Greater Bengaluru Authority & karnataka hc  
ಸುದ್ದಿಗಳು

ಬೆಂಗಳೂರು ದಕ್ಷಿಣ ಕ್ಷೇತ್ರದ ಕೆಲ ಭಾಗಗಳು ಬೊಮ್ಮನಹಳ್ಳಿ ವ್ಯಾಪ್ತಿಗೆ: ಸರ್ಕಾರ, ಜಿಬಿಎಗೆ ಹೈಕೋರ್ಟ್‌ ನೋಟಿಸ್‌

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಎಂ ಕೃಷ್ಣಪ್ಪ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ನಡೆಸಿತು.

Bar & Bench

ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕೆಲವು ವಾರ್ಡ್‌ಗಳ ಕೆಲ ಪ್ರದೇಶಗಳನ್ನು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಾರ್ಡ್‌ಗಳ ಪ್ರದೇಶಗಳಿಗೆ ಸೇರಿಸಿರುವುದನ್ನು ಆಕ್ಷೇಪಿಸಿರುವ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ನೋಟಿಸ್‌ ಜಾರಿಗೊಳಿಸಿದೆ.

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಎಂ ಕೃಷ್ಣಪ್ಪ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ನಡೆಸಿತು.

ಕೆಲ ಕಾಲ ವಾದ ಆಲಿಸಿದ ಪೀಠವು ರಾಜ್ಯ ಸರ್ಕಾರ, ಜಿಬಿಎ ಮುಖ್ಯ ಆಯುಕ್ತ, ದಕ್ಷಿಣ ನಗರ ಪಾಲಿಕೆ ಆಯುಕ್ತ, ವಾರ್ಡ್ ಮರುವಿಂಗಡಣೆ ಆಯೋಗ, ರಾಜ್ಯ ಚುನಾವಣಾ ಆಯೋಗ, ರಾ‍ಜ್ಯ ಮುಖ್ಯ ಚುನಾವಣಾಧಿಕಾರಿಗೆ ನೋಟಿಸ್ ಜಾರಿಗೊಳಿಸಿತು. ಅಲ್ಲದೇ, ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳ ಕೆಲ ಪ್ರದೇಶಗಳನ್ನು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಾರ್ಡ್ ಗಳಿಗೆ ಸೇರಿಸಲಾಗಿದೆಯೇ ಎಂಬ ಬಗ್ಗೆ ಸ್ಪಷ್ಟನೆ ನೀಡುವಂತೆ ಸರ್ಕಾರದ ವಕೀಲರಿಗೆ ನಿರ್ದೇಶಿಸಿದ ಪೀಠವು ವಿಚಾರಣೆಯನ್ನು ಫೆಬ್ರವರಿ 18ಕ್ಕೆ ಮುಂದೂಡಿತು. ಅರ್ಜಿದಾರರ ಪರ ವಕೀಲ ಜಿ ಎ ಮಿಥುನ್ ವಾದಿಸಿದರು.

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಎಳೇನಹಳ್ಳಿ ವಾರ್ಡ್‌ನ ಅಕ್ಷಯನಗರ ಹಾಗೂ ಅದರ ಸುತ್ತಲಿನ ಪ್ರದೇಶಗಳನ್ನು ಮತ್ತು ಕೊತ್ತನೂರು ವಾರ್ಡ್‌ನ ಕ್ಲಾಸಿಕ್ ಆರ್ಚರ್ಡ್ ಪ್ರದೇಶವನ್ನು ಕ್ರಮವಾಗಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವಿಜಯಾ ಬ್ಯಾಂಕ್ ಲೇಔಟ್ ವಾರ್ಡ್ ಮತ್ತು ದೊರೆಸಾನಿ ಪಾಳ್ಯ ವಾರ್ಡ್‌ಗೆ ಸೇರಿಸಿರುವುದನ್ನು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

ಒಂದು ವಾರ್ಡ್ ಅನ್ನು ಎರಡು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಗೆ ಸೇರಿಸುವುದು ಜಿಬಿಎ ಕಾಯಿದೆ ಮತ್ತು ವಾರ್ಡ್ ಮರುವಿಂಗಡಣೆ ಮಾರ್ಗಸೂಚಿಗಳಿಗೆ ವಿರುದ್ಧವಾಗಿದೆ. ಆದ್ದರಿಂದ, ಎಳೇನಹಳ್ಳಿ ವಾರ್ಡ್‌ನ ಅಕ್ಷಯನಗರ ಹಾಗೂ ಅದರ ಸುತ್ತಲಿನ ಪ್ರದೇಶಗಳನ್ನು ಮತ್ತು ಕೊತ್ತನೂರು ವಾರ್ಡ್ ನ ಕ್ಲಾಸಿಕ್ ಆರ್ಚರ್ಡ್ ಪ್ರದೇಶವನ್ನು ಕ್ರಮವಾಗಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವಿಜಯಾ ಬ್ಯಾಂಕ್ ಲೇಔಟ್ ವಾರ್ಡ್ ಮತ್ತು ದೊರೆಸಾನಿ ಪಾಳ್ಯ ವಾರ್ಡ್‌ಗೆ ಸೇರಿಸಿ ಹೊರಡಿಸಿರುವ ಅಧಿಸೂಚನೆ ರದ್ದುಪಡಿಸಬೇಕು. ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳಿಗೆ ಸೇರಿಸಿರುವ ಪ್ರದೇಶಗಳನ್ನು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಾರ್ಡ್‌ಗಳಿಗೆ ಮರು ಸೇರಿಸಲು ಸೂಚಿಸಿಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.