Vijay Mallya and Karnataka HC 
ಸುದ್ದಿಗಳು

ದೇಶಭ್ರಷ್ಟ ಉದ್ಯಮಿ ವಿಜಯ್ ಮಲ್ಯ ಐಷಾರಾಮಿ ಜೀವನಶೈಲಿಯೇ ₹6,203 ಕೋಟಿ ಸಾಲದ ಇತ್ಯರ್ಥಕ್ಕೆ ಅಡ್ಡಿ: ಹೈಕೋರ್ಟ್

ಯುನೈಟೆಡ್ ಬ್ರೆವರೀಸ್ ಲಿಮಿಟೆಡ್‌ನಲ್ಲಿ ವಿಜಯ್ ಮಲ್ಯ ಹೊಂದಿರುವ ಅಡಮಾನ ಇಟ್ಟ ಷೇರುಗಳ ಮೇಲಿನ ಹಕ್ಕು ಪ್ರತಿಪಾದನೆಗೆ ಸಂಬಂಧಿಸಿದ ವಿವಾದದ ವಿಚಾರಣೆ ವೇಳೆ ನ್ಯಾಯಾಲಯದ ಅಭಿಪ್ರಾಯ.

Siddesh M S

ನಿಷ್ಕ್ರಿಯಗೊಂಡಿರುವ ಕಿಂಗ್‌ಫಿಷರ್ ಏರ್‌ಲೈನ್ಸ್‌ಗೆ ಸಂಬಂಧಿಸಿದ ಸಾಲ ವಸೂಲಾತಿ ಪ್ರಕ್ರಿಯೆ ಇತ್ಯರ್ಥಗೊಳ್ಳಲು ಅದರ ಮಾಜಿ ಪ್ರವರ್ತಕ ವಿಜಯ್ ಮಲ್ಯ ಅವರ “ಐಷಾರಾಮಿ ಜೀವನಶೈಲಿ” ಅಡ್ಡಿಯಾಗುತ್ತಿರುವಂತೆ ಕಾಣುತ್ತಿದೆ ಎಂದು ಕರ್ನಾಟಕ ಹೈಕೋರ್ಟ್ ಬುಧವಾರ ಅಭಿಪ್ರಾಯಪಟ್ಟಿದೆ.

ಸಾಲಕ್ಕೆ ಸಂಬಂಧಿಸಿದಂತೆ ಅಡಮಾನ ಇಡಲಾಗಿದ್ದ ಯುನೈಟೆಡ್ ಬ್ರೆವರೀಸ್ ಲಿಮಿಟೆಡ್‌ (ಯುಬಿಎಲ್)ನಲ್ಲಿನ ವಿಜಯ್ ಮಲ್ಯ ಅವರ ಷೇರುಗಳ ಮೇಲಿನ ಹಕ್ಕು ಪ್ರತಿಪಾದನೆಗೆ ಸಂಬಂಧಿಸಿದ ವಿವಾದದಲ್ಲಿ ಡಿಯಾಗಿಯೋ ಹೋಲ್ಡಿಂಗ್ಸ್ ನೆದರ್‌ಲ್ಯಾಂಡ್ಸ್ ಬಿವಿಗೆ ಪರಿಹಾರ ಒದಗಿಸುವ ವೇಳೆ ನ್ಯಾಯಮೂರ್ತಿಗಳಾದ ಡಿ ಕೆ ಸಿಂಗ್ ಮತ್ತು ಟಿ ಎಂ ನದಾಫ್ ಅವರ ವಿಭಾಗೀಯ ಪೀಠವು ಮೇಲಿನಂತೆ ಹೇಳಿದೆ.

Justice D K Singh and Justice T M Nadaf

ಈ ಷೇರುಗಳ ಮೇಲಿನ ಬ್ಯಾಂಕ್‌ಗಳ ಹಕ್ಕಿಗಿಂತ ಡಿಯಾಜಿಯೊ ಕಂಪನಿಯ ಹಕ್ಕು ಹೆಚ್ಚಿನ ಆದ್ಯತೆಯನ್ನು ಹೊಂದಿದೆ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಕಿಂಗ್‌ಫಿಷರ್ ಏರ್‌ಲೈನ್ಸ್‌ಗೆ ನೀಡಲಾಗಿದ್ದ ₹6,203 ಕೋಟಿ ಸಾಲಕ್ಕೆ ಪ್ರತಿಯಾಗಿ ಬ್ಯಾಂಕ್‌ಗಳು ಈಗಾಗಲೇ ₹14,131.6 ಕೋಟಿ ಮೌಲ್ಯದ ಆಸ್ತಿಗಳನ್ನು ವಸೂಲಿ ಮಾಡಿವೆ ಎಂದು ನ್ಯಾಯಾಲಯ ಹೇಳಿದೆ. ಹೀಗಾಗಿ, ಯುನೈಟೆಡ್ ಬ್ರೆವರೀಸ್ ಲಿಮಿಟೆಡ್‌ನ ಷೇರುಗಳ ಮೇಲೂ ಹಕ್ಕು ಪ್ರತಿಪಾದಿಸಲು ಬ್ಯಾಂಕ್‌ಗಳು ಯಾವುದೇ ಸಮರ್ಥನೆ ನೀಡಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಬ್ಯಾಂಕ್‌ಗಳೊಂದಿಗಿನ ಸಾಲದ ವಿವಾದ ಇನ್ನೂ ಇತ್ಯರ್ಥಗೊಳ್ಳದೆ ಉಳಿಯಲು ವಿಜಯ್ ಮಲ್ಯ ಅವರ ಅತಿರೇಕದ ಜೀವನಶೈಲಿಯೇ ಕಾರಣವಾಗಿರುವಂತೆ ಕಾಣುತ್ತಿದೆ ಎಂದೂ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

“ನಿಷ್ಕ್ರಿಯಗೊಂಡಿರುವ ಕಿಂಗ್‌ಫಿಷರ್ ಏರ್‌ಲೈನ್ಸ್ ಲಿಮಿಟೆಡ್‌ಗೆ ನೀಡಲಾದ ₹6,203 ಕೋಟಿ ಸಾಲಕ್ಕೆ ಸಂಬಂಧಿಸಿದಂತೆ ಬ್ಯಾಂಕ್‌ಗಳ ಒಕ್ಕೂಟದ ಹಕ್ಕುಗಳಿಗೆ ಅಂತಿಮ ಇತ್ಯರ್ಥ ನೀಡುವ ಪ್ರಕ್ರಿಯೆಗೆ ಡಾ. ವಿಜಯ್ ಮಲ್ಯ ಅವರ ಐಷಾರಾಮಿ ಜೀವನಶೈಲಿ, ಅತಿಯಾದ ವೈಯಕ್ತಿಕ ಭೋಗ ಮತ್ತು ವೈಯಕ್ತಿಕ ಪ್ರತಿಷ್ಠೆಯ ವ್ಯಾಮೋಹ ಅಡ್ಡಿಯಾಗುತ್ತಿವೆ ಎಂಬುದು ನಮ್ಮ ಅಭಿಪ್ರಾಯವಾಗಿದೆ” ಎಂದು ನ್ಯಾಯಾಲಯ ಹೇಳಿದೆ.

ಸಾಲ ವಸೂಲಾತಿ ಪ್ರಕ್ರಿಯೆಗೆ ಈಗ ಅಂತಿಮ ತೆರೆ ಎಳೆಯುವುದು ಬ್ಯಾಂಕ್‌ಗಳ ಒಕ್ಕೂಟ ಮತ್ತು ಕೇಂದ್ರ ಸರ್ಕಾರಕ್ಕೆ ಬಿಟ್ಟ ವಿಚಾರ ಎಂದುಪೀಠ ಹೇಳಿದೆ.

“₹6,203 ಕೋಟಿ ಸಾಲಕ್ಕೆ ಪ್ರತಿಯಾಗಿ ₹14,131.6 ಕೋಟಿ ಮೌಲ್ಯದ ಆಸ್ತಿಗಳನ್ನು ಬ್ಯಾಂಕ್‌ಗಳ ಒಕ್ಕೂಟಕ್ಕೆ ಮರಳಿಸಿರುವಾಗ, ಈ ಪ್ರಕ್ರಿಯೆಗಳಿಗೆ ಇತಿಶ್ರೀ ಹಾಡುವುದು ಬ್ಯಾಂಕ್‌ಗಳ ಒಕ್ಕೂಟ ಮತ್ತು ಭಾರತ ಸರ್ಕಾರಕ್ಕೆ ಬಿಟ್ಟ ವಿಚಾರವಾಗಿದೆ,” ಎಂದು ನ್ಯಾಯಾಲಯ ಹೇಳಿದೆ.

ವಿಜಯ್ ಮಲ್ಯ ಅವರ ಉದ್ಯಮ ಸಾಮ್ರಾಜ್ಯದ ಪತನದ ಕುರಿತು ಅಭಿಪ್ರಾಯ ದಾಖಲಿಸುವ ಮೂಲಕ ನ್ಯಾಯಾಲಯ ತೀರ್ಪು ಆರಂಭಿಸಿದ್ದು, ಮಲ್ಯ ಅವರ ಅತಿಯಾದ ವೈಯಕ್ತಿಕ ಭೋಗ, ವೈಯಕ್ತಿಕ ಪ್ರತಿಷ್ಠೆಯ ವ್ಯಾಮೋಹ, ಅಹಂಕಾರ ಮತ್ತು ಅಜಾಗರೂಕ ವರ್ತನೆಗಳು ಅವರ ಉದ್ಯಮ ಸಾಮ್ರಾಜ್ಯದ ಪತನಕ್ಕೆ ಕಾರಣವಾಗಿವೆ ಎಂದು ನ್ಯಾಯಾಲಯ ಉಲ್ಲೇಖಿಸಿದೆ.

“ಐಷಾರಾಮಿ ಜೀವನಶೈಲಿ ಮತ್ತು ಅತಿಯಾದ ವೈಯಕ್ತಿಕ ಭೋಗದಿಂದಾಗಿ ವಿಜಯ್ ಮಲ್ಯ ಅವರ ಉದ್ಯಮ ಸಾಮ್ರಾಜ್ಯ ಕುಸಿದಿರುವುದು, ಇತಿಹಾಸದಲ್ಲಿ ದೀರ್ಘಕಾಲ ನೆನಪಿನಲ್ಲಿ ಉಳಿಯುವ ಕಾರ್ಪೊರೇಟ್ ಜಗತ್ತಿನ ಕಥನಗಳಲ್ಲಿ ಒಂದಾಗಿದೆ” ಎಂದು ನ್ಯಾಯಾಲಯ ಹೇಳಿದೆ.

ವಿಜಯ್ ಮಲ್ಯ ಅವರ ಐಷಾರಾಮಿ ಜೀವನಶೈಲಿಯೇ ಅವರ ಉದ್ಯಮ ಸಾಮ್ರಾಜ್ಯದ ಗುರುತಾಗಿತ್ತು. ಆದರೆ, ಸಾಲದ ಬಲದ ಮೇಲೆ ಕಿಂಗ್‌ಫಿಷರ್ ಏರ್‌ಲೈನ್ಸ್ ಕಟ್ಟಲು ಅವರು ನಡೆಸಿದ ಮಹತ್ವಾಕಾಂಕ್ಷೆಯ ಸಾಹಸವೇ ಕೊನೆಗೆ ಅವರ ಸಾಮ್ರಾಜ್ಯದ ಭಾರೀ ಪತನಕ್ಕೆ ನಾಂದಿ ಹಾಡಿತು.
ಕರ್ನಾಟಕ ಹೈಕೋರ್ಟ್‌

ಕಾರ್ಯಾಚರಣೆಯಲ್ಲಿನ ಶ್ರೇಷ್ಠತೆ ಮತ್ತು ಆರ್ಥಿಕ ಶಿಸ್ತಿಗೆ ಆದ್ಯತೆ ನೀಡುವ ಬದಲು ವೈಯಕ್ತಿಕ ಪ್ರತಿಷ್ಠೆ, ಮಿತಿಮೀರಿದ ಅಹಂಕಾರ ಹಾಗೂ ಭೋಗವಿಲಾಸಕ್ಕೆ ಆದ್ಯತೆ ನೀಡಿದಾಗ, ದಶಕಗಳ ಪರಿಶ್ರಮದಿಂದ ಗಳಿಸಿದ ಯಶಸ್ಸು ಕೂಡ ಕ್ಷಣಾರ್ಧದಲ್ಲಿ ಕರಗಿಹೋಗಬಹುದು. ಶಿಸ್ತುಬದ್ಧ ಪರಿಶ್ರಮದ ಸ್ಥಾನವನ್ನು ವ್ಯಕ್ತಿಪೂಜೆ ಮತ್ತು ಅಹಂಕಾರ ಆಕ್ರಮಿಸಿಕೊಂಡಾಗ, ಅದರ ಅಂತಿಮ ಪರಿಣಾಮ ದಿವಾಳಿತನ ಮತ್ತು ಸರ್ವನಾಶವಾಗಬಹುದು ಎಂದು ಪೀಠ ಹೇಳಿದೆ.

ಮದ್ಯದ ಉದ್ಯಮದಲ್ಲಿ ವಿಜಯ್ ಮಲ್ಯ ಅವರ ಏಳಿಗೆ ಮತ್ತು ಅವರ ಉದ್ಯಮ ಸಾಮ್ರಾಜ್ಯದ ವಿಸ್ತರಣೆಯನ್ನು ಉಲ್ಲೇಖಿಸಿದ ಪೀಠವು ಮಲ್ಯ ʼಕಿಂಗ್ ಆಫ್ ಗುಡ್ ಟೈಮ್ಸ್’ ಎಂದೇ ಪ್ರಸಿದ್ಧರಾಗಿದ್ದರು. ಅವರ ಐಷಾರಾಮಿ ಜೀವನಶೈಲಿಯು ಅವರು ನಿರ್ಮಿಸಿದ ಬ್ರ್ಯಾಂಡ್‌ನ ಅವಿಭಾಜ್ಯ ಗುರುತಾಗಿ ಬೆಳೆದಿತ್ತು ಎಂದು ನ್ಯಾಯಾಲಯ ಹೇಳಿದೆ.

ಕಿಂಗ್‌ಫಿಷರ್ ಏರ್‌ಲೈನ್ಸ್‌ಗಾಗಿ ವಿಜಯ್ ಮಲ್ಯ ಮಾಡಿದ ಸಾಲದ ಮೇಲಿನ ಹೂಡಿಕೆ ಕೊನೆಗೆ ವಿಫಲವಾಯಿತು. ಇದರಿಂದ ಅವರು ಪರಾರಿಯಾದ ಆರ್ಥಿಕ ಅಪರಾಧಿ ಎನಿಸಿಕೊಂಡರು ಎಂದು ನ್ಯಾಯಾಲಯ ಹೇಳಿದೆ.

“ವಿಜಯ್ ಮಲ್ಯ ಅವರ ಉದಾಹರಣೆಯು ಒಂದು ಉದ್ಯಮ ಸಾಮ್ರಾಜ್ಯವನ್ನು ಕಟ್ಟಲು ದಶಕಗಳ ಪರಿಶ್ರಮ ಬೇಕು, ಆದರೆ ಅತಿಯಾದ ಐಷಾರಾಮಿ ಜೀವನ ಮತ್ತು ದುಂದುವೆಚ್ಚದಿಂದ ಅದನ್ನು ನಾಶಪಡಿಸಲು ಕೆಲವೇ ವರ್ಷಗಳು ಸಾಕು ಎಂಬುದನ್ನು ತೋರಿಸುತ್ತದೆ,” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ವಿಜಯ್ ಮಲ್ಯ ಅವರಂತಹ ಉದಾಹರಣೆಗಳು ಒಂದು ಉದ್ಯಮ ಸಾಮ್ರಾಜ್ಯವನ್ನು ಕಟ್ಟಲು ದಶಕಗಳ ಕಠಿಣ ಪರಿಶ್ರಮ ಮತ್ತು ಶಿಸ್ತು ಬೇಕು, ಆದರೆ ಅತಿಯಾದ ಭೋಗವಿಲಾಸದಿಂದ ಅದನ್ನು ನಾಶಪಡಿಸಲು ಕೆಲವೇ ವರ್ಷಗಳು ಸಾಕು ಎಂಬುದನ್ನು ತೋರಿಸುತ್ತವೆ.
ಕರ್ನಾಟಕ ಹೈಕೋರ್ಟ್‌

ಪ್ರಕರಣದ ಹಿನ್ನೆಲೆ: ಯುನೈಟೆಡ್ ಬ್ರೆವರೀಸ್ ಲಿಮಿಟೆಡ್‌ (ಯುಬಿಎಲ್)ನಲ್ಲಿ ವಿಜಯ್ ಮಲ್ಯ ವೈಯಕ್ತಿಕವಾಗಿ ಹೊಂದಿದ್ದ ಷೇರುಗಳು ಹಾಗೂ ಅವರ ಪುತ್ರ ಸಿದ್ಧಾರ್ಥ ಮಲ್ಯ ಅವರೊಂದಿಗೆ ಜಂಟಿಯಾಗಿ ಹೊಂದಿದ್ದ ಷೇರುಗಳಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ.

ಮಲ್ಯ ಅವರ ವಿದೇಶಿ ಕಂಪನಿಯಾದ ವ್ಯಾಟ್ಸನ್ ಲಿಮಿಟೆಡ್‌ಗೆ ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ (ಎಸ್‌ಸಿಬಿ) 2013ರ ಜುಲೈನಲ್ಲಿ 135 ಮಿಲಿಯನ್ ಅಮೆರಿಕನ್ ಡಾಲರ್ (ಅಂದಾಜು ₹806.6 ಕೋಟಿ) ಸಾಲ ನೀಡಿತ್ತು. ಈ ಸಾಲಕ್ಕೆ ಭದ್ರತೆಯಾಗಿ ಯುಬಿಎಲ್ ಷೇರುಗಳನ್ನು ಅಡಮಾನ ಇಡಲಾಗಿತ್ತು. ಡಿಯಾಗಿಯೋ ಈ ಸಾಲಕ್ಕೆ ಖಾತರಿ ನೀಡಿತ್ತು.

ವ್ಯಾಟ್ಸನ್ ಲಿಮಿಟೆಡ್ ಸಾಲ ಮರುಪಾವತಿಸಲು ವಿಫಲವಾದ ಹಿನ್ನೆಲೆಯಲ್ಲಿ, 2016ರ ಜನವರಿಯಲ್ಲಿ ಡಿಯಾಗಿಯೋ ಬ್ಯಾಂಕ್‌ಗೆ 140.97 ಮಿಲಿಯನ್ ಅಮೆರಿಕನ್ ಡಾಲರ್ (ಅಂದಾಜು ₹933 ಕೋಟಿ) ಪಾವತಿಸಿತ್ತು. ಈ ಮೂಲಕ ಎಸ್‌ಸಿಬಿಯ ಸ್ಥಾನಕ್ಕೆ ತಾನು ಬಂದಿರುವುದಾಗಿ ಡಿಯಾಗಿಯೋ ಪ್ರತಿಪಾದಿಸಿತು.

ಆದರೆ, ಕಿಂಗ್‌ಫಿಷರ್ ಏರ್‌ಲೈನ್ಸ್ ವಿರುದ್ಧದ ಸಾಲ ವಸೂಲಾತಿ ಪ್ರಕ್ರಿಯೆಯಲ್ಲಿ ಬ್ಯಾಂಕ್‌ಗಳ ಒಕ್ಕೂಟವು ಕೆಲವು ಮಧ್ಯಂತರ ಆದೇಶಗಳನ್ನು ಪಡೆದುಕೊಂಡಿದ್ದವು. ಈ ಆದೇಶಗಳ ಪರಿಣಾಮವಾಗಿ ಯುಬಿಎಲ್ ಷೇರುಗಳ ಮೇಲಿನ ವಹಿವಾಟಿಗೆ ನಿರ್ಬಂಧ ಉಂಟಾಗಿತ್ತು.

ಕಿಂಗ್‌ಫಿಷರ್ ಏರ್‌ಲೈನ್ಸ್ ತೀರಿಸಬೇಕಿದ್ದ ₹6,203 ಕೋಟಿ ಸಾಲವನ್ನು ವಸೂಲಿ ಮಾಡಲು ಯುಬಿಎಲ್ ಷೇರುಗಳನ್ನು ಬಳಸಿಕೊಳ್ಳಬಹುದು ಎಂದು ಬ್ಯಾಂಕ್‌ಗಳ ಒಕ್ಕೂಟ ವಾದಿಸಿತ್ತು. ಅಲ್ಲದೆ, ಷೇರುಗಳನ್ನು ಡಿಯಾಗಿಯೋ ಪರವಾಗಿ ಅಡಮಾನ ಇಟ್ಟಿರುವುದು ತಮ್ಮ ಹಕ್ಕುಗಳಿಗೆ ವಿರುದ್ಧವಾಗಿ ಕಾನೂನುಬದ್ಧವಾಗಿಲ್ಲ ಎಂದು ಬ್ಯಾಂಕ್‌ಗಳು ಪ್ರತಿಪಾದಿಸಿದ್ದವು.

2010ರ ಡಿಸೆಂಬರ್ 21ರಂದು ಮಾಡಿಕೊಂಡಿದ್ದ ಮಾಸ್ಟರ್ ಡೆಟ್ ರೀಕಾಸ್ಟ್ ಒಪ್ಪಂದದಡಿ ವಿಜಯ್ ಮಲ್ಯ ಮತ್ತು ಯುಬಿಎಲ್ ಸಾಲ ಮರುಪಾವತಿಗೆ ಖಾತರಿ ನೀಡಿದ್ದರು.

Dr. Aditya Sondhi, Senior Advocate

ಸಾಲ ವಸೂಲಾತಿ ನ್ಯಾಯಮಂಡಳಿ (ಡಿಆರ್‌ಟಿ) ಮತ್ತು ಸಾಲ ವಸೂಲಾತಿ ಮೇಲ್ಮನವಿ ನ್ಯಾಯಮಂಡಳಿ (ಡಿಆರ್‌ಎಟಿ) ಡಿಯಾಗಿಯೋ ವಿರುದ್ಧ ತೀರ್ಪು ನೀಡಿದ್ದರಿಂದ, ಕಂಪನಿಯು ಪರಿಹಾರ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

2013ರಲ್ಲಿ ಎಸ್‌ಸಿಬಿ ಪರವಾಗಿ ಸೃಷ್ಟಿಸಲಾದ ಷೇರುಗಳ ಅಡಮಾನ ಹಕ್ಕು, 2010ರ ಒಪ್ಪಂದದಡಿ ಬ್ಯಾಂಕ್‌ಗಳ ಒಕ್ಕೂಟ ಪ್ರತಿಪಾದಿಸಿದ್ದ ಹಕ್ಕಿಗಿಂತ ಆದ್ಯತೆಯನ್ನು ಹೊಂದಿದೆ ಎಂದು ಹೈಕೋರ್ಟ್ ತೀರ್ಪುನಲ್ಲಿ ಹೇಳಿದೆ.

ಬ್ಯಾಂಕ್‌ಗಳೊಂದಿಗಿನ ಮಾಸ್ಟರ್ ಡೆಟ್ ರೀಕಾಸ್ಟ್ ಒಪ್ಪಂದಕ್ಕೆ ಸಿದ್ಧಾರ್ಥ್‌ ಮಲ್ಯ ಪಕ್ಷಕಾರರಾಗಿರಲಿಲ್ಲ ಎಂದು ನ್ಯಾಯಾಲಯ ಹೇಳಿದೆ. ವಿಜಯ್ ಮಲ್ಯ ಅವರ ವೈಯಕ್ತಿಕ ಖಾತರಿಯೊಂದೇ ಜಂಟಿಯಾಗಿ ಹೊಂದಿದ್ದ ಷೇರುಗಳ ಮೇಲೆ ಸ್ವಾಮ್ಯಾಧಾರಿತ ಹಕ್ಕನ್ನು ಸೃಷ್ಟಿಸುವುದಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.

ಈ ಹಿನ್ನೆಲೆಯಲ್ಲಿ, ಡಿಯಾಗಿಯೋ ಸಲ್ಲಿಸಿದ್ದ ಅರ್ಜಿಗಳನ್ನು ಪುರಸ್ಕರಿಸಿರುವ ಹೈಕೋರ್ಟ್, ಸಾಲ ವಸೂಲಾತಿ ನ್ಯಾಯಮಂಡಳಿ ಮತ್ತು ಸಾಲ ವಸೂಲಾತಿ ಮೇಲ್ಮನವಿ ನ್ಯಾಯಮಂಡಳಿ ನೀಡಿದ್ದ ಆದೇಶಗಳನ್ನು ರದ್ದುಗೊಳಿಸಿದೆ.

Vikram Huilgol

ಡಿಯಾಗಿಯೋ ಹೋಲ್ಡಿಂಗ್ಸ್ ನೆದರ್‌ಲ್ಯಾಂಡ್ಸ್ ಪರವಾಗಿ ಹಿರಿಯ ವಕೀಲ ಡಾ. ಆದಿತ್ಯ ಸೋಂಧಿ ವಾದ ಮಂಡಿಸಿದ್ದರು. ವಕೀಲೆ ಪೂರ್ಣಿಮಾ ಹಟ್ಟಿ ನೆರವು ನೀಡಿದ್ದರು. ಸಂವಾದ್‌ ಪಾರ್ಟ್ನರ್ಸ್ ಮತ್ತು ಟಚ್‌ಸ್ಟೋನ್ ಪಾರ್ಟ್ನರ್ಸ್ ಕಾನೂನು ಸಂಸ್ಥೆಗಳ ಪರವಾಗಿ ಆಕಾಶ್ ಶೆರ್ವಾಲ್, ನಿಖಿತಾ ಗಣೇಶ್, ಸುಚಿತ್ ಕೃಷ್ಣ, ಯಶಸ್ವಿ ಮೋಹನರಾಮ್ ಮತ್ತು ವೈಷ್ಣವಿ ಶಂಕರ್ ಹಾಜರಾಗಿದ್ದರು.

ಎಸ್‌ಬಿಐ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟದ ಪರವಾಗಿ ಹಿರಿಯ ವಕೀಲ ವಿಕ್ರಮ್‌ ಹುಯಿಲಗೋಳ ಹಾಗೂ ಕೇಂದ್ರ ಸರ್ಕಾರದ ವಕೀಲರಾದ ಕುಮಾರ್ ಎಂ ಎನ್, ವಕೀಲರಾದ ವೀರೇಂದ್ರ ಪಾಟೀಲ್, ಗಣಪತಿ ಹೆಗಡೆ, ಕೃತಿಕಾ ರಾಘವನ್ ಮತ್ತು ಪೆರಿಕಲ್ ಕೆ. ಅರ್ಜುನ್ ವಾದಿಸಿದ್ದರು.

Diageo Holdings Netherlands B V & others Vs SBI & others.pdf
Preview