CJI DY Chandrachud in Nepal 
ಸುದ್ದಿಗಳು

ಶಾಲೆಯಲ್ಲಿ ದೈಹಿಕ ಶಿಕ್ಷೆ ವಿಧಿಸಿದಾಗ ತುಂಬಾ ನಾಚಿಕೆಯಾಗಿತ್ತು: ಸಿಜೆಐ ಚಂದ್ರಚೂಡ್

ಡಿಜಿಟಲ್ ವೇದಿಕೆಗಳಲ್ಲಿ ಮಕ್ಕಳು ಎದುರಿಸುತ್ತಿರುವ ಅಪಾಯಗಳನ್ನು ಪ್ರಸ್ತಾಪಿಸಿದ ಸಿಜೆಐ ಮಕ್ಕಳನ್ನು ಅದರಲ್ಲಿಯೂ ಹದಿಹರೆಯದವರನ್ನು ಗುರಿಯಾಗಿಸಿಕೊಂಡಿದ್ದ ಅಂತರ್ಜಾಲ ವಂಚನೆ ʼಮೊಮೊ ಚಾಲೆಂಜ್ʼ ಅನ್ನುಅವರು ಈ ವೇಳೆ ಉದಾಹರಣೆಯಾಗಿ ನೀಡಿದರು.

Bar & Bench

ತಾನು ಶಾಲೆಯಲ್ಲಿ ಓದುತ್ತಿದ್ದಾಗ ಅನುಭವಿಸಿದ ದೈಹಿಕ ಶಿಕ್ಷೆಯ ಕಹಿ ನೆನಪು ಹೇಗೆ ಈಗಲೂ ತನ್ನ ಹೃದಯದಲ್ಲಿ ಅಚ್ಚೊತ್ತಿದೆ ಎಂಬುದನ್ನು ತಿಳಿಸಿದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್‌ ಮಕ್ಕಳನ್ನು ಹೇಗೆ ನಡೆಸಿಕೊಳ್ಳಲಾಗುತ್ತದೆ ಎಂಬುದು ಅವರ ಮನಸ್ಸಿನ ಮೇಲೆ ಶಾಶ್ವತ ಪರಿಣಾಮ ಬೀರುತ್ತದೆ ಎಂದರು.

ನೇಪಾಳದ ಸುಪ್ರೀಂ ಕೋರ್ಟ್‌, ರಾಜಧಾನಿ ಕಠ್ಮಂಡುವಿನಲ್ಲಿ ಶನಿವಾರ ಆಯೋಜಿಸಿದ್ದ ಬಾಲ ನ್ಯಾಯ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ದೇಶಿಸಿ ಮಾತನಾಡಿದರು.

ಸಿಜೆಐ ಭಾಷಣದ ಪ್ರಮುಖಾಂಶಗಳು

  • ನೀವು ಮಕ್ಕಳನ್ನು ಹೇಗೆ ನಡೆಸಿಕೊಳ್ಳುತ್ತೀರಿ ಎಂಬುದು ಅವರ ಮನಸ್ಸಿನಲ್ಲಿ ಜೀವನದುದ್ದಕ್ಕೂ ಆಳವಾದ ಪ್ರಭಾವ ಬೀರುತ್ತದೆ.

  • ನಾನು ಶಾಲಾ ದಿನಗಳಲ್ಲಿ ನಡೆದ ಘಟನೆಯನ್ನು ಎಂದಿಗೂ ಮರೆಯಲಾರೆ. ಬಾಲಾಪರಾಧಿಯಾಗದಿದ್ದರೂ ಕುಶಲ ಕಲೆ ತಯಾರಿಗಾಗಿ ಸೂಕ್ತ ಗಾತ್ರದ ಸೂಜಿಯನ್ನು ಶಾಲೆಗೆ ತರದೆ ಇದ್ದುದಕ್ಕಾಗಿ ನನ್ನ ಕೈಗೆ ಬೆತ್ತದಿಂದ ಹೊಡೆಯಲಾಯಿತು. ಅದನ್ನು ಈಗಲೂ ನೆನಪಿಸಿಕೊಳ್ಳುತ್ತೇನೆ.

  • ಬೆತ್ತ ಎತ್ತಿದ್ದ ಶಿಕ್ಷಕರಿಗೆ ಹಿಂಬದಿಗೆ ಹೊಡೆಯುವಂತೆ ಕೋರಿದರೂ ಅವರು ನನ್ನ ಕೈಗೆ ಬಾರಿಸಿದರು.ಕೆಲ ದಿನಗಳು ನೋವಿನಿಂದ ಬಳಲುತ್ತಿದ್ದರೂ ಶಾಲೆಯಲ್ಲಿ ಹೊಡೆಸಿಕೊಂಡ ವಿಚಾರವನ್ನು ಪೋಷಕರಿಗೆ ತಿಳಿಸಲು ನಾಚಿಕೆಯಾಗಿ ದೇಹದ ಮೇಲೆ ಥಳಿತದಿಂದ ಉಂಟಾದ ಗುರುತುಗಳನ್ನು ಮರೆಮಾಚುತ್ತಿದ್ದೆ.

  • ಆ ಘಟನೆ ನನ್ನ ಹೃದಯದಲ್ಲಿ ಅಚ್ಚೊತ್ತಿದ್ದು ನಾನು ನನ್ನ ಕೆಲಸ ಮಾಡುತ್ತಿರುವಾಗ ಈಗಲೂ ಅದು ನನ್ನ ನೆನಪಿನಲ್ಲಿ ಗಾಢವಾಗಿ ಉಳಿದಿದೆ. ಮಕ್ಕಳನ್ನು ವಿಡಂಬನೆ ಮಾಡುವುದು ಅವರ ಮೇಲೆ ಆಳ ಪರಿಣಾಮ ಉಂಟುಮಾಡುತ್ತದೆ.  

  • ಕಾನೂನಿನೊಂದಿಗೆ ಸಂಘರ್ಷದಲ್ಲಿರುವ ಮಕ್ಕಳು ಮತ್ತು ವಿವಿಧ ಅಪರಾಧಗಳಿಗೆ ಬಲಿಯಾದ ಮಕ್ಕಳ ಬಗ್ಗೆ ಸಂವೇದನಾಶೀಲ ಮತ್ತು ಸುಧಾರಣಾಧಾರಿತ ವಿಧಾನವೊಂದು ಚಾಲ್ತಿಗೆ ಬರಬೇಕು.

  • ಅಂತಹವರಿಗೆ ಸಹಾನುಭೂತಿ, ಪುನರ್ವಸತಿ ಮತ್ತು ಸಮಾಜದಲ್ಲಿ ಮರುಸೇರ್ಪಡೆಗೊಳ್ಳುವ ಅವಕಾಶಗಳನ್ನು ನಮ್ಮ ನ್ಯಾಯ ವ್ಯವಸ್ಥೆಗಳು ನೀಡುವಂತಾಗಬೇಕು.

  • ಬಾಲಾಪರಾಧಿ ನ್ಯಾಯವು ಕೇವಲ ಬಾಲಾಪರಾಧಿ ಕಾಯಿದೆಯ ಆದೇಶಗಳಿಗೆ ಸೀಮಿತವಾಗಿಲ್ಲ ಬದಲಿಗೆ ಶಾಸಕಾಂಗ ರೂಪಿಸಿರುವ ವಿವಿಧ ಕಾಯಿದೆಗಳ ಸಂಕೀರ್ಣವಾದ ಪರಸ್ಪರ ಕ್ರಿಯೆಯಿಂದ ರೂಪುಗೊಂಡಿದೆ.

  • ಅಂತರ್‌ಜಾಲ ತನ್ನ ಬಳಕೆದಾರರನ್ನು ಅನಾಮಿಕರನ್ನಾಗಿ ಇರಿಸುತ್ತಿರುವ ಸಂದರ್ಭದಲ್ಲಿ ಡಿಜಿಟಲ್‌ ವೇದಿಕೆಗಳಲ್ಲಿ ಮಕ್ಕಳು ಅಪಾಯ ಎದುರಿಸುತ್ತಿದ್ದಾರೆ. ಮಕ್ಕಳನ್ನು ಅದರಲ್ಲಿಯೂ ಹದಿಹರೆಯದವರನ್ನು ಗುರಿಯಾಗಿಸಿಕೊಂಡ ಅಂತರ್ಜಾಲ ವಂಚನೆ ಮೊಮೊ ಚಾಲೆಂಜ್‌ ಅಂತಹವುಗಳಲ್ಲಿ ಒಂದು.

  • ಈ ಪರಿಕಲ್ಪನೆ ಮೂಲಕ ಸ್ವಯಂ ಹಾನಿ ಇಲ್ಲವೇ ಆತ್ಮಹತ್ಯೆಗೆ ಪ್ರಚೋದಿಸುವಂತಹ ಸವಾಲುಗಳನ್ನು ಮಕ್ಕಳಿಗೆ ವಿಧಿಸಿತು.  ಇದನ್ನು ನಂತರ ನಿರ್ಬಂಧಿಸಲಾಯಿತಾದರೂ ಇದರ ಕ್ಷಿಪ್ರ ಪ್ರಸಾರ ಆನ್‌ಲೈನ್‌ ಅಪಾಯಗಳಿಗೆ ಮಕ್ಕಳು ಒಳಗಾಗುವಿಕೆಯನ್ನು ಎತ್ತಿ ತೋರಿಸಿತು.

  • ಎಳೆಯರಿಗೆ ಶಿಕ್ಷಣ ನೀಡಿ ಅವರನ್ನು ರಕ್ಷಿಸಲು ಪೂರ್ವಭಾವಿ ಕ್ರಮಗಳ ಅಗತ್ಯವಿದೆ.

  • ಸೈಬರ್-ಸಂಬಂಧಿತ ಅಪಾಯಗಳನ್ನು ತಗ್ಗಿಸುವಲ್ಲಿ ಡಿಜಿಟಲ್ ಸಾಕ್ಷರತೆಗೆ ಒತ್ತು ನೀಡುವಿಕೆ, ಜವಾಬ್ದಾರಿಯುತ ಆನ್‌ಲೈನ್ ನಡೆ ಹಾಗೂ ಪೋಷಕರ ಪರಿಣಾಮಕಾರಿ ಮಾರ್ಗದರ್ಶನ ನಿರ್ಣಾಯಕ ಅಂಶಗಳಾಗಿವೆ.

  • ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಬಾಲಾಪರಾಧಿ ನ್ಯಾಯ ಕಾಯಿದೆಗಳ ಪರಿಣಾಮಕಾರಿ ಜಾರಿಗೆ ಮೂಲಭೂತ ಸೌಕರ್ಯಗಳ ಕೊರತೆ ಇರುವುದು ಒಂದು ಸವಾಲು. ಇದು ಬಾಲಾಪರಾಧಿಗಳ ಕೆಳದರ್ಜೆಯ ಜೀವನ ಪರಿಸ್ಥಿತಿಗಳಿಗೆ ಕಾರಣವಾಗಬಹುದು.

  • ಈ ಪ್ರದೇಶಗಳಲ್ಲಿ ಸಮಾಲೋಚನೆ, ಅರಿವು, ಅಥವಾ ವೃತ್ತಿಪರ ತರಬೇತಿಯಂತಹ ಅಗತ್ಯ ಸೇವೆಗಳಿಗೆ ಸೀಮಿತ ಅವಕಾಶ ಇರುವುದು ಬಾಲಾಪರಾಧಿಗಳನ್ನು ತಿದ್ದುವ ವಿಚಾರವನ್ನು ಇನ್ನಷ್ಟು ಸಂಕೀರ್ಣಗೊಳಿಸುತ್ತದೆ.

  • ಬಾಲಾಪರಾಧದ ಸಂಕೀರ್ಣ ಸ್ವರೂಪವನ್ನು ಒಪ್ಪಿಕೊಳ್ಳುವುದು ಮತ್ತು ಅಂತಹ ನಡವಳಿಕೆಗೆ ಆಧಾರವಾಗಿರುವ ಸಾಮಾಜಿಕ-ಆರ್ಥಿಕ ಅಂಶಗಳನ್ನು ನಿವಾರಿಸುವ ಸಮಗ್ರ ವಿಧಾನವನ್ನು ಕಂಡುಕೊಳ್ಳುವುದು ಅತ್ಯಗತ್ಯ. ಇದರಿಂದ ಪ್ರತಿ ಮಗುವಿಗೆ ತಮ್ಮ ಸಾಮರ್ಥ್ಯವನ್ನು ಅರಿಯಲು ಅವಕಾಶ ಒದಗುತ್ತದೆ.