ತಮಿಳುನಾಡಿನ ನಟ ಮತ್ತು ರಾಜಕಾರಣಿ ವಿಜಯ್ ಅವರ ಪತ್ನಿ ಸಂಗೀತಾ ವಿಜಯ್ ಅವರು ವಿಚ್ಛೇದನ ಕೋರಿ ಚೆಂಗಲ್ಪಟ್ಟು ನ್ಯಾಯಾಲಯದ ಮೊರೆ ಹೋಗಿದ್ದಾರೆ. ವಿಜಯ್ ಅವರು ನಟಿಯೊಬ್ಬರೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಾರೆ ಎಂದು ಅವರು ತಮ್ಮ ವಿಚ್ಛೇದನಕ್ಕೆ ಕಾರಣವನ್ನು ನೀಡಿದ್ದಾರೆ [ಸಂಗೀತಾ ವಿಜಯ್ ವಿರುದ್ಧ ಜೋಸೆಫ್ ವಿಜಯ್ ಚಂದ್ರಶೇಖರ್].
ವಿಚ್ಛೇದನ ಮತ್ತು ಜೀವನಾಂಶವನ್ನು ಕೋರಿ ಸಂಗೀತಾ ಅವರು ಡಿಸೆಂಬರ್ 3, 2025 ರಂದು ಚೆಂಗಲ್ಪಟ್ಟು ಜಿಲ್ಲಾ ನ್ಯಾಯಾಲಯದಲ್ಲಿ ವಿಶೇಷ ವಿವಾಹ ಕಾಯ್ದೆ 1954ರ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಸುಮಾರು ಮೂರು ತಿಂಗಳ ಹಿಂದೆಯೇ ಅರ್ಜಿ ಸಲ್ಲಿಕೆಯಾಗಿದ್ದರೂ ಮಾಧ್ಯಮಗಳು ಹಾಗೂ ಸಾರ್ವಜನಿಕ ವಲಯಕ್ಕೆ ಈ ಕುರಿತಾದ ಮಾಹಿತಿ ಫೆಬ್ರವರಿ 27 ರಂದು ಮಾತ್ರವೇ ದೊರೆತಿದೆ.
ಅರ್ಜಿಯಲ್ಲಿ ವಿವರಿಸಿರುವಂತೆ ವಿಜಯ್ ಮತ್ತು ಸಂಗೀತಾ ಅವರ ವಿವಾಹವು ಮೊದಲಿಗೆ ಜುಲೈ 10, 1998 ರಂದು ಬ್ರಿಟನ್‌ನಲ್ಲಿ ನೋಂದಾಯಿಸಲ್ಪಟ್ಟಿತು. ನಂತರ ವಿವಾಹವನ್ನು ಆಗಸ್ಟ್ 25, 1999 ರಂದು ಚೆನ್ನೈನಲ್ಲಿ ಹಿಂದೂ ವಿಧಿವಿಧಾನಗಳ ಮೂಲಕ ನೆರವೇರಿಸಲಾಯಿತು.
ತಮ್ಮಿಬ್ಬರ ನಡುವಿನ ವಿವಾಹವು ಸರಿಪಡಿಸಲಾಗದ ಹಂತ ತಲುಪಿದ್ದು, ಕೇವಲ ಕಾಗದದ ಮೇಲೆ ಮಾತ್ರವೇ ಉಳಿದಿದೆ ಎಂದು ಅರ್ಜಿಯಲ್ಲಿ ಸಂಗೀತಾ ವಿವರಿಸಿದ್ದಾರೆ.
ಸಮಸ್ಯೆಯನ್ನು ಸೌಹಾರ್ದಯುತವಾಗಿ ಪರಿಹರಿಸಲು 2021ರ ಸೆಪ್ಟೆಂಬರ್‌ನಿಂದ 2022ರ ಫೆಬ್ರವರಿವರೆಗೆ, ಕಾನೂನು ಪತ್ರವ್ಯವಹಾರದ ಮೂಲಕ ಪ್ರಯತ್ನಗಳನ್ನು ಮಾಡಲಾಯಿತು. 2024ರ ಆಗಸ್ಟ್‌ನಿಂದ 2025ರ ಫೆಬ್ರವರಿಯ ನಡುವೆ ಈ ವಿಷಯವಾಗಿ ಇತ್ಯರ್ಥಕ್ಕೆ ಬರುವ ಪ್ರಯತ್ನದಲ್ಲಿ ಮತ್ತಷ್ಟು ನೋಟಿಸ್‌ಗಳು ಮತ್ತು ಪತ್ರವ್ಯವಹಾರಗಳ ವಿನಿಮಯ ನಡೆಯಿತು ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ವಿವಾಹ ವಿಚ್ಛೇದನದ ಹೊರತಾಗಿ, ಸಂಗೀತಾ ಈ ಕೆಳಗಿನ ಕೋರಿಕೆಗಳನ್ನು ಮಂಡಿಸಿದ್ದಾರೆ:
- ಪ್ರಕರಣದ ಅಂತಿಮ ಇತ್ಯರ್ಥವಾಗುವವರೆಗೆ ಅಥವಾ ಪರ್ಯಾಯ ವಸತಿ ಒದಗಿಸುವವರೆಗೆ ತಮಗೆ ವೈವಾಹಿಕ ಗೃಹದಲ್ಲಿ ವಾಸಿಸುವ ಹಕ್ಕು ನೀಡಬೇಕು;
- ವಿಜಯ್ ಅವರ ಆದಾಯ ಮತ್ತು ಸಾಮಾಜಿಕ ಸ್ಥಾನಮಾನಕ್ಕೆ ಅನುಗುಣವಾಗಿ ಶಾಶ್ವತ ಜೀವನಾಂಶ ನೀಡಬೇಕು;
- ವಿಚಾರಣೆಯ ವೆಚ್ಚಗಳನ್ನು ವಿಜಯ್ ಅವರೇ ಭರಿಸಬೇಕು.
ಈ ಬೇಡಿಕೆಗಳಲ್ಲದೆ, ನ್ಯಾಯಾಲಯವು ವಿಚಾರಣೆಯನ್ನು ಗೋಪ್ಯವಾಗಿ ನಡೆಸಬೇಕು. ಪಕ್ಷಕಾರರು ಹಾಗೂ ಅವರ ಮಕ್ಕಳ ಘನತೆ ಮತ್ತು ಗೌಪ್ಯತೆಯನ್ನು ರಕ್ಷಿಸುವ ಸಲುವಾಗಿ ಪ್ರಕರಣಕ್ಕೆ ಸಂಬಂಧಿಸಿದ ವಿಷಯಗಳನ್ನು ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳು ಪ್ರಕಟಿಸುವುದನ್ನು ನಿರ್ಬಂಧಿಸಬೇಕು ಎಂದು ಸಹ ಅವರು ವಿನಂತಿಸಿದ್ದಾರೆ.
ಪ್ರಕರಣವು ಏಪ್ರಿಲ್ 2026 ರಲ್ಲಿ ವಿಚಾರಣೆಗೆ ಬರುವ ನಿರೀಕ್ಷೆಯಿದೆ.