Karnataka HC, POCSO  
ಸುದ್ದಿಗಳು

[ಪೋಕ್ಸೊ] ನ್ಯಾಯಯುತ ವಿಚಾರಣೆಯ ನಿಯಮ ಉಲ್ಲಂಘನೆ: ಆರೋಪಿಗೆ ವಿಧಿಸಿದ್ದ ಜೈಲು ಶಿಕ್ಷೆ ರದ್ದುಪಡಿಸಿದ ಹೈಕೋರ್ಟ್‌

ಮೇಲ್ಮನವಿದಾರ ಆರು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಕಾಯಿದೆಯ ಸೆಕ್ಷನ್ 4(2), 5(ಎಂ), 6 & 8ರ ಅಡಿ ಸತ್ರ ನ್ಯಾಯಾಲಯವು ರಾಮ್‌ ಲಖನ್‌ ಯಾದವ್‌ಗೆ 20 ವರ್ಷಗಳ ಜೈಲು, ₹2.5 ಲಕ್ಷ ದಂಡ ವಿಧಿಸಿತ್ತು.

Bar & Bench

ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ–2012) ಕಾಯಿದೆ ಅಡಿಯಲ್ಲಿ ರೂಪಿಸಲಾಗಿರುವ ನ್ಯಾಯಯುತ ವಿಚಾರಣೆಯ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬ ನಿಷ್ಕರ್ಷೆಯ ಮೂಲಕ ಪ್ರಕರಣವೊಂದರಲ್ಲಿ ಕರ್ನಾಟಕ ಹೈಕೋರ್ಟ್ ಈಚೆಗೆ ಪೋಕ್ಸೊ ಅಪರಾಧಿಯೊಬ್ಬರಿಗೆ ಸತ್ರ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ರದ್ದುಗೊಳಿಸಿದೆ.

ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್‌ನ ಹೆಚ್ಚುವರಿ ಸತ್ರ ನ್ಯಾಯಾಲಯ (ಎಫ್‌ಟಿಎಸ್‌ಸಿ–I) ವಿಧಿಸಿರುವ ಶಿಕ್ಷೆಯನ್ನು ರದ್ದುಗೊಳಿಸಬೇಕು ಎಂದು ಕೋರಿ 50 ವರ್ಷದ ಅಪರಾಧಿ ರಾಮ್‌ ಲಖನ್‌ ಯಾದವ್‌ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿಯನ್ನು ನ್ಯಾಯಮೂರ್ಜಿ ಜಿ ಬಸವರಾಜ ಅವರ ಏಕದಸದಸ್ಯ ಪೀಠ ಭಾಗಶಃ ಪುರಸ್ಕರಿಸಿದೆ.

Justice G Basavaraja

“ಪ್ರಕರಣವನ್ನು ವಿಚಾರಣಾ ನ್ಯಾಯಾಲಯಕ್ಕೆ ಹಿಂತಿರುಗಿಸಲಾಗಿದೆ. ಪ್ರತಿವಾದಿಯಿಂದ ಪರೀಕ್ಷಿಸದೆ ಬಿಟ್ಟಿರುವ ಎಲ್ಲಾ ಪ್ರಮುಖ ಸಾಕ್ಷಿಗಳನ್ನು ಪಾಟಿ ಸವಾಲಿಗೆ ಒಳಪಡಿಸಿ ನ್ಯಾಯಿಕ ಪ್ರಕ್ರಿಯೆ ಮುಂದುವರಿಸಬೇಕು. ಆರೋಪಿಯು ವಕೀಲರನ್ನು ನೇಮಿಸಿಕೊಳ್ಳಲು ಸಾಧ್ಯವಾಗದಿದ್ದರೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ವಿಷಯವನ್ನು ಅರುಹಬೇಕು” ಎಂದು ನ್ಯಾಯಾಲಯ ನಿರ್ದೇಶಿಸಿದೆ.

ಮೇಲ್ಮನವಿದಾರ ಆರು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಪೋಕ್ಸೊ ಕಾಯಿದೆಯ ಸೆಕ್ಷನ್ 4(2), 5(ಎಂ), 6 ಮತ್ತು 8ರ ಅಡಿಯಲ್ಲಿ ಸತ್ರ ನ್ಯಾಯಾಲಯವು ರಾಮ್‌ ಲಖನ್‌ ಯಾದವ್‌ಗೆ 20 ವರ್ಷಗಳ ಜೈಲು ಶಿಕ್ಷೆ ಮತ್ತು ₹2.5 ಲಕ್ಷ ದಂಡ ವಿಧಿಸಿ 2024ರ ಫೆಬ್ರವರಿ 5ರಂದು ಆದೇಶಿಸಿತ್ತು.

Ramlakhan Yadav Vs State of Karnataka.pdf
Preview