ramesh sogemane
ಸುದ್ದಿಗಳು

ಬಳಕೆದಾರರ ಮಾಹಿತಿಯನ್ನು ಫೇಸ್‌ಬುಕ್‌ ಹಂಚಿಕೊಳ್ಳುವುದು ಕಳವಳಕಾರಿ: ದೆಹಲಿ ಹೈಕೋರ್ಟ್

ಫೇಸ್ಬುಕ್-ಕೇಂಬ್ರಿಜ್‌ ಅನಾಲಿಟಿಕಾ ದತ್ತಾಂಶ ಹಗರಣವನ್ನು ಉಲ್ಲೇಖಿಸಿದ ಹೈಕೋರ್ಟ್, ದತ್ತಾಂಶ ರಕ್ಷಣೆ ಬಗ್ಗೆ ಕಳವಳವಿದ್ದು ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದಿತು.

Bar & Bench

ಫೇಸ್‌ಬುಕ್ (ಈಗ ಮೆಟಾ) ರೀತಿಯ ಸಾಮಾಜಿಕ ಮಾಧ್ಯಮ ಕಂಪನಿಗಳ ಗೌಪ್ಯತಾ ನೀತಿ ಬಗ್ಗೆ ದೆಹಲಿ ಹೈಕೋರ್ಟ್ ಬುಧವಾರ ಕಳವಳ ವ್ಯಕ್ತಪಡಿಸಿದ್ದು ಇಂತಹ ಕಂಪನಿಗಳು ಜನರ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುವುದನ್ನು ಮತ್ತು ಕೆದಕುವುದನ್ನು ಪರಿಶೀಲಿಸುವ ಅಗತ್ಯವಿದೆ ಎಂದಿತು [ವಾಟ್ಸಾಪ್‌ ಎಲ್‌ಎಲ್‌ಸಿ ಮತ್ತು ಭಾರತೀಯ ಸ್ಪರ್ಧಾ ಆಯೋಗ ಇನ್ನಿತರರ ನಡುವಣ ಪ್ರಕರಣ] .

ಜನರು ತಮ್ಮ ಗೌಪ್ಯತೆಯ ಬಗ್ಗೆ ಕಾಳಜಿ ವಹಿಸುತ್ತಾರೆ ಮತ್ತು ಕೇಂಬ್ರಿಜ್‌ ಅನಾಲಿಟಿಕಾದಂತಹ ಖಾಸಗಿ ಸಂಸ್ಥೆಗಳೊಂದಿಗೆ ಸಾಮಾಜಿಕ ಮಾಧ್ಯಮ ದೈತ್ಯ ಕಂಪೆನಿಗಳು ತಮ್ಮ ಮಾಹಿತಿ ಹಂಚಿಕೊಳ್ಳುತ್ತಿವೆಯೇ ಎನ್ನುವ ಬಗ್ಗೆ ಜನರಿಗೆ ತಿಳಿದಿಲ್ಲ ಎಂದು ನ್ಯಾಯಮೂರ್ತಿಗಳಾದ ರಾಜೀವ್ ಶಕ್ಧೆರ್ ಮತ್ತು ಪೂನಂ ಎ ಬಾಂಬಾ ಅವರ ವಿಭಾಗೀಯ ಪೀಠ ವಿವರಿಸಿತು.

ಕೇಂಬ್ರಿಜ್‌ ಅನಾಲಿಟಿಕಾ ಎಂಬುದು ಬ್ರಿಟಿಷ್ ರಾಜಕೀಯ ಸಲಹಾ ಸಂಸ್ಥೆಯಾಗಿದ್ದು, ಫೇಸ್‌ಬುಕ್-ಕೇಂಬ್ರಿಜ್‌ ಅನಾಲಿಟಿಕಾ ಹಗರಣ ಬೆಳಕಿಗೆ ಬಂದ ನಂತರ ವಿವಾದಕ್ಕೆ ಸಿಲುಕಿದೆ. ಇಂಗ್ಲೆಂಡ್‌ನಲ್ಲಿ 2016ರ ಬ್ರೆಕ್ಸಿಟ್ ಜನಾಭಿಪ್ರಾಯ ಸಂಗ್ರಹಣೆ ಮತ್ತು ಅಮೆರಿಕದಲ್ಲಿ 2016 ರ ಅಧ್ಯಕ್ಷೀಯ ಪ್ರಚಾರದಲ್ಲಿ ಮತದಾನದ ಮೇಲೆ ಪ್ರಭಾವ ಬೀರಲು ಲಕ್ಷಾಂತರ ಜನರ ಫೇಸ್‌ಬುಕ್‌ ಮಾಹಿತಿಯನ್ನು ಸಂಗ್ರಹಿಸಿದ ಆರೋಪ ಸಂಸ್ಥೆಯ ಮೇಲಿದೆ.

ವಾಟ್ಸಾಪ್‌ನ ನೂತನ ಗೌಪ್ಯತಾ ನೀತಿಯ ಬಗ್ಗೆ ಭಾರತೀಯ ಸ್ಪರ್ಧಾತ್ಮಕ ಆಯೋಗ (ಸಿಸಿಐ) ಮಾಡುತ್ತಿರುವ ತನಿಖೆಯಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ ಏಕ ಸದಸ್ಯ ಪೀಠದ ಆದೇಶದ ವಿರುದ್ಧ ಫೇಸ್‌ಬುಕ್ ಮತ್ತು ವಾಟ್ಸಾಪ್ ಸಲ್ಲಿಸಿದ ಮೇಲ್ಮನವಿಗಳ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು. ಮುಂದಿನ ವಿಚಾರಣೆ ಜು. 21ಕ್ಕೆ ನಿಗದಿಯಾಗಿದೆ.