ಶಾಲಾ ಶೈಕ್ಷಣಿಕ ಪ್ರವಾಸದ ವೇಳೆ ವಿದ್ಯಾರ್ಥಿ (ಬಾಲಕ) ಜೊತೆಗೆ ಸಲುಗೆಯಿಂದ ವರ್ತಿಸಿ ಪೋಟೊ ಹಾಗೂ ವಿಡಿಯೋ ಚಿತ್ರಿಸಿಕೊಂಡಿದ್ದಾರೆ ಎಂದು ಆರೋಪಿಸಲಾದ ಪ್ರೌಢಶಾಲೆ ಮುಖ್ಯ ಶಿಕ್ಷಕಿಯೊಬ್ಬರ ನಡೆಗೆ ಸಂಬಂಧಿಸಿದ ಪ್ರಕರಣದಲ್ಲಿ ಮುಖ್ಯ ಶಿಕ್ಷಕಿ ವರ್ತನೆಗೆ ಕರ್ನಾಟಕ ಹೈಕೋರ್ಟ್ ಸೋಮವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ತಮ್ಮ ವಿರುದ್ಧ ಪೋಕ್ಸೊ ಕಾಯಿದೆ ಅಡಿ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ಮತ್ತು ಅದಕ್ಕೆ ಸಂಬಂಧಿಸಿದಂತೆ ವಿಚಾರಣಾಧೀನ ನ್ಯಾಯಾಲಯದ ನ್ಯಾಯಿಕ ಪ್ರಕ್ರಿಯೆ ರದ್ದುಪಡಿಸಬೇಕು ಎಂದು ಕೋರಿ ಮುಖ್ಯ ಶಿಕ್ಷಕಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಮುಖ್ಯ ಶಿಕ್ಷಕಿ ಪರ ವಕೀಲರು “ಶಿಕ್ಷಕಿ ಮತ್ತು ವಿದ್ಯಾರ್ಥಿ ನಡುವೆ ಯಾವುದೇ ಲೈಂಗಿಕ ಉದ್ದೇಶವಿರಲಿಲ್ಲ. ಇಬ್ಬರ ನಡುವೆ ತಾಯಿ-ಮಗನ ಸಂಬಂಧವಿದೆ. ವಿದ್ಯಾರ್ಥಿಗೆ ಅರ್ಜಿದಾರರು ಕೇರ್ ಟೇಕಿಂಗ್ ಶಿಕ್ಷಕಿಯಾಗಿದ್ದಾರೆ. ಉತ್ಸಾಹದಿಂದ ಕೆಲವು ಅನಪೇಕ್ಷಿತ ಚಿತ್ರಗಳನ್ನು ತೆಗೆದುಕೊಂಡಿದ್ದಾರೆ ವಿನಾ ಅದರಲ್ಲಿ ಯಾವುದೇ ಕೆಟ್ಟ ಉದ್ದೇಶವಿಲ್ಲ” ಎಂದು ಸಮಜಾಯಿಷಿ ನೀಡಿದರು.
ಇದಕ್ಕೆ ಅತೃಪ್ತಿ ವ್ಯಕ್ತಪಡಿಸಿದ ಪೀಠವು “ವಿದ್ಯಾರ್ಥಿ ಜೊತೆ ಡುಯೆಟ್ ಆಡುತ್ತಿದ್ದರು ಎಂದು ನೀವು (ವಕೀಲರಿಗೆ) ಹೇಳುತ್ತಿದ್ದೀರಾ? ಶಿಕ್ಷಕಿಯೊಬ್ಬರು ನಡೆದುಕೊಳ್ಳುವ ರೀತಿ ಇದಾ? ಅವರು ವಿದ್ಯಾರ್ಥಿಯ ಜೊತೆ ತೆಗೆದುಕೊಂಡಿರುವುದು ಕೇರ್ ಟೇಕಿಂಗ್ ಚಿತ್ರಗಳೇ? ಅಲ್ಲಿ ಲೈಂಗಿಕ ಉದ್ದೇಶ ಇರಲಿಲ್ಲ ಎಂದರೆ ಸಾಮಾನ್ಯ ಉದ್ದೇಶವಿತ್ತೇ? ಶಿಕ್ಷಕಿ ತೆಗೆದುಕೊಂಡಿರುವ ಚಿತ್ರಗಳನ್ನು ನೋಡಿ, ಮತ್ತೆ ಅದನ್ನು ತಾಯಿ-ಮಗನ ಸಂಬಂಧ ಎನ್ನಬೇಡಿ. ಶಿಕ್ಷಕಿಯ ಈ ನಡೆ ಅಪೇಕ್ಷಿತವಾಗಿಲ್ಲ. ಆ ವಿಡಿಯೊಗಳನ್ನು ಶಿಕ್ಷಕಿ ಫೋನ್‌ನಲ್ಲಿ ಏಕೆ ಇಟ್ಟುಕೊಂಡಿದ್ದರು? ವಿದ್ಯಾರ್ಥಿಯ ಜೊತೆ ಯಾವುದದು ಉತ್ಸಾಹ?” ಎಂದು ಖಾರವಾಗಿ ಪ್ರಶ್ನಿಸಿದರು.
ವಿಚಾರಣಾಧೀನ ನ್ಯಾಯಾಲಯದ ವಿಚಾರಣೆ ರದ್ದುಪಡಿಸಲಾಗದು. ಆರೋಪಗಳನ್ನು ಕೈ ಬಿಡುವ ಸಂಬಂಧ ಅರ್ಜಿ ಸಲ್ಲಿಸಿ ಎಂದು ಮೌಖಿಕವಾಗಿ ಸೂಚಿಸಿದ ಪೀಠವು ವಿಚಾರಣೆಯನ್ನು ಆಗಸ್ಟ್ 2ಕ್ಕೆ ಮುಂದೂಡಿತು. ಮುಖ್ಯ ಶಿಕ್ಷಕಿ ವಿರುದ್ಧ ಪೋಕ್ಸೊ ಕಾಯಿದೆಯ ಸೆಕ್ಷನ್ 8 ಮತ್ತು 12ರ ಅಡಿಯಲ್ಲಿ ವಿಚಾರಣಾಧೀನ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿದೆ.