A1
ಸುದ್ದಿಗಳು

ಮಧ್ಯರಾತ್ರಿ ಅಲೆದಾಟ ಅಪರಾಧವಲ್ಲ: ಮುಂಬೈ ನ್ಯಾಯಾಲಯ

ಮಧ್ಯರಾತ್ರಿ ಮುಖಕ್ಕೆ ಕರವಸ್ತ್ರ ಸುತ್ತಿಕೊಂಡು ಅನುಮಾನಾಸ್ಪದವಾಗಿ ಕುಳಿತಿದ್ದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಪೊಲೀಸ್ ಕಾಯಿದೆಯಡಿ ಬಂಧಿತರಾಗಿದ್ದ ವ್ಯಕ್ತಿಯೊಬ್ಬರನ್ನು ಖುಲಾಸೆಗೊಳಿಸಿದ ನ್ಯಾಯಾಲಯ.

Bar & Bench

ಮಧ್ಯರಾತ್ರಿ 1.30ರಲ್ಲಿ ಅಲೆದಾಡುವುದು ಅಪರಾಧವಲ್ಲ ಎಂದು ಮುಂಬೈನ ನ್ಯಾಯಾಲಯವೊಂದು ಇತ್ತೀಚೆಗೆ ಹೇಳಿದೆ. ನಗರದ ವೈನ್‌ಶಾಪ್‌ ಎದುರು ಕತ್ತಲೆಯಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿದ ಮೂರು ದಿನಗಳಲ್ಲಿ ಖುಲಸೆಗೊಳಿಸಿದ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು [ಮಹಾರಾಷ್ಟ್ರ ಸರ್ಕಾರ ಮತ್ತು ಸುಮಿತ್‌ಕುಮಾರ್‌ ಬಸಂತ್‌ರಾಮ್‌ ಕಶ್ಯಪ್‌].

ಆರೋಪಿ ತನ್ನ ಮುಖ ಮುಚ್ಚಿಕೊಳ್ಳಲು ಕರವಸ್ತ್ರವನ್ನು ಬಳಸುತ್ತಿದ್ದ. ಅಲ್ಲದೆ ಗಸ್ತು ಅಧಿಕಾರಿ ಕೇಳಿದ ಪ್ರಶ್ನೆಗಳಿಗೆ ತೃಪ್ತಿಕರವಾಗಿ ಉತ್ತರಿಸಲು ವಿಫಲನಾಗಿದ್ದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಪೊಲೀಸ್ ಕಾಯಿದೆಯ ಸೆಕ್ಷನ್ 122 (ಬಿ) ಅಡಿಯಲ್ಲಿ ಆತನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು.

ಸೂರ್ಯೋದಯ ಮತ್ತು ಸೂರ್ಯಾಸ್ತದ ನಡುವೆ ಮುಖ ಮುಚ್ಚಿಕೊಂಡಿರುವುದು ಅಥವಾ ಅಪರಾಧ ಎಸಗುವ ಉದ್ದೇಶದಿಂದ ವೇಷ ಧರಿಸಿರುವ ವ್ಯಕ್ತಿಯನ್ನು ಸೆಕ್ಷನ್ 122 (ಬಿ) ಅಪರಾಧಿ ಎಂದು ಪರಿಗಣಿಸುತ್ತದೆ. ಈ ವಾದವನ್ನು ಪ್ರಾಸಿಕ್ಯೂಷನ್‌ ಮುಂದಿರಿಸಿತ್ತು.

ಆದರೆ, ಇದಕ್ಕೆ ನ್ಯಾಯಾಲಯ ಸಹಮತಿಸಲಿಲ್ಲ. ಮುಂಬೈನಂತಹ ನಗರಗಳಲ್ಲಿ ಗಂಟೆ 1:30 ಎಂಬುದು ತಡವೇನೂ ಅಲ್ಲ. ತಡವೇ ಅಂದುಕೊಂಡರೂ ಆ ಸಮಯದಲ್ಲಿ ಯಾವುದೇ ರಾತ್ರಿ ಕರ್ಫ್ಯೂ ಜಾರಿಯಲ್ಲಿರಲಿಲ್ಲ ಎಂದು ಮುಂಬೈನ ಗಿರ್‌ಗಾಂವ್‌ನಲ್ಲಿರುವ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಎನ್‌ ಎ ಪಟೇಲ್ ಹೇಳಿದರು.

ಮಾಸ್ಕ್‌ ಇಲ್ಲದೇ ಹೋಗಿದ್ದರೆ ಕರವಸ್ತ್ರವನ್ನು ಮುಖಗವಸಾಗಿ ಬಳಸುತ್ತಾರೆ. ಆರೋಪಿ ತನ್ನ ಬಾಯಿ ಮುಚ್ಚಲು ಕರವಸ್ತ್ರವನ್ನು ಮುಖಗವಸಾಗಿ ಬಳಸಿದ್ದರೆ ಆತ ತನ್ನ ಗುರುತನ್ನು ಮರೆಮಾಚುತ್ತಿದ್ದಾನೆ ಎಂದರ್ಥವಲ್ಲ. ಆರೋಪಿ ಕರವಸ್ತ್ರದಿಂದ ಗುರುತು ಮರೆಮಾಚಲು ಬಯಸಿದ್ದರೆ ಆತ ಪೊಲೀಸ್‌ ಅಧಿಕಾರಿಗಳಿಗೆ ತನ್ನ ಹೆಸರು ಹೇಳುತ್ತಿರಲಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಹೀಗಾಗಿ ಪೊಲೀಸರಿಗೆ ತೃಪ್ತಿಕರ ಉತ್ತರಗಳನ್ನು ನೀಡಲು ಆರೋಪಿ ವಿಫಲವಾಗಿದ್ದಾನೆ ಎಂಬ ಪ್ರಾಸಿಕ್ಯೂಷನ್‌ ವಾದವನ್ನು ಅದು ತಿರಸ್ಕರಿಸಿತು. ಆರೋಪಿಯನ್ನು ನಿರಪರಾಧಿ ಎಂದು ಪರಿಗಣಿಸಿ ಆತನನ್ನು ಖುಲಾಸೆಗೊಳಿಸಿತು.

ತೀರ್ಪಿನ ಪ್ರತಿಯನ್ನು ಇಲ್ಲಿ ಓದಿ:

The_State_of_Maharashtra_vs_Sumitkumar_Basantram_Kashyap (1).pdf
Preview