Karnataka HC and Justice V Srishananda 
ಸುದ್ದಿಗಳು

ಮೇಲ್ನೋಟಕ್ಕೆ ಆರೋಪ ಸಾಬೀತುಪಡಿಸುವ ಸಾಕ್ಷ್ಯಗಳಿಲ್ಲದೆ ದೂರು ದಾಖಲಿಸಿದರೆ ಸಂವಿಧಾನದ 21ನೇ ವಿಧಿ ಉಲ್ಲಂಘನೆ: ಹೈಕೋರ್ಟ್‌

ಅರ್ಜಿದಾರರ ವಿರುದ್ಧದ ಹಣಕಾಸು ಸಂಸ್ಥೆಗಳಲ್ಲಿನ ಕರ್ನಾಟಕ ಠೇವಣಿದಾರರ ಹಿತರಕ್ಷಣಾ ಕಾಯಿದೆ ಸೆಕ್ಷನ್‌ 9 ಹಾಗೂ ಐಪಿಸಿ 420 ಮತ್ತು 407ರ ಅನ್ವಯ ಹೂಡಿದ್ದ ಎಫ್‌ಐಆರ್ ಅನ್ನು ವಜಾ ಮಾಡಿದ ನ್ಯಾಯಾಲಯ.

Bar & Bench

ಅಪರಾಧ ಪ್ರಕರಣಗಳಲ್ಲಿ ಮೇಲ್ನೋಟಕ್ಕೆ ಆರೋಪಗಳನ್ನು ಸಾಬೀತುಪಡಿಸುವಂತಹ ಸಾಕ್ಷ್ಯಗಳಿಲ್ಲದೆ ದೂರು ದಾಖಲಿಸಿದರೆ ಅದು ಸಂವಿಧಾನದ 21ನೇ ವಿಧಿಯ ಅನ್ವಯ ವ್ಯಕ್ತಿಯ ಜೀವನ ಮತ್ತು ಘನತೆಗೆ ಸಂಬಂಧಿಸಿದ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ಈಚೆಗೆ ಅಭಿಪ್ರಾಯಪಟ್ಟಿದೆ.

ತಮ್ಮ ವಿರುದ್ಧ ದಾಖಲಾದ ವಂಚನೆ ಪ್ರಕರಣ ರದ್ದು ಕೋರಿ ಮಹಾರಾಷ್ಟ್ರದ ವಿಪುಲ್ ಪ್ರಕಾಶ್ ಪಾಟೀಲ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ವಿ ಶ್ರೀಶಾನಂದ ಅವರ ನೇತೃತ್ವದ ಏಕಸದಸ್ಯ ಪೀಠವು ಪುರಸ್ಕರಿಸಿದೆ.

ಅರ್ಜಿದಾರರ ವಿರುದ್ಧ ಹಣಕಾಸು ಸಂಸ್ಥೆಗಳಲ್ಲಿನ ಕರ್ನಾಟಕ ಠೇವಣಿದಾರರ ಹಿತರಕ್ಷಣಾ ಕಾಯಿದೆ ಸೆಕ್ಷನ್‌ 9 ಹಾಗೂ ಐಪಿಸಿ 420 ಮತ್ತು 407 ರನ್ವಯ ಹೂಡಿದ್ದ ಎಫ್‌ಐಆರ್ ಅನ್ನು ನ್ಯಾಯಾಲಯ ವಜಾ ಮಾಡಿದೆ.

“ಪ್ರಕರಣದಲ್ಲಿ ಅರ್ಜಿದಾರರ ಹೆಸರನ್ನು ದೂರುದಾರರು ಸುಮ್ಮನೆ ಪ್ರಸ್ತಾಪಿಸಿದ್ದಾರೆ. ಆದರೆ, ಅದಕ್ಕೆ ಯಾವುದೇ ದಾಖಲೆಗಳಿಲ್ಲ. ಆಗಿರುವ ಘಟನೆಗೂ ಅರ್ಜಿದಾರರ ನಡುವೆ ಸಂಬಂಧವಿದೆ ಎಂದು ಕಲ್ಪಿಸಲು ಮುಂದಾಗಿದ್ದಾರೆ. ಹೀಗಾಗಿ, ಮೇಲ್ನೋಟಕ್ಕೆ ಯಾವುದೇ ಸಾಕ್ಷ್ಯವಿಲ್ಲದೆ ಅರ್ಜಿದಾರರ ವಿರುದ್ಧ ಆರೋಪ ಪ್ರಕರಣ ಮುಂದುವರಿಸುವುದು ಕಾನೂನಿನ ದುರ್ಬಳಕೆ ಆಗಲಿದೆ’’ ಎಂದು ನ್ಯಾಯಾಲಯ ಹೇಳಿದೆ.

ಅಲ್ಲದೆ, ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಲಯವು ಅರ್ಜಿದಾರರ ವಿರುದ್ಧ ದಾಖಲೆಗಳು ಅಥವಾ ಸಾಕ್ಷ್ಯವಿಲ್ಲದೆ ದೂರನ್ನು ಪುರಸ್ಕರಿಸಲಾಗಿದೆ. ಅದು ಅನಗತ್ಯವಾಗಿದೆ. ಇದು ಕಾನೂನಿನ ದುರ್ಬಳಕೆ ಮಾತ್ರವಲ್ಲ, ಸಂವಿಧಾನದ 21ನೇ ವಿಧಿಯಡಿ ಪ್ರಜೆಗಳಿಗೆ ಲಭ್ಯವಿರುವ ಗೌರವಯುತ ಬಾಳ್ವೆ ನಡೆಸುವ ಹಕ್ಕಿಗೂ ಧಕ್ಕೆ ಆಗಲಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಆರೋಪಿಸಲಾದ ಅಪರಾಧ ಕೃತ್ಯಕ್ಕೂ ಆರೋಪಿಗೂ ಸಂಬಂಧ ಕಲ್ಪಿಸುವ ಯಾವುದೇ ದಾಖಲೆಗಳಿಲ್ಲದೆ ಯಾವುದೇ ವ್ಯಕ್ತಿ ಅಪರಾಧಧ ತನಿಖೆಯನ್ನು ಎದುರಿಸುವಂತಾಗಬಾರದು ಎಂದು ಹೇಳಿದೆ.

ಅರ್ಜಿದಾರರು ಮತ್ತು ಪಂಕಜ್ ನಾಮ್ ದೇವ್ ಮತ್ತು ಸಂತೋಷ್ ಗಂಗಾರಾಮ್ ಘೋಡ್ಕೆ ಅವರು 1 ಲಕ್ಷ ರೂಪಾಯಿ ಹಣ ಠೇವಣಿ ಮಾಡಿದರೆ ಅದನ್ನು 10 ತಿಂಗಳಲ್ಲಿ ವಾಪಸ್ ನೀಡಲಾಗುವುದು ಎಂದು ಭರವಸೆ ನೀಡಿದ್ದರು. ನಂತರ ಹಣ ಮರುಪಾವತಿ ಮಾಡದೆ ವಂಚನೆ ಎಸಗಿದ್ದಾರೆ ಎಂದು ಶಿವಾನಂದ ಎಂಬುವರು ದೂರು ನೀಡಿದ್ದರು. ಇದನ್ನು ಆಧರಿಸಿ ಚಿಕ್ಕೋಡಿ ಪೊಲೀಸರು ಎಫ್ ಐಆರ್ ದಾಖಲಿಸಿದ್ದರು. ಇದನ್ನು ರದ್ದುಗೊಳಿಸುವಂತೆ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು. 

Vipul Prakash Patil Vs State of Karnataka.pdf
Preview