Delhi High Court, Vikram Sampath, Audrey Truschke

 

Facebook

ಸುದ್ದಿಗಳು

ಅಕೆಡೆಮಿಕ್‌ ವಲಯದಲ್ಲಿ ಚರ್ಚೆ ನಿರ್ಬಂಧಿಸಲಾಗದು: ಇತಿಹಾಸಕಾರ ವಿಕ್ರಮ್‌ ಸಂಪತ್‌ಗೆ ತಿಳಿಹೇಳಿದ ದೆಹಲಿ ಹೈಕೋರ್ಟ್‌

ತಮ್ಮ ವಿರುದ್ಧದ ಆರೋಪಕ್ಕೆ ಪೂರಕವಾಗಿ ಅಕೆಡೆಮಿಕ್ ವಲಯದ ಹಲವರ ಸಹಿಯನ್ನು ಒಳಗೊಂಡ ಗೂಗಲ್‌ ದಾಖಲೆಯನ್ನು ಟ್ರುಶ್ಕೆ ಹಂಚಿಕೊಳ್ಳುತ್ತಿದ್ದಾರೆ ಎಂದು ಸಂಪತ್‌ ಆಕ್ಷೇಪಿಸಿದ್ದ ಮನವಿಗೆ ಸಂಬಂಧಿಸಿದಂತೆ ಹೈಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ.

Bar & Bench

ಇತಿಹಾಸಕಾರ ವಿಕ್ರಮ್‌ ಸಂಪತ್‌ ವಿರುದ್ಧ ಇತಿಹಾಸಕಾರ್ತಿ ಆಡ್ರೆ ಟ್ರುಶ್ಕೆ ಅವರು ಹಂಚಿಕೊಂಡಿರುವ ಬರಹವು ಮೇಲ್ನೋಟಕ್ಕೆ ಯಾವುದೇ ತೆರನಾದ ಮಾನಹಾನಿ ಅಂಶಗಳನ್ನು ಒಳಗೊಂಡಿಲ್ಲ ಎಂದು ಶುಕ್ರವಾರ ದೆಹಲಿ ಹೈಕೋರ್ಟ್‌ ಹೇಳಿದೆ.

ತಮ್ಮ ವಿರುದ್ದದ ಕೃತಿಚೌರ್ಯ ಆರೋಪಕ್ಕೆ ಪೂರಕವಾಗಿ ಅಕೆಡೆಮಿಕ್ ವಲಯದ ಹಲವು ಖ್ಯಾತನಾಮರ ಸಹಿಯನ್ನು ಒಳಗೊಂಡ ಗೂಗಲ್‌ ದಾಖಲೆಯನ್ನು ಟ್ರುಶ್ಕೆ ಹಂಚಿಕೊಳ್ಳುತ್ತಿದ್ದಾರೆ ಎಂದು ಆಕ್ಷೇಪಿಸಿ ಸಂಪತ್‌ ಸಲ್ಲಿಸಿದ್ದ ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಮಿತ್‌ ಬನ್ಸಲ್‌ ಅವರು ನೋಟಿಸ್‌ ಜಾರಿ ಮಾಡಿದ್ದಾರೆ.

ಪತ್ರದಲ್ಲಿ ಯಾವುದೇ ಮಾನಹಾನಿಕಾರ ಅಂಶಗಳಿಲ್ಲ.. ಅವರು (ಟ್ರುಶ್ಕೆ) ಅದನ್ನು ಹಂಚಿಕೊಳ್ಳುತ್ತಿದ್ದರೆ ಅದರಲ್ಲಿ ಯಾವುದೇ ತಪ್ಪಿಲ್ಲ… ಅಕೆಡೆಮಿಕ್ ವಲಯದಲ್ಲಿನ ಚರ್ಚೆಯ ವಿಷಯವನ್ನು ನಾವು ನಿರ್ಬಂಧಿಸಲಾಗದು. ಅಕಾಡೆಮಿಕ್‌ ತಜ್ಞರು ನೀವು ಯಾವುದೋ ಕೃತಿಚೌರ್ಯ ಎಸಗಿದ್ದೀರಿ ಎಂದು ಭಾವಿಸಿದರೆ ಅಥವಾ ದೃಷ್ಟಿಕೋನ ಹೊಂದಿದ್ದರೆ ನೀವು ಸಾವಿರಾರು ಮಂದಿಯ ವಿರುದ್ಧ ಪ್ರತಿಬಂಧಕಾದೇಶ ಕೋರಲಾಗದು” ಎಂದು ಪೀಠವು ಸಂಪತ್‌ ಉದ್ದೇಶಿಸಿ ನ್ಯಾಯಾಲಯ ಹೇಳಿತು.

ಇದಕ್ಕೆ ಸಂಪತ್‌ ವಕೀಲರು “ಸದರಿ ಪತ್ರಕ್ಕೆ ಸಹಿ ಮಾಡಿಲ್ಲ ಎಂದು ಹಲವು ಮಂದಿ ಹೇಳಿದ್ದಾರೆ. ರಾಮಚಂದ್ರ ಗುಹಾ, ಪ್ರತಾಪ್‌ ಭಾನು ಮೆಹ್ತಾ ಅವರು ತಾವು ಪತ್ರಕ್ಕೆ ಸಹಿ ಮಾಡಿಲ್ಲ ಎಂದಿದ್ದಾರೆ” ಎಂದರು.

ಇದಕ್ಕೆ ಪೀಠವು “ನಮ್ಮ ದೃಷ್ಟಿಯಲ್ಲಿ ಪತ್ರದಲ್ಲಿ ಮಾನಹಾನಿಕಾರವಾಗುವ ಯಾವುದೇ ಅಂಶಗಳಿಲ್ಲ. ಅದನ್ನು ಆಕೆ ಹಂಚಿಕೊಂಡರೆ ಅದರಲ್ಲೂ ಮಾನಹಾನಿಯಾಗುವಂಥದ್ದೇನಿಲ್ಲ. ನಿರ್ದಿಷ್ಟ ವಿಷಯದ ಬಗ್ಗೆ ಪ್ರತಿಯೊಬ್ಬರು ತಮ್ಮ ದೃಷ್ಟಿಕೋನ ಹೊಂದಲು ಸ್ವತಂತ್ರರಾಗಿದ್ದಾರೆ; ಪ್ರತಿ ವಾರವೂ ನೀವು ನ್ಯಾಯಾಲಯದ ಮೆಟ್ಟಿಲೇರಲಾಗುತ್ತದೆಯೇ?” ಎಂದಿತು.

“ಪತ್ರದಲ್ಲಿ ಹೆಸರನ್ನು ತಪ್ಪಾಗಿ ನಮೂದಿಸಿದರೆ… ಅಲ್ಲಿ 100 ಹೆಸರುಗಳಿದ್ದು, ಕೆಲವರು ತಾವು ಸಹಿ ಮಾಡಿಲ್ಲ ಎಂದಿರಬಹುದು. ಹಾಗೆಂದು ಅಲ್ಲಿ ಮಾನಹಾನಿಕರ ವಿಚಾರವಿದೆ ಎಂದಲ್ಲ” ಎಂದು ಪೀಠ ಹೇಳಿದೆ.

ಸಂಪತ್‌ ಪರ ವಕೀಲ ರಾಘವ್‌ ಅವಸ್ಥಿ ಅವರು “ಇಲ್ಲಿ ಅಕಾಡೆಮಿಕ್ ವಲಯದ ವ್ಯಕ್ತಿಗಳ ಬಗ್ಗೆ ಮಾತನಾಡುತ್ತಿಲ್ಲ. ಮಾನಹಾನಿಕಾರ ವಿಷಯವನ್ನು ಹಂಚಿಕೊಳ್ಳಲಾಗುತ್ತಿದೆ” ಎಂದರು. ಇದನ್ನು ಆಲಿಸಿದ ಪೀಠವು ನೋಟಿಸ್‌ ಜಾರಿ ಮಾಡಿತು.