High Court of Karnataka
High Court of Karnataka 
ಸುದ್ದಿಗಳು

ಕೋರ್ಟಿನ ಆದೇಶ ಉಲ್ಲಂಘಿಸಿದ ನಿಮ್ಮನ್ನು ಅಮಾನತು ಮಾಡಬಹುದು ತಿಳಿದಿದೆಯೇ? ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದ ಹೈಕೋರ್ಟ್

Bar & Bench

ಮೈಸೂರಿನಲ್ಲಿ ಸಾರ್ವಜನಿಕ ರಸ್ತೆಯ ಒತ್ತುವರಿ ಪ್ರಕರಣದಲ್ಲಿ ಜಾಮೀನುಸಹಿತ ವಾರಂಟ್ ಜಾರಿಗೊಳಿಸಿದ್ದರೂ ವಿಚಾರಣೆಗೆ ಹಾಜರಾಗದೆ ನ್ಯಾಯಾಲಯದ ಕೆಂಗಣ್ಣಿಗೆ ಗುರಿಯಾಗಿದ್ದ ಪಾಲಿಕೆ ಆಯುಕ್ತ ಲಕ್ಷ್ಮಿಕಾಂತ್‌ ರೆಡ್ಡಿ ಹಾಗೂ ಮೈಸೂರು ವಲಯ ಆಯುಕ್ತರು ಶುಕ್ರವಾರ ಖುದ್ದು ಹಾಜರಾಗಿ ನ್ಯಾಯಾಲಯದ ಕ್ಷಮೆ ಕೋರಿದರು.

ಮೈಸೂರಿನ ರಸ್ತೆಯೊಂದರ ಒತ್ತುವರಿಗೆ ಸಂಬಂಧಿಸಿದಂತೆ ಮಾಜಿ ಪಾಲಿಕೆ ಸದಸ್ಯ ಪಿ. ಶ್ರೀಕಂಠಮೂರ್ತಿ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ಪೀಠ ಶುಕ್ರವಾರ ವಿಚಾರಣೆ ನಡೆಸಿತು.

ಅಕ್ಟೋಬರ್ 27ರಂದು ನಡೆದ ವಿಚಾರಣೆಗೆ ಗೈರಾಗಿದ್ದ ಮೈಸೂರು ಪಾಲಿಕೆ ಆಯುಕ್ತರು ಹಾಗೂ 8ನೇ ವಲಯ ಆಯುಕ್ತರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಪೀಠವು ಇಬ್ಬರೂ ಅಧಿಕಾರಿಗಳು ಅಕ್ಟೋಬರ್‌ 29ರಂದು ಖುದ್ದು ಹಾಜರಿರಬೇಕು ಎಂದು ತಾಕೀತು ಮಾಡಿತ್ತು.

ಜಾಮೀನು ಸಹಿತ ವಾರಂಟ್ ಜಾರಿಗೊಳಿಸಿದ್ದರೂ ನ್ಯಾಯಾಲಯಕ್ಕೆ ಏಕೆ ಹಾಜರಾಗಲಿಲ್ಲ, ಸರ್ಕಾರಿ ಸೇವೆಯಲ್ಲಿರಲು ನಿಮಗೆ ಇಷ್ಟವಿಲ್ಲವೇ? ನ್ಯಾಯಾಲಯದ ಆದೇಶ ಉಲ್ಲಂಸಿರುವ ನಿಮ್ಮನ್ನು ಬಂಧಿಸಿ ಜೈಲಿಗೆ ಕಳಿಸಬಹುದು. ಈ ಕ್ಷಣದಿಂದಲೇ ಸೇವೆಯಿಂದ ಅಮಾನತುಗೊಳಿಸಬಹುದು ಎನ್ನುವುದು ನಿಮಗೆ ತಿಳಿದಿದೆಯಲ್ಲವೇ? ಐಎಎಸ್ ಅಧಿಕಾರಿಯೊಬ್ಬರಿಗೆ ಜಾಮೀನು ಸಹಿತ ವಾರಂಟ್ ಜಾರಿಗೊಳಿಸಿರುವುದು ಒಳ್ಳೆಯ ವಿಚಾರ ಎಂದೆನಿಸುತ್ತದೆಯೇ? ಎಂದು ನ್ಯಾಯಪೀಠ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು.

ನ್ಯಾಯಾಲಯದ ಸೂಚನೆಯಿದ್ದರೂ ಏಕೆ ಸ್ಥಳ ಪರಿಶೀಲನೆ ವರದಿ ಸಲ್ಲಿಸಿಲ್ಲ ಮತ್ತು ಒತ್ತುವರಿ ತೆರವುಗೊಳಿಸುತ್ತಿಲ್ಲ ಎಂದು ಪೀಠ ಅಧಿಕಾರಿಗಳನ್ನು ಪ್ರಶ್ನಿಸಿತು. ವಿಚಾರಣೆಗೆ ಗೈರಾಗಿದ್ದಕ್ಕೆ ಕ್ಷಮೆ ಕೋರಿದ ಆಯುಕ್ತರು ಮತ್ತು ವಲಯ ಆಯುಕ್ತರು, ರಸ್ತೆ ಒತ್ತುವರಿ ಕುರಿತು ಸರ್ವೇ ನಡೆಸಿ ಸಿದ್ಧಪಡಿಸಿದ ವರದಿಯನ್ನು ಪೀಠಕ್ಕೆ ಸಲ್ಲಿಸಿದರು. ವರದಿಯಲ್ಲಿ ಹೇಳಿರುವ ಒತ್ತುವರಿಯನ್ನು ಕೂಡಲೇ ತೆರವುಗೊಳಿಸಿ, ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ಅದನ್ನು ಪರಿಗಣಿಸಿದ ಪೀಠವು ಒತ್ತುವರಿಯಾಗಿರುವ ಜಾಗವನ್ನು ಶೀಘ್ರ ತೆರವುಗೊಳಿಸಿ, ನ್ಯಾಯಾಲಯಕ್ಕೆ ಅನುಪಾಲನಾ ವರದಿ ಸಲ್ಲಿಸಬೇಕು ಎಂದು ಆಯುಕ್ತರಿಗೆ ಸೂಚಿಸಿ, ವಿಚಾರಣೆಯನ್ನು ಜನವರಿ 5ಕ್ಕೆ ಮುಂದೂಡಿತು. ಅಲ್ಲದೆ ಮುಂದಿನ ವಿಚಾರಣೆಗೆ ಆಯುಕ್ತರು ಮತ್ತು ವಲಯ ಆಯುಕ್ತರ ಖುದ್ದು ಹಾಜರಿಗೆ ನ್ಯಾಯಪೀಠ ವಿನಾಯಿತಿ ನೀಡಿತು.