Justice Siddharth Mridul and Justice Rajnish Bhatnagar 
ಸುದ್ದಿಗಳು

ಮಹಿಳೆಯರು ಮನೆಯಿಂದ ಹೊರಬರಲು ಹೆದರುವ ಸಮಾಜದಲ್ಲಿ ನಾವು ಬದುಕಲು ಸಾಧ್ಯವಿಲ್ಲ: ದೆಹಲಿ ಹೈಕೋರ್ಟ್

21 ವರ್ಷದ ಯುವತಿಯನ್ನು ಕೊಲೆ ಮಾಡಿದ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆಗೆ ಗುರಿಯಾದ ವ್ಯಕ್ತಿಗೆ ಜಾಮೀನು ನೀಡುವುದಿಲ್ಲ ಎಂದು ಉಚ್ಚ ನ್ಯಾಯಾಲಯ ಹೇಳಿತು.

Bar & Bench

ಹೆಣ್ಣುಮಕ್ಕಳು, ಮಹಿಳೆ ಅಥವಾ ಮಗುವನ್ನು ಬೆದರಿಸುವ ಯಾರ ಬಗ್ಗೆಯಾದರೂ ಶೂನ್ಯ ಸಹಿಷ್ಣುತೆ ತಾಳಬೇಕು ಮತ್ತು ಮಹಿಳೆಯರು ತಮ್ಮ ಮನೆಯಿಂದ ಹೊರಬರುವಾಗ ಭಯಪಡುವ ಅಗತ್ಯವಿಲ್ಲ ಎಂದು ಸಮಾಜ ಖಾತ್ರಿಪಡಿಸಬೇಕು ಎಂಬುದಾಗಿ ದೆಹಲಿ ಹೈಕೋರ್ಟ್ ಸೋಮವಾರ ಹೇಳಿದೆ.

ಹಾಗಾಗಿ 21 ವರ್ಷದ ಯುವತಿಯನ್ನು ಕೊಲೆ ಮಾಡಿದ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ವಿಜಯ್ ಸೈನಿ ಎಂಬಾತನಿಗೆ ಜಾಮೀನು ನೀಡುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಸಿದ್ಧಾರ್ಥ್ ಮೃದುಲ್ ಮತ್ತು ರಜನೀಶ್ ಭಟ್ನಾಗರ್ ಅವರಿದ್ದ ವಿಭಾಗೀಯ ಪೀಠ ಹೇಳಿತು.

2011ರಲ್ಲಿ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ರಾಧಿಕಾ ತನ್ವಾರ್ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಿದ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಸೈನಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ. ರಾಮ್ ಲಾಲ್ ಆನಂದ್ ಕಾಲೇಜಿನ ಹೊರಗಿರುವ ಧೌಲಾ ಕುವಾನ್ ಫುಟ್‌ಓವರ್ ಸೇತುವೆಯಲ್ಲಿ ಬಾಲಕಿಯನ್ನು ಸೈನಿ ಗುಂಡಿಕ್ಕಿ ಕೊಂದಿದ್ದ. ಮಹಿಳಾ ದಿನಾಚರಣೆಯಂದು ಈ ಘಟನೆ ನಡೆದಿತ್ತು. ಬಾಲಕಿ ಇರುವ ಪ್ರದೇಶದಲ್ಲಿಯೇ ಸೈನಿ ವಾಸವಾಗಿದ್ದು, ಆಕೆಯನ್ನು ಆತ ಹಿಂಬಾಲಿಸುತ್ತಿದ್ದ ಎಂದು ಆರೋಪಿಸಲಾಗಿದೆ. ಕೆಲ ತಿಂಗಳ ಹಿಂದೆ ರಾಧಿಕಾ ಅವರನ್ನು ಹಿಂಬಾಲಿಸಿದ್ದಕ್ಕಾಗಿ ಸ್ಥಳೀಯರು ಆತನನ್ನು ಥಳಿಸಿದ್ದರು.

ಪ್ರಕರಣದ ಸತ್ಯಾಸತ್ಯತೆಗಳನ್ನು ಅರಿತ, ನ್ಯಾಯಮೂರ್ತಿ ಮೃದುಲ್ ಅರ್ಜಿದಾರನಿಗೆ ಜಾಮೀನು ನೀಡುವುದಿಲ್ಲ ಎಂದು ತಿಳಿಸಿತು. ಆದರೆ, ವ್ಯಕ್ತಿ ಈಗಾಗಲೇ 11 ವರ್ಷಗಳಿಂದ ಜೈಲುಶಿಕ್ಷೆ ಅನುಭವಿಸಿರುವುದರಿಂದ, ಏಪ್ರಿಲ್ 26 ರಂದು ಮನವಿಯನ್ನು ಆಲಿಸಲಾಗುವುದು ಎಂದು ನ್ಯಾಯಾಲಯ ತಿಳಿಸಿತು.