Vikram Sampath and Audrey Truschke 
ಸುದ್ದಿಗಳು

ವಿಕ್ರಂ ಸಂಪತ್ ವಿರುದ್ಧ ಟ್ರುಶ್ಕೆ ಮಾಡಿದ ಇನ್ನೂ 5 ಟ್ವೀಟ್‌ ತೆಗೆದು ಹಾಕಲು ಟ್ವಿಟರ್‌ಗೆ ದೆಹಲಿ ಹೈಕೋರ್ಟ್ ಸೂಚನೆ

ಭಾರತೀಯ ಶಿಕ್ಷಣ ತಜ್ಞರ ಕೃತಿಗಳನ್ನು ಕೃತಿಚೌರ್ಯ ಮಾಡಿರುವುದಾಗಿ ತನ್ನ ಮೇಲೆ ಟ್ರುಶ್ಕೆ ಪದೇ ಪದೇ ಆರೋಪ ಮಾಡಿದ್ದಾರೆ ಎಂದು ವಿಕ್ರಂ ಅರ್ಜಿಯಲ್ಲಿ ದೂರಿದ್ದರು.

Bar & Bench

ಭಾರತದ ಇತಿಹಾಸಕಾರ ವಿಕ್ರಮ್ ಸಂಪತ್ ವಿರುದ್ಧ ದಕ್ಷಿಣ ಏಷ್ಯಾ ಚರಿತ್ರಕಾರ್ತಿ ಆಡ್ರಿ ಟ್ರುಶ್ಕೆ ಮಾಡಿರುವ ಇನ್ನೂ ಐದು ಮಾನಹಾನಿಕರ ಟ್ವೀಟ್‌ಗಳನ್ನು ತೆಗೆದು ಹಾಕುವಂತೆ ಟ್ವಿಟರ್‌ಗೆ ದೆಹಲಿ ಹೈಕೋರ್ಟ್ ಇತ್ತೀಚೆಗೆ ನಿರ್ದೇಶನ ನೀಡಿದೆ [ಡಾ ವಿಕ್ರಮ್ ಸಂಪತ್ ಮತ್ತು ಆಡ್ರಿ ಟ್ರುಶ್ಕೆ ಇನ್ನಿತರರ ನಡುವಣ ಪ್ರಕರಣ].

ಮೇಲ್ನೋಟಕ್ಕೆ ಪ್ರಕರಣ ಸಂಪತ್‌ ಅವರ ಪರವಾಗಿದ್ದು ಅವರ ವಿರುದ್ಧ ಮಾಡಲಾಗಿರುವ ಟ್ವೀಟ್‌ಗಳು ನಿಜಕ್ಕೂ ಮಾನಹಾನಿಕರ ಸ್ವರೂಪದಲ್ಲಿವೆ ಎಂದು ನ್ಯಾಯಮೂರ್ತಿ ಅಮಿತ್ ಬನ್ಸಾಲ್ ಅಭಿಪ್ರಾಯಪಟ್ಟರು.

ನ್ಯಾಯಾಲಯ ಈಗಾಗಲೇ ತಡೆಯಾಜ್ಞೆ ನೀಡಿರುವ ಟ್ರುಶ್ಕೆ ಮತ್ತಿತರ ಇತಿಹಾಸಕಾರರ ಪತ್ರಗಳ ಲಿಂಕ್‌ಗಳನ್ನು ಕೂಡ ಟ್ವೀಟಿಸಲಾಗಿದೆ ಎಂಬುದನ್ನು ನ್ಯಾಯಮೂರ್ತಿಗಳು ಗಮನಿಸಿದರು. ಟ್ರುಶ್ಕೆ ನ್ಯಾಯಾಲಯ ವ್ಯಾಪ್ತಿಗೆ ಬರುವುದಿಲ್ಲ ಮತ್ತು ವಿಚಾರಣಾ ಪ್ರಕ್ರಿಯೆಯಲ್ಲಿ ಹಾಜರಾಗಿಲ್ಲದ ಕಾರಣ ಟ್ವಿಟರ್‌ಗೆ ನಿರ್ದೇಶನ ನೀಡುತ್ತಿರುವುದಾಗಿ ನ್ಯಾಯಾಲಯ ತಿಳಿಸಿತು.

ನ್ಯಾಯಾಲಯದ ಮಧ್ಯಂತರ ತಡೆಯಾಜ್ಞೆಯ ಹೊರತಾಗಿಯೂ ಅಮೆರಿಕ ಮತ್ತು ಭಾರತೀಯ ಶಿಕ್ಷಣ ತಜ್ಞರ ಕೃತಿಗಳನ್ನು ಕೃತಿಚೌರ್ಯ ಮಾಡಿರುವುದಾಗಿ ತನ್ನ ಮೇಲೆ ಟ್ರುಶ್ಕೆ ಪದೇ ಪದೇ ಆರೋಪ ಮಾಡಿದ್ದಾರೆ ಎಂದು ಸಂಪತ್ ಅವರು ವಕೀಲ ಮುಖೇಶ್ ಶರ್ಮಾ ಅವರ ಮೂಲಕ ಸಲ್ಲಿಸಿದ ಹೊಸ ಅರ್ಜಿಯಲ್ಲಿ ದೂರಿದ್ದರು. ಟ್ರುಶ್ಕೆ ಅವರ ನಡೆಯಲ್ಲಿ 'ಬಿಳಿಯರ ಸವಲತ್ತಿನ' (ವೈಟ್‌ ಪ್ರಿವಿಲೇಜ್‌ - ವರ್ಣದ ಆಧಾರದಲ್ಲಿ ಅಂತರ್ಗತವಾಗಿರುವ ಲಾಭಗಳು) ನಂಜಿನ ಘಾಟು ಇದೆ. ತಾನು ಅಮೆರಿಕದ ಕಾಕೇಷನ್ ಜನಾಂಗಕ್ಕೆ ಸೇರಿದಾಕ್ಷಣ ಭಾರತದ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಬಹುದು ಎನ್ನುವ ಭಾವನೆ ಇದೆ ಎಂದು ವಿಕ್ರಂ ಅರ್ಜಿಯಲ್ಲಿ ದೂರಿದ್ದರು.