಾ ಅರ್ಜಿ ವಜಾಗೊಳಿಸಿತು. ಜತೆಗೆ, ಆರು ತಿಂಗಳಿಂದ ಒಂಭತ್ತು ತಿಂಗಳಿಗೆ ಶಿಕ್ಷೆ ಪ್ರಮಾಣ ಹೆಚ್ಚಿಸಿದ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿತು. ಆದರೆ, ಆರೋಪಿ ಬರೆದಿರುವ ಲೇಖನದಿಂದ ದೂರುದಾರರಿಗೆ ಮಾನಹಾನಿಯಾಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಿರುವುದು ಸೂಕ್ತವಾಗಿದೆ ಎಂದು ತೀರ್ಮಾನಿಸಿದ ಹೈಕೋರ್ಟ್, ಆರು ತಿಂಗಳ ಜೈಲು ಶಿಕ್ಷೆಯನ್ನು ಕಾಯಂಗೊಳಿಸಿತು.

B A Harish Gowda V. Ravi Kumar.pdf
Preview