ಪ್ರಕರಣಗಳ ವರ್ಚುವಲ್ ವಿಚಾರಣೆ, ಭೌತಿಕ ವಿಚಾರಣೆಗೆ ಬದಲಿ ಆಗಿರಲು ಸಾಧ್ಯವಿಲ್ಲ.ಕೋವಿಡ್ ಪರಿಸ್ಥಿತಿ ಸುಧಾರಿಸಿದೆ ಎಂಬ ಅಂಶವನ್ನು ಪರಿಗಣಿಸಿ ಭೌತಿಕವಾಗಿ ನ್ಯಾಯಾಲಯಗಳನ್ನು ಪುನರಾರಂಭಿಸುವ ಕುರಿತು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳೊಂದಿಗೆ ಚರ್ಚಿಸುವುದಾಗಿ ಕೇಂದ್ರದ ನೂತನ ಕಾನೂನು ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.
ಜುಲೈ 25 ರಂದು ಭಾರತೀಯ ವಕೀಲರ ಪರಿಷತ್ತು ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
"ವರ್ಚುವಲ್ ವಿಚಾರಣೆ ವೈಯಕ್ತಿಕ ವಿಚಾರಣೆಗೆ ಬದಲಿ ಆಗಿರಲು ಸಾಧ್ಯವಿಲ್ಲ. ನಾನು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳೊಂದಿಗೆ ಮಾತನಾಡಿದ್ದೇನೆ. ಪರಿಸ್ಥಿತಿ ಉತ್ತಮವಾಗಿರುವುದರಿಂದ ಸಹಜ ಸ್ಥಿತಿಗೆ ಮರಳುತ್ತಿರುವುದನ್ನು ಖಾತ್ರಿಪಡಿಸಿಕೊಳ್ಳುವಂತೆ ವಿವಿಧ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳೊಂದಿಗೆ ಚರ್ಚಿಸಲು ಪ್ರಯತ್ನಿಸುತ್ತೇನೆ” ಎಂದು ಅವರು ಹೇಳಿದರು. ಈ ಮಧ್ಯೆ ಕೇರಳ ಹೈಕೋರ್ಟ್ ವಕೀಲರ ಸಂಘ (ಕೆಎಚ್‌ಸಿಎಎ) ಈಗಾಗಲೇ ಕಾನೂನು ಸಚಿವರ ಹೇಳಿಕೆಯನ್ನು ಸ್ವಾಗತಿಸಿದೆ.
ಮಾರ್ಚ್ 2020ರಲ್ಲಿ ಕೋವಿಡ್ ಸಾಂಕ್ರಾಮಿಕ ಉಲ್ಬಣಿಸಿದ ನಂತರ ದೇಶದೆಲ್ಲೆಡೆ ನ್ಯಾಯಾಲಯಗಳು ವಿಡ್ಯೊ, ಜೂಮ್, ವೆಬೆಕ್ಸ್ ಮುಂತಾದ ಪ್ಲಾಟ್‌ಫಾರ್ಮ್‌ಗಳನ್ನು ಬಳಸಿ ಡಿಜಿಟಲ್ ವಿಧಾನದ ಮೂಲಕ ಕಾರ್ಯನಿರ್ವಹಿಸುತ್ತಿವೆ. ಕೆಲವು ಹೈಕೋರ್ಟ್‌ಗಳು 2020ರ ಕೊನೆ ಅಥವಾ 2021ರ ಆರಂಭದಲ್ಲಿ ಭೌತಿಕ ವಿಚಾರಣೆಗೆ ಹಿಂತಿರುಗಿದವು. ಆದರೆ ಕೋವಿಡ್ ಎರಡನೇ ಅಲೆ ಬಳಿಕ ಭೌತಿಕ ವಿಚಾರಣೆ ಮತ್ತೆ ಸ್ಥಗಿತಗೊಂಡಿತ್ತು.