ED, Supreme Court
ED, Supreme Court 
ಸುದ್ದಿಗಳು

ಕ್ಯಾನ್ಸರ್‌ ರೋಗಿಯ ಜಾಮೀನು ಪ್ರಶ್ನಿಸಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗೆ ₹1 ಲಕ್ಷ ದಂಡ ವಿಧಿಸಿದ ಸುಪ್ರೀಂ ಕೋರ್ಟ್‌

Bar & Bench

ಕ್ಯಾನ್ಸರ್‌ ರೋಗಿಗೆ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗೆ ಸುಪ್ರೀಂ ಕೋರ್ಟ್‌ ₹1 ಲಕ್ಷ ದಂಡ ವಿಧಿಸಿದೆ.

“ಪ್ರತಿವಾದಿಯು ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಅವರನ್ನು ಜಾಮೀನಿ ಮೇಲೆ ಬಿಡುಗಡೆ ಮಾಡಲಾಗಿದೆ. ಹೀಗಾಗಿ, ಈ ವಿಚಾರದಲ್ಲಿ ಈ ನ್ಯಾಯಾಲಯ ಮಧ್ಯಪ್ರವೇಶಿಸಲಾಗದು.. ಜಾರಿ ನಿರ್ದೇಶನಾಲಯವು ಕಾಗದ ಪತ್ರ, ಕಾನೂನು ವೆಚ್ಚ ಮತ್ತು ನ್ಯಾಯಾಲಯ ಸಮಯದ ಹಾಳು ಮಾಡುವುದಕ್ಕಾಗಿ ಈ ವಿಶೇಷ ಮೇಲ್ಮನವಿ ಸಲ್ಲಿಸಬಾರದಿತ್ತು” ಎಂದು ನ್ಯಾಯಮೂರ್ತಿಗಳಾದ ಎಂ ಆರ್‌ ಶಾ ಮತ್ತು ಎಂ ಎಂ ಸುಂದರೇಶ್‌ ಅವರ ನೇತೃತ್ವದ ವಿಭಾಗೀಯ ಪೀಠವು ಅರ್ಜಿ ವಜಾ ಮಾಡಿ ಆದೇಶಿಸಿದೆ.

ಅರ್ಜಿ ಸಲ್ಲಿಸಲು ನಿರ್ದೇಶಿಸಿದ್ದ ಅಧಿಕಾರಿಯ ವೇತನದಲ್ಲಿ ದಂಡದ ಮೊತ್ತವನ್ನು ವಸೂಲಿ ಮಾಡಿ, ಅದನ್ನು ನಾಲ್ಕು ವಾರಗಳಲ್ಲಿ ಸುಪ್ರೀಂ ಕೋರ್ಟ್‌ ರಿಜಿಸ್ಟ್ರಿಯಲ್ಲಿ ಠೇವಣಿ ಇಡಬೇಕು. ದಂಡದ ಹಣವನ್ನು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಸರ್ವೋಚ್ಚ ನ್ಯಾಯಾಲಯದ ಮಧ್ಯಸ್ಥಿಕೆ ಮತ್ತು ಸಂಧಾನ ಯೋಜನಾ ಸಮಿತಿಗೆ ಸಮಾನವಾಗಿ ಹಂಚಿಕೆ ಮಾಡಬೇಕು ಎಂದು ನಿರ್ದೇಶಿಸಲಾಗಿದೆ.

ಪ್ರತಿವಾದಿ ಕಮಲ್‌ ಅಹ್ಸಾನ್‌ ಅವರು ಪ್ರಯಾಗ್‌ರಾಜ್‌ನಲ್ಲಿ ಆಕ್ಸಿಸ್‌ ಬ್ಯಾಂಕ್‌ನ ರಿಲೇಷನ್‌ಶಿಪ್‌ ಅಧಿಕಾರಿಯಾಗಿದ್ದಾರೆ. 2013ರ ದೂರಿಗೆ ಸಂಬಂಧಿಸಿದಂತೆ ಕಳೆದ ವರ್ಷದ ನವೆಂಬರ್‌ನಲ್ಲಿ ಅಲಾಹಾಬಾದ್‌ ಹೈಕೋರ್ಟ್‌ ಅವರಿಗೆ ಜಾಮೀನು ಮಂಜೂರು ಮಾಡಿತ್ತು.

ವಂಚನೆ ಮತ್ತು ಇತರೆ ಆರೋಪದಲ್ಲಿ ನ್ಯಾಯಾಲಯ ಜಾಮೀನು ನೀಡಿದ ಬಳಿಕ 2017ರಲ್ಲಿ ಜಾರಿ ನಿರ್ದೇಶನಾಲಯವು ಪ್ರಕರಣ ದಾಖಲಿಸಿತ್ತು. ಅಕ್ರಮ ಹಣ ವರ್ಗಾವಣೆ ಪ್ರಕರಣದ ಅಡಿ 2020ರ ಡಿಸೆಂಬರ್‌ನಲ್ಲಿ ಕಮಲ್‌ ಅವರನ್ನು ಬಂಧಿಸಲಾಗಿತ್ತು.

ರಾಜ್ಯದ ಧನಸಹಾಯ ಪಡೆದಿರುವ ಸ್ಯಾಮ್‌ ಹಿಗ್ಗಿನ್‌ಬಾಟಂ ಕೃಷಿ, ತಂತ್ರಜ್ಞಾನ ಮತ್ತು ವಿಜ್ಞಾನಗಳ ವಿಶ್ವವಿದ್ಯಾಲಯದ ₹22 ಕೋಟಿ ಹಣವನ್ನು ದುರ್ಬಳಕೆ ಮಾಡಿಕೊಂಡ ಆರೋಪ ಕಮಲ್‌ ಅವರ ಮೇಲಿದೆ. ಬಾಯಿ ಕ್ಯಾನ್ಸರ್‌ಗೆ ತುತ್ತಾಗಿದ್ದರಿಂದ ಅವರು 2019ರಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಸಕ್ಕರೆ ಕಾಯಿಲೆ ಮತ್ತು ಫಿಸ್ತುಲಾದಿಂದ ಬಳಲುತ್ತಿದ್ದಾರೆ ಎಂದು ಕಮಲ್‌ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದರು.

ಅರ್ಜಿದಾರ ಕಮಲ್‌ ಅವರನ್ನು ಅನಿರ್ದಿಷ್ಟಾವಧಿಗೆ ಜೈಲಿನಲ್ಲಿ ಇಡಲಾಗದು ಎಂದಿದ್ದ ನ್ಯಾಯಮೂರ್ತಿ ರಾಹುಲ್‌ ಚತುರ್ವೇದಿ ಅವರು ಜಾಮೀನು ಮಂಜೂರು ಮಾಡಿದ್ದರು.