Vinay Kulkarni and Karnataka HC 
ಸುದ್ದಿಗಳು

ಯೋಗೀಶ್‌ ಗೌಡ ಕೊಲೆ ಪ್ರಕರಣ: ಜಾಮೀನು ಕೋರಿದ ವಿನಯ್‌ ಕುಲಕರ್ಣಿ, ಸಿಬಿಐಗೆ ಹೈಕೋರ್ಟ್‌ ನೋಟಿಸ್‌

“ವಿನಯ್‌ ಕುಲಕರ್ಣಿ ವಿರುದ್ಧ ಒಂದೇ ಒಂದು ಸಾಕ್ಷಿ ಬಾಕಿ ಇದ್ದು, ಅವರ ಹೇಳಿಕೆ ದಾಖಲಾದ ಬಳಿಕ ಜಾಮೀನು ಮಂಜೂರು ಮಾಡಬೇಕು” ಎಂದು ಹಿರಿಯ ವಕೀಲ ಸಿ ವಿ ನಾಗೇಶ್‌ ಮನವಿ ಮಾಡಿದರು.

Bar & Bench

ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಬಿಜೆಪಿ ಸದಸ್ಯರಾಗಿದ್ದ ಯೋಗೀಶ್‌ ಗೌಡ ಗೌಡರ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಧಾರವಾಡದ ಕಾಂಗ್ರೆಸ್‌ ಶಾಸಕ ವಿನಯ್ ಕುಲಕರ್ಣಿ ಜಾಮೀನು ಕೋರಿರುವ ಅರ್ಜಿಯ ಸಂಬಂಧ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಕರ್ನಾಟಕ ಹೈಕೋರ್ಟ್‌ ಗುರುವಾರ ನೋಟಿಸ್‌ ಜಾರಿಗೊಳಿಸಿದೆ.

ಕೊಲೆ ಪ್ರಕರಣದಲ್ಲಿ ಜಾಮೀನು ಮಂಜೂರು ಮಾಡುವಂತೆ ಕೋರಿ 15ನೇ ಆರೋಪಿಯಾಗಿರುವ ವಿನಯ್‌ ಕುಲಕರ್ಣಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ಸುನೀಲ್‌ ದತ್‌ ಯಾದವ್‌ ಅವರ ಏಕಸದಸ್ಯ ಪೀಠ ನಡೆಸಿತು.

ವಿನಯ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿ ವಿ ನಾಗೇಶ್‌ ಅವರು “ಪ್ರಕರಣದ ವಿಚಾರಣೆಯು ಡಿಸೆಂಬರ್‌ 22ರಂದು ಮುಕ್ತಾಯವಾಗಲಿದೆ. ಒಟ್ಟಾರೆ 21 ಆರೋಪಿಗಳಿದ್ದು, 20 ಮಂದಿಗೆ ಜಾಮೀನು ದೊರೆತಿದೆ. ನೈಜ ಆರೋಪಿಗಳಾದ 8,9, 10,11,12,13ನೇ ಆರೋಪಿಗಳಿಗೆ ಜಾಮೀನು ದೊರೆತಿದ್ದು, ಪ್ರಾಸಿಕ್ಯೂಷನ್‌ ಪ್ರಕಾರ ವಿನಯ್‌ ಕುಲಕರ್ಣಿ ಪಿತೂರಿದಾರರಷ್ಟೆ. ಅಮುಖ್ಯವಾದ ಸಾಕ್ಷಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ವಿನಯ್‌ಗೆ ಜಾಮೀನು ನಿರಾಕರಿಸಲಾಗಿದೆ. ಡಿಸೆಂಬರ್‌ 20ಕ್ಕೆ ಕೊನೆಯ ಸಾಕ್ಷಿ ವಿಚಾರಣೆಗೆ ನಿಗದಿಯಾಗಿದ್ದು, ಅದನ್ನು ಬಿಟ್ಟು ಬೇರಾವುದೇ ಸಾಕ್ಷಿ ವಿಚಾರಣೆ ಬಾಕಿ ಇಲ್ಲ. ಡಿಸೆಂಬರ್‌ 22ಕ್ಕೆ ತನಿಖಾಧಿಕಾರಿಯ ವಿಚಾರಣೆ ನಿಗದಿಯಾಗಿದೆ. ವಿಚಾರಣಾಧೀನ ನ್ಯಾಯಾಲಯವು 9 ಮತ್ತು 19ನೇ ಆರೋಪಿಗಳಿಗೆ ಸಾಕ್ಷಿಗಳಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಜಾಮೀನು ರದ್ದುಪಡಿಸಿತ್ತು. ಆದರೆ, ಹೈಕೋರ್ಟ್‌ ಅದನ್ನು ರದ್ದುಪಡಿಸಿದೆ” ಎಂದರು.

“ವಿನಯ್‌ ಕುಲಕರ್ಣಿ ವಿರುದ್ಧ ಒಂದೇ ಒಂದು ಸಾಕ್ಷಿ ಬಾಕಿ ಇದ್ದು, ಅವರ ಹೇಳಿಕೆ ದಾಖಲಾದ ಬಳಿಕ ಜಾಮೀನು ಮಂಜೂರು ಮಾಡಬೇಕು” ಎಂದರು.

ಸಿಬಿಐ ಪ್ರತಿನಿಧಿಸಿದ್ದ ವಕೀಲ ರಾಹುಲ್‌ ರೆಡ್ಡಿ ಅವರು “ವಿನಯ್‌ ಕುಲಕರ್ಣಿ ವಿರುದ್ಧ ಒಂದೇ ಒಂದು ಸಾಕ್ಷಿ ದಾಖಲು ಬಾಕಿ ಇದೆಯೇ ಎಂಬುದನ್ನು ಪರಿಶೀಲಿಸಲಾಗುವುದು. ಕುಲಕರ್ಣಿಗೆ ಸುಪ್ರೀಂ ಕೋರ್ಟ್‌ ಜಾಮೀನು ಮಂಜೂರು ಮಾಡಿತ್ತು. ಅವರ ನಡತೆಯನ್ನು ನೋಡಿ ಜಾಮೀನು ರದ್ದುಪಡಿಸಿದೆ” ಎಂದರು.

ಇದನ್ನು ಆಲಿಸಿದ ಪೀಠವು ಸಿಬಿಐಗೆ ನೋಟಿಸ್‌ ಜಾರಿಗೊಳಿಸಲಾಗಿದ್ದು, ಮುಂದಿನ ಗುರುವಾರದೊಳಗೆ ಆಕ್ಷೇಪಣೆ ಸಲ್ಲಿಸಬೇಕು ಎಂದು ಆದೇಶಿಸಿ, ವಿಚಾರಣೆಯನ್ನು ಡಿಸೆಂಬರ್‌ 18ಕ್ಕೆ ಮುಂದೂಡಿತು.

2016ರ ಜೂನ್‌ 15ರಂದು ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಯೋಗೀಶ್‌ಗೌಡ ಗೌಡರ್ ಕೊಲೆ ನಡೆದಿತ್ತು. ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸಿದ್ದು, ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್120(B) ಜೊತೆಗೆ 302, 217, 201, 143, 147, 148 ಜೊತೆಗೆ 149, ಶಸ್ತ್ರಾಸ್ತ್ರ ಕಾಯುದೆ ಸೆಕ್ಷನ್ 25 ಜೊತೆಗೆ 3, 5, 8, 29 ಮತ್ತು ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಸೆಕ್ಷನ್‌ 13(2) ಜೊತೆಗೆ 13(1)(d) ಅಡಿ ಆರೋಪಗಳನ್ನು ಆಲಿಸಿ ಆರೋಪ ಪಟ್ಟಿ ಸಲ್ಲಿಸಿದೆ.

2025ರ ಜೂನ್‌ 7ರಂದು ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಯುತ್ತಿರುವಾಗ ವಿನಯ್‌ ಕುಲಕರ್ಣಿ ಅವರು ಸಾಕ್ಷಿಗಳನ್ನು ಸಂಪರ್ಕಿಸಲು ಅಥವಾ ಪ್ರಭಾವ ಬೀರಲು ಪ್ರಯತ್ನಿಸಿದ್ದಾರೆ ಎಂಬುದಕ್ಕೆ ವಿಶ್ವಾಸಾರ್ಹ ಪುರಾವೆಗಳಿವೆ ಎಂದು ಹೇಳಿ, ಜಾಮೀನು ರದ್ದುಗೊಳಿಸಿತ್ತು. 2021ರ ಆಗಸ್ಟ್‌ 11ರಂದು ಸುಪ್ರೀಂ ಕೋರ್ಟ್‌ ವಿನಯ್‌ ಕುಲಕರ್ಣಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿತ್ತು. 2020ರ ನವೆಂಬರ್‌ 5ರಂದು ವಿನಯ್‌ ಕುಲಕರ್ಣಿಯನ್ನು ಸಿಬಿಐ ಬಂಧಿಸಿತ್ತು. ವಿನಯ್ ಕುಲಕರ್ಣಿ ಅವರು 2025ರ ಜೂನ್‌ 13ರಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ.