Justice(retd.) Madan Lokur
Justice(retd.) Madan Lokur  File Photo
ಸುದ್ದಿಗಳು

ಸೆಪ್ಟೆಂಬರ್ ತಿಂಗಳೊಂದರಲ್ಲೇ 34 ನ್ಯಾಯಮೂರ್ತಿಗಳ ವರ್ಗಾವಣೆ ಅಗತ್ಯವಿತ್ತೆ? ನ್ಯಾ. ಮದನ್ ಲೋಕೂರ್ ಪ್ರಶ್ನೆ

Bar & Bench

ಹೈಕೋರ್ಟ್‌ಗಳಿಂದ ಇಷ್ಟೊಂದು ನ್ಯಾಯಮೂರ್ತಿಗಳು ಮತ್ತು ಮುಖ್ಯ ನ್ಯಾಯಮೂರ್ತಿಗಳನ್ನು ಏಕೆ ವರ್ಗಾವಣೆ ಮಾಡಲಾಗುತ್ತಿದೆ ಎಂದು ನಿವೃತ್ತ ನ್ಯಾಯಮೂರ್ತಿ ಎಂ ಬಿ ಲೋಕೂರ್ ಪ್ರಶ್ನಿಸಿದರು.

ಲೀಫ್‌ಲೆಟ್‌ ಮಾಧ್ಯಮ ಸಂಸ್ಥೆ ಶುಕ್ರವಾರ ಆಯೋಜಿಸಿದ್ದ ಸಂವಿಧಾನ ದಿನದ ಸಂವಾದ ಕಾರ್ಯಕ್ರಮದಲ್ಲಿ ʼಭಾರತದ ಕಲ್ಪನೆಯನ್ನು ದುರ್ಬಲಗೊಳಿಸುವ ಪ್ರಕ್ರಿಯೆ: ಮುಂದೆ ಯಾವ ಮಾರ್ಗ?ʼ ಎಂಬ ವಿಷಯವಾಗಿ ಅವರು ಮಾತನಾಡಿದರು.

ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಬೇರೆ ನ್ಯಾಯಾಲಯಕ್ಕೆ ಸೇರಿದವರಾಗಿರಬೇಕು ಎಂಬ ಕಲ್ಪನೆಯನ್ನು ತೊಡೆದುಹಾಕಲು ಇದು ನ್ಯಾಯಾಂಗಕ್ಕೆ ತಕ್ಕ ಸಮಯ ಎಂದು ಅವರು ತಿಳಿಸಿದರು. ಕೊಲಿಜಿಯಂ ಅಸ್ತಿತ್ವಕ್ಕೆ ಬರುವುದಕ್ಕಿಂತಲೂ 20 ವರ್ಷಗಳ ಹಿಂದೆ ಈ ವ್ಯವಸ್ಥೆ ರೂಪುಗೊಂಡಿದ್ದು ಈ ನಡುವೆ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ವಿವರಿಸಿದರು.

“ಇಷ್ಟು ನ್ಯಾಯಮೂರ್ತಿಗಳನ್ನು ಏಕೆ ವರ್ಗಾವಣೆ ಮಾಡಲಾಗಿದೆ? ನಮ್ಮಲ್ಲಿ ಹೈಕೋರ್ಟಿನ ಮಟ್ಟದಲ್ಲಿ ನ್ಯಾಯಮೂರ್ತಿಗಳಿದ್ದಾರೆಯೇ? ಅವರ ಸಂಖ್ಯೆ ಸಾಕಷ್ಟು ಪ್ರಮಾಣದಲ್ಲಿಲ್ಲ. ಆದ್ದರಿಂದ ವರ್ಗಾವಣೆ ಮಾಡಬೇಕಾದ ಮುಖ್ಯ ನ್ಯಾಯಮೂರ್ತಿಗಳನ್ನು ವರ್ಗಾವಣೆ ಮಾಡಲಾಗುತ್ತಿದೆ, ಆದರೆ ಅವರಿಗೆ ಕೆಲವು ಹೈಕೋರ್ಟ್‌ಗಳಲ್ಲಿ ಹುದ್ದೆ ತೋರಿಸುತ್ತಿಲ್ಲ. ಒಬ್ಬ ಹಿರಿಯ ನ್ಯಾಯಮೂರ್ತಿ ಇದನ್ನು ಅನುಭವಿಸಿದ್ದಾರೆ” ಎಂದರು.

ದೇಶದಲ್ಲಿ ನಡೆಯುತ್ತಿರುವ ಕೆಲವು ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ನ್ಯಾಯಾಂಗವು ಏಕೆ ಪ್ರತಿಕ್ರಿಯಿಸುತ್ತಿಲ್ಲ ಎಂದ ಅವರು ಎರಡು ವರ್ಷಗಳಿಗೊಮ್ಮೆ ಖಾಲಿ ಇರುವ ಹುದ್ದೆಗಳ ಸಮಸ್ಯೆ ನಿವಾರಿಸಲು ಮುಖ್ಯ ನ್ಯಾಯಮೂರ್ತಿಗಳು ಸಮಾವೇಶಗೊಳ್ಳಬೇಕು ಎಂಬುದಾಗಿ ಕರೆ ನೀಡಿದರು. ನ್ಯಾ. ಲೋಕುರ್ ಅವರು ಸ್ವತಂತ್ರ ನ್ಯಾಯಾಂಗ ಅತ್ಯಗತ್ಯವಾಗಿದ್ದು ಇದು ಇಲ್ಲದೇ ಹೋದರೆ ಸಂವಿಧಾನ ಕೇವಲ ಮತ್ತೊಂದು ಲಿಖಿತ ದಾಖಲೆಯಾಗುತ್ತದೆ ಎಂದರು. "ಎದ್ದು ನಿಲ್ಲುವ, ಮಾತನಾಡುವ, ಆತ್ಮಾವಲೋಕನ ಮಾಡಿಕೊಳ್ಳುವ, ನೀತಿ ರೂಪಿಸುವ ನ್ಯಾಯಾಂಗ ನಮ್ಮದಾಗದೇ ಹೋದರೆ, ನಮ್ಮ ಸಂವಿಧಾನವು ಮತ್ತೊಂದು ಲಿಖಿತ ದಾಖಲೆಯಾಗುತ್ತದೆ. ಅದನ್ನು ನಾವು ನವೆಂಬರ್ 26 ರಂದು ಮತ್ತು ಬಹುಶಃ ಜನವರಿ 26 ರಂದು ಮಾತ್ರ ಚರ್ಚಿಸಬೇಕಾಗುತ್ತದೆ" ಎಂದು ಅವರು ತಿಳಿಸಿದರು.