Praskash Raj Wikipedia
ಸುದ್ದಿಗಳು

ಮತದಾರರ ಗುರುಚಿನ ಚೀಟಿ ಪ್ರಕರಣ: ನಟ ಪ್ರಕಾಶ್‌ ರಾಜ್‌ಗೆ ಜಾಮೀನು ಮಂಜೂರು ಮಾಡಿದ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ

ಪ್ರಕರಣ ಸಂಬಂಧ ‌ಪ್ರಕಾಶ್‌ರಾಜ್ ವಿರುದ್ಧ ಬೆಂಗಳೂರಿನ 48ನೇ ಎಸಿಜೆಎಂ ನ್ಯಾಯಾಲಯದ ನ್ಯಾಯಾಧೀಶ ಜ್ಯೋತಿ ಶಾಂತಪ್ಪ ಕಾಳೆ ಅವರ ನ್ಯಾಯಾಲಯವು ಜಾಮೀನು ರಹಿತ ಬಂಧನ ವಾರಂಟ್ ಜಾರಿ ಮಾಡಿತ್ತು.‌

Bar & Bench

ಒಂದೇ ಹೆಸರಿನಲ್ಲಿ ಮೂರು ರಾಜ್ಯಗಳಲ್ಲಿ‌‌ ನಾಲ್ಕು‌‌ ಮತದಾರರ ಗುರುತಿನ ಚೀಟಿ ಹೊಂದಿದ ಆರೋಪ ಸಂಬಂಧ ನಟ ಪ್ರಕಾಶ್​ರಾಜ್ ಅವರಿಗೆ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಶುಕ್ರವಾರ ಜಾಮೀನು ಮಂಜೂರು ಮಾಡಿದೆ.

ಪ್ರಕರಣ ಸಂಬಂಧ ‌ಪ್ರಕಾಶ್‌ರಾಜ್ ವಿರುದ್ಧ ಬೆಂಗಳೂರಿನ 48ನೇ ಎಸಿಜೆಎಂ ನ್ಯಾಯಾಲಯದ ನ್ಯಾಯಾಧೀಶ ಜ್ಯೋತಿ ಶಾಂತಪ್ಪ ಕಾಳೆ ಅವರು ಜಾಮೀನು ರಹಿತ ಬಂಧನ ವಾರಂಟ್ ಜಾರಿ ಮಾಡಿದ್ದರು.‌ ಈ ಹಿನ್ನೆಲೆಯಲ್ಲಿ ಪ್ರಕಾಶ್ ರಾಜ್ ಶುಕ್ರವಾರ ಬೆಂಗಳೂರಿನ 48ನೇ ಎಸಿಜೆಎಂ ಕೋರ್ಟ್‌ಗೆ ಹಾಜರಾಗಿದ್ದರು.

ಬೆಳಿಗ್ಗೆ ಕಲಾಪದಲ್ಲಿ ಪ್ರಕಾಶ್ ರಾಜ್ ಅವರು ವಿಚಾರಣೆ ‌ಖುದ್ದು ಹಾಜರಾಗಿ, ಜಾಮೀನು ರಹಿತ ಬಂಧನ ವಾರೆಂಟ್ ವಾಪಸ್ ಪಡೆಯಲು ಕೋರಿ ಅರ್ಜಿ ಸಲ್ಲಿಸಿದರು.

ಈ ವೇಳೆ ಪ್ರಕಾಶ್ ರಾಜ್ ಪರ ವಕೀಲರು,  ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ‌ಕಕ್ಷಿದಾರರಿಗೆ ನ್ಯಾಯಾಲಯ ಜಾರಿ ಮಾಡಿರುವ ಜಾಮೀನು ರಹಿತ ವಾರೆಂಟ್ ಆದೇಶ ತಲುಪಿಲ್ಲ. ಆದರೆ, ನ್ಯಾಯಾಲಯದ ಆದೇಶ ಕುರಿತ ಮಾಧ್ಯಮದ ವರದಿ ತಿಳಿದು ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ ಎಂದು ತಿಳಿಸಿದರು.

ಅಲ್ಲದೆ, ತಮಿಳುನಾಡಿನಲ್ಲಿ ಪ್ರಕಾಶ್ ರಾಜ್ ಅವರು ಮತದಾರರ ಗುರುತಿನ ಚೀಟಿ ಹೊಂದಿದ್ದರು. ಅದನ್ನು ಡಿಲೀಟ್ ಮಾಡಿಸಲಾಗಿದೆ. ಈ ಖಾಸಗಿ ದೂರನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಅದು ಇನ್ನೂ ವಿಚಾರಣೆಗೆ ನಿಗದಿಯಾಗಿಲ್ಲ. ಜಾಮೀನು ರಹಿತ ವಾರೆಂಟ್ ಹಿಂಪಡೆಯಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.

ಈ ಮನವಿ ಪರಿಗಣಿಸಿದ ನ್ಯಾಯಾಲಯವು ಪ್ರಕಾಶ್ ರಾಜ್ ಅವರ ವಿರುದ್ಧದ ಜಾಮೀನು ರಹಿತ ಬಂಧನ ವಾರೆಂಟ್ ಆದೇಶ ಹಿಂಪಡೆದು ಜಾಮೀನು ಮಂಜೂರು ಮಾಡಿತು. ಹಾಗೆಯೇ, ನಾಲ್ಕು ಸಾವಿರ ರೂಪಾಯಿ ನಗದು ಭದ್ರತಾ ಖಾತರಿ ಒದಗಿಸಲು ಪ್ರಕಾಶ್ ರಾಜ್ ಅವರಿಗೆ ಸೂಚಿಸಿ ವಿಚಾರಣೆ ಮುಂದೂಡಿತು.

ಪ್ರಕರಣದ ಹಿನ್ನೆಲೆ: ದೇಶದ ಯಾವುದೇ ಭಾಗದಲ್ಲಿ ಒಬ್ಬ ವ್ಯಕ್ತಿ ಒಂದೇ ಮತದಾರರ ಗುರುತಿನ ಚೀಟಿ ಹೊಂದಲು ಅವಕಾಶವಿದೆ. ಆದರೆ, ಪ್ರಕಾಶ್ ರಾಜ್ ತಮಿಳುನಾಡಿನ ವೇಲಚರಿ ವಿಧಾನಸಭಾ ಕ್ಷೇತ್ರದಲ್ಲೇ ಎರಡು ಮತದಾರ ಗುರುತಿನ ಚೀಟಿ, ತೆಲಂಗಾಣದ ಸೆರಿಲಿಂಗಪಲ್ಲಿ ವಿಧಾನಸಭಾ ಕ್ಷೇತ್ರದಲ್ಲೊಂದು ಮತದಾರರ ಗುರುತಿನ ಚೀಟಿ ಹಾಗೂ ಬೆಂಗಳೂರಿನ ಶಾಂತಿನಗರ ಕ್ಷೇತ್ರದಲ್ಲೊಂದು ಮತದಾರರ ಗುರುತಿನ  ಚೀಟಿ ಹೊಂದಿದ್ದಾರೆ.‌ ಶಾಂತಿನಗರ ಕ್ಷೇತ್ರದ ಮತದಾರ ಎಂದು ಚುನಾವಣಾ ಪ್ರಮಾಣ ಪತ್ರದಲ್ಲಿ ಪ್ರಕಾಶ್​ ರಾಜ್ ಉಲ್ಲೇಖಿಸಿದ್ದಾರೆ‌.

ಆ ಮೂಲಕ ಜಪ್ರತಿನಿಧಿಗಳ ಕಾಯಿದೆ ಸೆಕ್ಷನ್ 31 ಮತ್ತು 125(ಎ) ಅನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ‌ 2019ರ ಏಪ್ರಿಲ್‌ 10ರಂದು ಹಲಸೂರು ಗೇಟ್ ಪೊಲೀಸ್ ಠಾಣೆಗೆ ವಕೀಲ‌‌‌ ಕೆ ದಿಲೀಪ್​ ಕುಮಾರ್  ದೂರು ಸಲ್ಲಿಸಿದ್ದರು.‌

ನಂತರ 2023ರಲ್ಲಿ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು. ಈ  ದೂರಿನ ವಿಚಾರಣೆ ನಡೆಸಿದ್ದ ಬೆಂಗಳೂರಿನ 48ನೇ ಎಸಿಜೆಎಂ ನ್ಯಾಯಾಲಯವು,  ಪ್ರಕಾಶ್​ ರಾಜ್ ವಿರುದ್ಧ ಎರಡು ಬಾರಿ ಸಮನ್ಸ್ ಜಾರಿ ಮಾಡಿತ್ತು. ‌ಅದಕ್ಕೆ ಪ್ರಕಾಶ್ ರಾಜ್ ಅವರಾಗಲಿ ಅಥವಾ ಅವರ ಪರ ವಕೀಲರು ಹಾಜರಾಗಿ ಸಮನ್ಸ್‌ಗೆ ಉತ್ತರ ನೀಡಿರಲಿಲ್ಲ.‌

ನಂತರ ಪ್ರಕರಣವು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ವರ್ಗಾವಣೆಯಾಗಿತ್ತು. ಈ ನ್ಯಾಯಾಲಯವು ಎರಡು ಬಾರಿ‌ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ ಮಾಡಿದ್ದು, ‌ಪ್ರಕಾಶ್​ ರಾಜ್ ಸ್ಪಂದಿಸಿರಲಿಲ್ಲ. ಇದರಿಂದ ಗರಂ ಆದ ನ್ಯಾಯಾಲಯವು 2026ರ ಜೂನ್ 12ರಂದು ಮೂರನೇ ಬಾರಿಗೆ ಪ್ರಕಾಶ್ ರಾಜ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿಗೊಳಿಸಿತ್ತು.