ಸಿಜೆಐ ಡಿ ವೈ ಚಂದ್ರಚೂಡ್‌ ಅವರನ್ನು ಸನ್ಮಾನಿಸಿದ ಹೈಕೋರ್ಟ್‌ ಸಿಜೆ ಎನ್‌ ವಿ ಅಂಜಾರಿಯಾ. 
ಸುದ್ದಿಗಳು

[ನ್ಯಾಯಾಂಗದಲ್ಲಿ ಮಹಿಳಾ ನೇಮಕಾತಿ] ಕರ್ನಾಟಕವು ದೇಶದಲ್ಲಿಯೇ ಸಾಮಾಜಿಕ ಪರಿವರ್ತನೆ ಮುನ್ನಡೆಸಿದೆ: ಸಿಜೆಐ ಚಂದ್ರಚೂಡ್‌

ದೇಶಾದ್ಯಂತ ಜಿಲ್ಲಾ ನ್ಯಾಯಾಂಗದಲ್ಲಿ ಮಹಿಳೆಯರ ಬಲವು ಶೇ 37ರಷ್ಟಿದೆ. ಕರ್ನಾಟಕದಲ್ಲಿ ಕರ್ತವ್ಯನಿರತ ಸಿವಿಲ್‌ ನ್ಯಾಯಾಧೀಶರಲ್ಲಿ ಮಹಿಳೆಯರ ಪ್ರಮಾಣವು ಶೇ. 44ರಷ್ಟಿದ್ದು ಕರ್ನಾಟಕವು ಭಾರತದಾದ್ಯಂತ ಸಾಮಾಜಿಕ ಪರಿವರ್ತನೆಯನ್ನು ಮುನ್ನಡೆಸುತ್ತಿದೆ

Bar & Bench

ದೇಶದಲ್ಲಿಯೇ ಜಿಲ್ಲಾ ನ್ಯಾಯಾಂಗಕ್ಕೆ ಸಂಬಂಧಿಸಿದಂತೆ ಮಹಿಳಾ ನೇಮಕಾತಿ ವಿಚಾರದಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದ್ದು ಸಾಮಾಜಿಕ ಪರಿವರ್ತನೆಯನ್ನು ಮುನ್ನಡೆಸುತ್ತಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್‌ ಅವರು ಹರ್ಷಿಸಿದರು.

ಬೆಂಗಳೂರಿನ ಜಿಕೆವಿಕೆಯಲ್ಲಿನ ಬಾಬು ರಾಜೇಂದ್ರ ಪ್ರಸಾದ್ ಇಂಟರ್‌ನ್ಯಾಷನಲ್‌ ಕನ್ವೆನ್ಷನ್‌ ಸೆಂಟರ್‌ನಲ್ಲಿ ಶನಿವಾರ ಆಯೋಜಿಸಿದ್ದ 21ನೇ ದ್ವೈವಾರ್ಷಿಕ ರಾಜ್ಯಮಟ್ಟದ ನ್ಯಾಯಾಂಗ ಅಧಿಕಾರಿಗಳ ಸಮಾವೇಶದಲ್ಲಿ ಅವರು ಮಾತನಾಡಿದರು.

“ದೇಶಾದ್ಯಂತ ಜಿಲ್ಲಾ ನ್ಯಾಯಾಂಗದಲ್ಲಿ ಮಹಿಳೆಯರ ಬಲವು ಶೇ 37ರಷ್ಟಿದೆ. ಕರ್ನಾಟಕದಲ್ಲಿ ಜಿಲ್ಲಾ ನ್ಯಾಯಾಂಗದಲ್ಲಿನ ನೇಮಕಾತಿಯು ಭರವಸೆ ಮೂಡಿಸುವಂತಿದೆ. ಇಲ್ಲಿ ಒಟ್ಟಾರೆ ಕರ್ತವ್ಯನಿರತ ಸಿವಿಲ್‌ ನ್ಯಾಯಾಧೀಶರು 447 ಮಂದಿ ಇದ್ದು, 200 ಮಂದಿ ನ್ಯಾಯಾಧೀಶರು ಮಹಿಳೆಯರಾಗಿದ್ದಾರೆ. ಇದು ಸುಮಾರು ಶೇ. 44ರಷ್ಟಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕವು ಭಾರತದಾದ್ಯಂತ ಸಾಮಾಜಿಕ ಪರಿವರ್ತನೆಯನ್ನು ಮುನ್ನಡೆಸುತ್ತಿದೆ” ಎಂದು ಮೆಚ್ಚುಗೆ ಸೂಚಿಸಿದರು.

ಜಿಲ್ಲಾ ನ್ಯಾಯಾಂಗದಲ್ಲಿನ ಸೌಲಭ್ಯ ಕುರಿತು ಮಾತನಾಡಿದ ಸಿಜೆಐ “ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯವಿದ್ದರೆ ಸಾಲದು ಸ್ವಚ್ಛವಾದ ನ್ಯಾಪ್ಕಿನ್‌ ಒದಗಿಸುವ ಯಂತ್ರಗಳನ್ನೂ ಅಳವಡಿಸಬೇಕು… ಇದು ದೇಶಾದ್ಯಂತ ಇರುವ ಎಲ್ಲಾ ಜಿಲ್ಲಾ ನ್ಯಾಯಾಲಯಗಳಲ್ಲಿ ಆಗಬೇಕು. ಭಾರತೀಯ ನ್ಯಾಯಾಂಗದಲ್ಲಿ ಮಹಿಳಾ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿರುವುದನ್ನು ಮರೆಯಬಾರದು. ವಕೀಲರು ಮತ್ತು ನ್ಯಾಯಮೂರ್ತಿಗಳಂತೆ ಅವರಿಗೂ ಈ ಸೌಲಭ್ಯ ಅಗತ್ಯವಾಗಿದೆ” ಎಂದರು.

ಸಿಜೆಐ ಅವರನ್ನೂ ಕಾಡಿದ ಟ್ರೋಲ್‌ ವಿಡಿಯೋ

“ಈಚೆಗೆ ನನ್ನ ಕೋರ್ಟ್‌ನಲ್ಲಿನ ವಿಡಿಯೋ ಒಂದನ್ನು ತಿರುಚುವ ಮೂಲಕ ನನ್ನನ್ನು ದುರಹಂಕಾರಿ ಎಂದು ಜರಿಯಲಾಗಿದೆ” ಎಂದು ಸಿಜೆಐ ಅವರು ಆನ್‌ಲೈನ್‌ನಲ್ಲಿ ನಡೆಯುವ ಚಾರಿತ್ರ್ಯವಧೆಯ ಬಗ್ಗೆ ಗಮನಸೆಳೆದರು.

“ಬೆನ್ನು ನೋವಿನ ಹಿನ್ನೆಲೆಯಲ್ಲಿ ಕುರ್ಚಿಯನ್ನು ಸರಿ ಹೊಂದಿಸಲು ಪ್ರಯತ್ನಿಸಿದ್ದ ಲೈವ್‌ ಸ್ಟ್ರೀಮಿಂಗ್‌ ವಿಡಿಯೋವನ್ನು ತಿರುಚಿ ನಾನು ವಿಚಾರಣೆ ನಡೆಯುತ್ತಿರುವಾಗ ಪೀಠ ತೊರೆದೆ ಎನ್ನುವ ರೀತಿಯಲ್ಲಿ ಬಿಂಬಿಸಲಾಗಿದೆ. ಈ ತಿರುಚಿದ ವಿಡಿಯೊ ಆನ್‌ಲೈನ್‌ನಲ್ಲಿ ಬರುತ್ತಿದ್ದಂತೆ ನನ್ನ ಮೇಲೆ ವ್ಯಾಪಕ ಟೀಕಾತ್ಮಕ ದಾಳಿ ಮಾಡಿ ಟ್ರೋಲ್‌ ಮಾಡಲಾಯಿತು” ಎಂದರು.

ಒತ್ತಡ ನಿರ್ವಹಣೆಯು ನ್ಯಾಯದಾನದ ಭಾಗ

“ಪಾರ್ಟಿ ಇನ್‌ ಪರ್ಸನ್‌ ರೂಪದಲ್ಲಿ ತಮ್ಮ ಪ್ರಕರಣಗಳಲ್ಲಿ ವಾದಿಸುವ ಕೆಲವರು ನ್ಯಾಯಾಲಯದ ಅಂಕೆಯನ್ನು ಮೀರಿ ವರ್ತಿಸುತ್ತಾರೆ. ಇದಕ್ಕೆ ಅವರನ್ನು ಟೀಕಿಸುವುದು ಉತ್ತರವಾಗಬಾರದು. ಏಕೆ ಅವರು ಹಾಗೆ ವರ್ತಿಸುತ್ತಿದ್ದಾರೆ ಎಂಬುದನ್ನು ಸಹಾನುಭೂತಿಯಿಂದ ಅರಿಯಬೇಕು. ಒತ್ತಡ ನಿಭಾಯಿಸುವುದು ಮತ್ತು ಪ್ರಕರಣ ಇತ್ಯರ್ಥಪಡಿಸುವುದು ನ್ಯಾಯದಾನದ ಭಾಗ” ಎಂದೂ ಸಿಜೆಐ ಹೇಳಿದರು.

“ಕ್ರಿಮಿನಲ್‌ ಪ್ರಕರಣಗಳ ನಿರ್ಧಾರದಲ್ಲಿ ಜಿಲ್ಲಾ ನ್ಯಾಯಾಲಯಗಳು ಮೊದಲ ಕೇಂದ್ರಬಿಂದುವಾಗಿವೆ. ತಂಡವಾಗಿ ಯುವ ನ್ಯಾಯಾಧೀಶರಿಗೆ ನೀವೆಲ್ಲರೂ ಮಾರ್ಗದರ್ಶನ ನೀಡಬೇಕು” ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನ್ಯಾಯಾಂಗ ಅಧಿಕಾರಿಗಳು, ನ್ಯಾಯಮೂರ್ತಿಗಳು.

ಜಾಮೀನು ಅರ್ಜಿ ನಿರ್ಧರಿಸುವಾಗ ಭಯ, ಪಕ್ಪಪಾತ ಬೇಡ

ನ್ಯಾಯಾಂಗದ ಅಧಿಕಾರಿಗಳನ್ನು ಉದ್ದೇಶಿಸಿ ಸಿಜೆಐ ಅವರು “ನಾವು ನಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಡಬೇಕು. ಕನ್ನಡದ ಖ್ಯಾತ ಕವಿ/ಕಾದಂಬರಿಕಾರ ಡಾ. ಶಿವರಾಮ ಕಾರಂತ (ಪಕ್ಷಿ ನಂಬಿಕೆ ಇಟ್ಟಿರುವುದು ಅದರ ರೆಕ್ಕೆಯ ಮೇಲೆ ವಿನಾ ಮರದ ಕೊಂಬೆಯ ಮೇಲಲ್ಲ) ಅವರ ಮಾತುಗಳನ್ನು ನ್ಯಾಯಾಂಗ ಅಧಿಕಾರಿಗಳು ನೆನಪಿನಲ್ಲಿಡಬೇಕು. ಯಾವುದೇ ಭಯ ಅಥವಾ ಪಕ್ಷಪಾತವಿಲ್ಲದೇ ಕರ್ತವ್ಯ ನಿಭಾಯಿಸುವ ಪ್ರಮುಖ ಜವಾಬ್ದಾರಿಯನ್ನು ನಿಮಗೆ ನೀಡಲಾಗಿದೆ. ಜಾಮೀನು ಅರ್ಜಿಯನ್ನು ನಿರ್ಧರಿಸುವಾಗ ಯಾವುದೇ ಭಯ ಅಥವಾ ಪಕ್ಷಪಾತ ಇಲ್ಲ ಎಂಬುದನ್ನು ನೆನಪಿನಲ್ಲಿಡಬೇಕು. ನಿಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಡಿ, ಪ್ರಕರಣ ನಿರ್ಧರಿಸುವಾಗ ಹೆದರಬೇಡಿ. ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ನಿಮ್ಮ ಬೆಂಬಲಕ್ಕೆ ನಿಲ್ಲಲಿವೆ. ಆದರೆ, ನೀವು ನಿಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಡಬೇಕು” ಎಂದು ವಿಶ್ವಾಸ ತುಂಬಿದರು.  

ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು “ಆಧುನಿಕ ಭಾರತದ ನ್ಯಾಯಾಂಗ ವ್ಯವಸ್ಥೆಯು ಬುದ್ದ, ಬಸವಣ್ಣ ಮತ್ತು ನಾರಾಯಣ ಗುರು ಅವರ ಬೋಧನೆಯ ಮೌಲ್ಯಗಳನ್ನು ಒಳಗೊಂಡಿದೆ. ವಚನಗಳು ಮತ್ತು ಪ್ರಗತಿಪರ ಚಿಂತಕರು ಸಮಗ್ರ ಸಹಾನುಭೂತಿ ಮತ್ತು ಸಾಮಾಜಿಕ ಪರಿವರ್ತನೆ ಪ್ರತಿಪಾದಿಸಿದ್ದಾರೆ. ಜನರ ಹಕ್ಕುಗಳನ್ನು ಎತ್ತಿ ಹಿಡಿಯುವ ಐತಿಹಾಸಿಕ ತೀರ್ಪುಗಳನ್ನು ನೀಡುವ ಮೂಲಕ ಭಾರತದ ನ್ಯಾಯಾಂಗವು ದೇಶ ಹೆಮ್ಮೆಪಡುವಂತೆ ಮಾಡಿದೆ. ಸಂವಿಧಾನದ 32ನೇ ವಿಧಿಯು ಸಂವಿಧಾನದ ಹೃದಯ ಮತ್ತು ಆತ್ಮ ಎಂದಿದ್ದ ಭಾರತದ ಸಂವಿಧಾನದ ಕರ್ತೃ ಡಾ. ಬಾಬಾಸಾಹೇಬ್‌ ಅಂಬೇಡ್ಕರ್‌ ಅವರ ನಿರೀಕ್ಷೆಯನ್ನು ಸುಪ್ರೀಂ ಕೋರ್ಟ್‌ ನಿಜಗೊಳಿಸಿದೆ” ಎಂದರು.

ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಅವರು “ಜಿಲ್ಲಾ ಮತ್ತು ತಾಲ್ಲೂಕು ನ್ಯಾಯಾಂಗವು ವ್ಯವಸ್ಥೆಯ ಬೆನ್ನೆಲುಬು. ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳು ವಿಚಾರಣಾಧೀನ ನ್ಯಾಯಾಲಯಗಳಲ್ಲಿನ ಭೌತಿಕ ಮೂಲಸೌಕರ್ಯ ಮತ್ತು ಇತರೆ ವಿಚಾರಗಳ ಅಭಿವೃದ್ಧಿಗೆ ಆಸಕ್ತಿವಹಿಸಿದ್ದಾರೆ” ಎಂದರು.

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾದ ಎ ಎಸ್‌ ಬೋಪಣ್ಣ, ಬಿ ವಿ ನಾಗರತ್ನ ಮತ್ತು ಅರವಿಂದ್‌ ಕುಮಾರ್‌ ಅವರು ಸಮಾರಂಭದಲ್ಲಿ ಮಾತನಾಡಿದರು.