ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲ್ಲೂಕಿನ ಹುಳ್ಳಟ್ಟಿ ಗ್ರಾಮದಲ್ಲಿರುವ ಭಾರತ್ ಶುಗರ್ ಮಿಲ್ ಕಂಪೆನಿಗೆ ಸೇರಿದ ಸಕ್ಕರೆ ಕಾರ್ಖಾನೆಗೆ ಕಾಳಿ ನದಿಯಿಂದ ಪೈಪ್‌ಲೈನ್ ಮೂಲಕ ನೀರು ಪೂರೈಸಲು ರಾಜ್ಯ ಸರ್ಕಾರ ಮತ್ತು ಕಂಪೆನಿ ಮಾಡಿಕೊಂಡಿದ್ದ ಒಪ್ಪಂದ ಪ್ರಶ್ನಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ವಜಾಗೊಳಿಸಿದೆ.
ದಾಂಡೇಲಿ ಬಚಾವೋ ಆಂದೋಲನಾ ಸಮಿತಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ಮತ್ತು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ಪೀಠವು ಪ್ರಕಟಿಸಿತು.
“ಹಳಿಯಾಳ ತಾಲ್ಲೂಕಿನ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಬೆಳೆಯಲಾಗುತ್ತದೆ. ಅದನ್ನು ದೂರದ ಪ್ರದೇಶಗಳಿಗೆ ರವಾನಿಸಲು ಹೆಚ್ಚು ಖರ್ಚು ಆಗುವುದರಿಂದ ರೈತರಿಗೆ ಅನನುಕೂಲವಾಗುತ್ತಿತ್ತು. ಇದರಿಂದ ಹಳಿಯಾಲ ತಾಲ್ಲೂಕಿನ ಹುಳ್ಳಟ್ಟಿ ಗ್ರಾಮದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಹೀಗಾಗಿ, ಕಾರ್ಖಾನೆಯಲ್ಲಿ 28 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನಾ ಘಟಕ ಮತ್ತು 45 ಕೆಎಲ್‌ಪಿಡಿ ಡಿಸ್ಟಿಲರಿ ಘಟಕ ಆರಂಭಿಸಲು ಅನುಕೂಲವಾಗುವಂತೆ ಕಾಳಿ ನದಿಯಿಂದ ನೀರು ಪೂರೈಸಲು ಒಪ್ಪಂದ ಮಾಡಿಕೊಳ್ಳಲಾಗಿದೆ” ಎಂದು ಆದೇಶದಲ್ಲಿ ವಿವರಿಸಲಾಗಿದೆ.
“ಸಕ್ಕರೆ ಕಾರ್ಖಾನೆ ಸ್ಥಾಪನೆಗೊಂಡು ಕಾರ್ಯಾರಂಭಿಸಿದೆ. ಸುಮಾರು 50 ಸಾವಿರ ರೈತರು ಸಕ್ಕರೆ ಕಾರ್ಖಾನೆಗೆ ಕಬ್ಬು ಬೆಳೆದು ಪೂರೈಸುತ್ತಿದ್ದಾರೆ. ದಾಂಡೇಲಿ ಮತ್ತು ಹಳಿಯಾಳ ಪ್ರದೇಶಕ್ಕೆ ನೀರು ಪೂರಕೆಯಲ್ಲಿ ಯಾವುದೇ ವ್ಯತ್ಯಯವಾಗಬಾರದು ಎಂಬ ಷರತ್ತು ವಿಧಿಸಿ, ಕಾಳಿ ನದಿಯಿಂದ ಕಾರ್ಖಾನೆಗೆ ನೀರು ಪೂರೈಸಲು ಅನುಮತಿ ನೀಡಲಾಗಿದೆ. ಸ್ಥಳೀಯ ನಿವಾಸಿಗಳ ಕಲ್ಯಾಣ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಸರ್ಕಾರ ಕೈಗೊಂಡಿರುವ ಈ ನಿರ್ಣಯದಲ್ಲಿ ದುರುದ್ದೇಶವಿಲ್ಲ. ಅಭಿವೃದ್ಧಿ ಮತ್ತು ಪರಿಸರದ ನಡುವೆ ಸಮತೋಲನ ಕಾಯ್ದುಕೊಂಡು ನೈಸರ್ಗಿಕ ಸಂಪನ್ಮೂಲವನ್ನು ಬಳಕೆ ಮಾಡಬೇಕು. ಆದ್ದರಿಂದ, ರಾಜ್ಯ ಸರ್ಕಾರ ನಿರ್ಧಾರದಲ್ಲಿ ಮಧ್ಯಪ್ರವೇಶಿಸುವ ಅಗತ್ಯ ಕಂಡು ಬರುತ್ತಿಲ್ಲ” ಎಂದು ಅಭಿಪ್ರಾಯಪಟ್ಟ ಹೈಕೋರ್ಟ್ ಅರ್ಜಿ ವಜಾಗೊಳಿಸಿದೆ.
ಪ್ರಕರಣದ ಹಿನ್ನೆಲೆ: ಉನ್ನತ ಕನ್ನಡ ಜಿಲ್ಲೆಯ ಹಳಿಯಾಳ ತಾಲ್ಲೂಕಿನಲ್ಲಿ ಹುಳ್ಳಟ್ಟಿ ಗ್ರಾಮದಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸಲು ಭಾರತ್ ಶುಗರ್ ಮಿಲ್ಸ್ ಸ್ಥಾಪನೆಗೆ 2005ರಲ್ಲಿ ಸರ್ಕಾರ ಅನುಮತಿ ನೀಡಿತ್ತು. ಕಾಳಿ ನದಿಯಿಂದ ನೀರು ಪೂರೈಸುವುದಕ್ಕೆ ಪೈಪ್ ಅಳಡಿಸಲು ಲೋಕೋಪಯೋಗಿ ಇಲಾಖೆ ಮತ್ತು ಕಂಪೆನಿ ನಡುವೆ 2006ರಲ್ಲಿ ಒಪ್ಪಂದ ಏರ್ಪಟ್ಟಿತ್ತು. ಅದನ್ನು ಪ್ರಶ್ನಿಸಿ 2007ರಲ್ಲಿ ಹೈಕೊರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಮನವಿ ಸಲ್ಲಿಸಲಾಗಿತ್ತು. ಕಾಳಿ ನದಿಯಿಂದ ಸಕ್ಕರೆ ಕಾರ್ಖಾನೆಗೆ ನೀರು ಪೂರೈಸುವುದರಿಂದ ಸ್ಥಳೀಯ ಗ್ರಾಮ ಹಾಗೂ ಪಟ್ಟಣಗಳಿಗೆ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು.