Rajat Sharma, Ragini Nayak and X  facebook
ಸುದ್ದಿಗಳು

ರಜತ್ ಶರ್ಮಾ ನೇರಪ್ರಸಾರದಲ್ಲಿ ರಾಗಿಣಿ ನಿಂದನೆ ಮಾಡಿರುವ ವಿಡಿಯೋ ನಕಲಿ ಅಲ್ಲ: ಎಕ್ಸ್‌ ಕಾರ್ಪ್‌

ಪ್ರಜ್ಞಾಪೂರ್ವಕವಾಗಿ ಆಲಿಸಿದರೆ ರಾಗಿಣಿ ನಾಯಕ್‌ ವಿರುದ್ಧ ರಜತ್‌ ಶರ್ಮಾ ನಿಂದನಾತ್ಮಕವಾಗಿ ಮಾತನಾಡಿರುವುದನ್ನು ಕೇಳಬಹುದಾಗಿದೆ. ಈ ವಿಡಿಯೋ ಇಂಡಿಯಾ ಟಿವಿಯಲ್ಲಿ ಲಭ್ಯವಿದೆ ಎಂದು ಎಕ್ಸ್‌ ಕಾರ್ಪ್‌ ಅರ್ಜಿಯಲ್ಲಿ ವಿವರಿಸಿದೆ.

Bar & Bench

ಕಾಂಗ್ರೆಸ್‌ ವಕ್ತಾರೆ ರಾಗಿಣಿ ನಾಯಕ್‌ ವಿರುದ್ಧ ಪತ್ರಕರ್ತ ರಜತ್‌ ಶರ್ಮಾ ಅವರು ನಿಂದಾನಾತ್ಮಕವಾಗಿ ಮಾತನಾಡಿದ್ದಾರೆ ಎಂದು ಆಕ್ಷೇಪಿಸಿ ಕಾಂಗ್ರೆಸ್‌ ನಾಯಕರು ಹಂಚಿಕೊಂಡಿರುವ ವಿಡಿಯೋ ನಕಲಿ ಅಥವಾ ತಿರುಚಿರುವುದಲ್ಲ ಎಂದು ಎಕ್ಸ್‌ ಕಾರ್ಪ್‌ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.

ಆಕ್ಷೇಪಾರ್ಹವಾದ ವಿಡಿಯೋವನ್ನು ತೆಗೆದು ಹಾಕುವಂತೆ ಎಕ್ಸ್‌ ಕಾರ್ಪ್‌, ಕಾಂಗ್ರೆಸ್‌ ನಾಯಕರಾದ ರಾಗಿಣಿ ನಾಯಕ್‌, ಜೈರಾಮ್‌ ರಮೇಶ್‌ ಮತ್ತು ಪವನ್‌ ಖೇರಾಗೆ ನಿರ್ದೇಶಿಸಿರುವ ಏಕಪಕ್ಷೀಯ ಪ್ರತಿಬಂಧಕಾದೇಶ ತೆರವು ಮಾಡಲು ಕೋರಿ ದೆಹಲಿ ಹೈಕೋರ್ಟ್‌ಗೆ ಎಕ್ಸ್‌ ಕಾರ್ಪ್‌ ಅರ್ಜಿ ಸಲ್ಲಿಸಿದೆ.

ಇಡೀ ಪ್ರಕರಣದ ಕಚ್ಚಾ ವಿಡಿಯೋ ಇಂಡಿಯಾ ಟಿವಿಯ (ರಜತ್‌ ಶರ್ಮಾ ಮಾಲೀಕತ್ವ) ಯೂಟ್ಯೂಬ್‌ ಚಾನಲ್‌ನಲ್ಲಿ ಈಗಲೂ ಲಭ್ಯವಿದೆ. ಇದರಲ್ಲಿ ರಜತ್‌ ಶರ್ಮಾ ಅವರು ರಾಗಿಣಿ ವಿರುದ್ದ ನಿಂದಾನಾತ್ಮಕ ಮಾತುಗಳನ್ನು ಆಡಿದ್ದಾರೆ ಎಂದು ಸಾಮಾಜಿಕ ಮಾಧ್ಯಮವಾದ ಎಕ್ಸ್‌ ಕಾರ್ಪ್‌ ಹೇಳಿದೆ.

ಎಕ್ಸ್‌ ಕಾರ್ಪ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ರಾಜಶೇಖರ್‌ ರಾವ್‌ ಅವರು ರಜತ್‌ ಶರ್ಮಾ ಅವರ ಇಡೀ ಪ್ರಕರಣ ಅವರು ತಾನು ನಿಂದಾನಾತ್ಮಕ ಭಾಷೆಯನ್ನು ರಾಗಿಣಿ ವಿರುದ್ಧ ಬಳಿಸಿಲ್ಲ ಎಂಬುದಾಗಿದೆ. ಆದರೆ, ಇಯರ್‌ಫೋನ್‌ ಬಳಸಿ, ಗಮನಕೊಟ್ಟು ವಿಡಿಯೊ ಆಲಿಸಿದರೆ ಅವರು ಗೊಣಗುತ್ತಿರುವುದು ಸ್ಪಷ್ಟವಾಗಿ ಕೇಳಿಸುತ್ತದೆ ಎಂದರು.

ಕಾಂಗ್ರೆಸ್‌ ನಾಯಕರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಪ್ರಶಾಂತೊ ಚಂದ್ರ ಅವರು ಪ್ರತಿಬಂಧಕಾದೇಶ ತೆರವು ಮಾಡಲು ಕೋರಿ ತಾನೂ ಅರ್ಜಿ ಸಲ್ಲಿಸಿದ್ದೇನೆ ಎಂದರು.

ರಜತ್‌ ಶರ್ಮಾ ಪ್ರತಿನಿಧಿಸಿದ್ದ ಹಿರಿಯ ವಕೀಲ ಸಂದೀಪ್‌ ಸೇಥಿ ಅವರು ನ್ಯಾಯಾಲಯದ ಆದೇಶದ ಹೊರತಾಗಿಯೂ ಕಾಂಗ್ರೆಸ್‌ ನಾಯಕರು ಸ್ವಯಂಪ್ರೇರಿತವಾಗಿ ಟ್ವೀಟ್‌ ಅಳಿಸಿ ಹಾಕಿಲ್ಲ ಎಂದರು.

ಆಗ ನ್ಯಾಯಮೂರ್ತಿ ಮನ್ಮೀತ್‌ ಪ್ರೀತಮ್‌ ಸಿಂಗ್‌ ಅರೋರಾ ಅವರು ನ್ಯಾಯಾಲಯದ ಆದೇಶ ಪಾಲಿಸುವಂತೆ ಪ್ರತಿವಾದಿಗಳಿಗೆ ಆದೇಶಿಸಿ, ಟ್ವೀಟ್‌ ಅಳಿಸಿ ಹಾಕುವಂತೆ ಸೂಚಿಸಿದರು.

ಎಕ್ಸ್‌ನಲ್ಲಿ ಪ್ರಕಟಿಸಿರುವ ವಿಡಿಯೊ ತೆಗೆದು ಹಾಕುವಂತೆ ಜೂನ್‌ 14ರಂದು ಹೈಕೋರ್ಟ್‌ನ ಏಕಸದಸ್ಯ ಪೀಠವು ರಾಗಿಣಿ ನಾಯಕ್‌, ಜೈರಾಮ್‌ ರಮೇಶ್‌ ಮತ್ತು ಪವನ್‌ ಖೇರಾ ವಿರುದ್ಧ ಏಕಪಕ್ಷೀಯ ಪ್ರತಿಬಂಧಕಾದೇಶ ಮಾಡಿತ್ತು.

ಲೋಕಸಭಾ ಚುನಾವಣೆಯ ಫಲಿತಾಂಶದ ಚರ್ಚೆಯ ದಿನದಂದು ಶರ್ಮಾ ಅವರು ಟಿವಿಯ ನೇರಪ್ರಸಾರ ಕಾರ್ಯಕ್ರಮದಲ್ಲಿ ರಾಗಿಣಿ ಅವರನ್ನು ನಿಂದಿಸಿದ್ದಾರೆ ಎಂದು ಕಾಂಗ್ರೆಸ್‌ ನಾಯಕರು ಆರೋಪಿಸಿದ್ದರು. ಈ ಸಂಬಂಧ ರಾಗಿಣಿ, ರಮೇಶ್‌ ಮತ್ತು ಖೇರಾ ವಿರುದ್ಧ ರಜತ್‌ ಶರ್ಮಾ ಅವರು ₹100 ಕೋಟಿ ಪರಿಹಾರ ಕೋರಿ ಮಾನನಷ್ಟ ದಾವೆ ದೂಡಿದ್ದಾರೆ.