Rahul Gandhi, Om Birla  
ಸುದ್ದಿಗಳು

ಗಾಂಧಿ ಆತ್ಮಕಥೆ: ಎರಡನೇ ಸಂಪುಟದ ಕುರಿತು ಬೆಳಕು ಚೆಲ್ಲಲು ರಾಹುಲ್‌, ಓಂ ಬಿರ್ಲಾಗೆ ಸೂಚಿಸಲು ಹೈಕೋರ್ಟ್‌ ನಕಾರ

“28.08.2025ರಂದು ಮಾಡಿರುವ ಆದೇಶ ಹಿಂಪಡೆಯುವಂತೆ ಕೋರಿರುವ ಅರ್ಜಿಯಲ್ಲಿ ಯಾವುದೇ ಮೆರಿಟ್‌ ಇಲ್ಲ. ಹೀಗಾಗಿ, ಅದನ್ನು ವಜಾ ಮಾಡಲಾಗಿದೆ” ಎಂದು ಆದೇಶಿಸಿದ ನ್ಯಾಯಾಲಯ.

Bar & Bench

ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಕಣ್ಮರೆಯಾಗಿರುವ ಆತ್ಮತಥೆ ʼಸತ್ಯದೊಂದಿಗೆ ನನ್ನ ಪ್ರಯೋಗಗಳು (ಮೈ ಎಕ್ಸ್‌ಪೆರಿಮೆಂಟ್ಸ್‌ ವಿತ್‌ ಟ್ರುಥ್‌)‌ ಸಂಪುಟ-2ʼರ ಬಗ್ಗೆ ಬೆಳಕು ಚೆಲ್ಲಲು ವಿಪಕ್ಷ ನಾಯಕ ರಾಹುಲ್‌ ಗಾಂಧಿ, ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ, ರಾಜ್ಯ ಶಿಕ್ಷಣ ಇಲಾಖೆ ಮತ್ತು ಸುಪ್ರೀಂ ಕೋರ್ಟ್‌ ಬಾರ್‌ ಅಸೋಸಿಯೇಶನ್ಸ್‌ಗೆ ನಿರ್ದೇಶನ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾಗೊಳಿಸಿದ್ದ ಆದೇಶವನ್ನು ಹಿಂಪಡೆಯುವಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು ಕರ್ನಾಟಕ ಹೈಕೋರ್ಟ್‌ ಈಚೆಗೆ ವಜಾಗೊಳಿಸಿದೆ.

28.08.2025ರಂದು ಜಾಗೃತ ಕರ್ನಾಟಕ, ಜಾಗೃತ ಭಾರತದ ಅಧ್ಯಕ್ಷ ಕೆ ಎನ್‌ ಮಂಜುನಾಥ್‌ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರ ವಿಭಾಗೀಯ ಪೀಠವು ವಜಾಗೊಳಿಸಿತ್ತು. ಇದನ್ನು ಹಿಂಪಡೆಯುವಂತೆ ಕೋರಿದ್ದ ಮನವಿಯನ್ನೂ ನ್ಯಾಯಾಲಯ ವಜಾಗೊಳಿಸಿದೆ.

“28.08.2025ರಂದು ಮಾಡಿರುವ ಆದೇಶ ಹಿಂಪಡೆಯುವಂತೆ ಕೋರಿರುವ ಅರ್ಜಿಯಲ್ಲಿ ಯಾವುದೇ ಮೆರಿಟ್‌ ಇಲ್ಲ. ಹೀಗಾಗಿ, ಅದನ್ನು ವಜಾ ಮಾಡಲಾಗಿದೆ” ಎಂದು ನ್ಯಾಯಾಲಯ ಆದೇಶಿಸಿದೆ.

ಅರ್ಜಿದಾರ ಕೆ ಎನ್‌ ಮಂಜುನಾಥ್‌ ಮತ್ತು ಪ್ರತಿವಾದಿ ಕೇಂದ್ರ ಸರ್ಕಾರದ ಪರ ಡೆಪ್ಯುಟಿ ಸಾಲಿಸಿಟರ್‌ ಜನರಲ್‌ ಎಚ್‌ ಶಾಂತಿಭೂಷಣ್‌ ಅವರ ವಾದ ಆಲಿಸಿದ ಪೀಠವು “ಒಂದೊಮ್ಮೆ ಅರ್ಜಿದಾರರು ಇತಿಹಾಸದಲ್ಲಿ ಸಂಶೋಧನೆ ಮಾಡುವ ಯಾವುದೇ ಪಾಂಡಿತ್ಯಪೂರ್ಣ ಕೈಂಕರ್ಯಕ್ಕೆ ಮುಂದಾದರೆ ಅದಕ್ಕೆ ಯಾವುದೇ ಅಡಚಣೆ ಇರುವುದಿಲ್ಲ. ಆದಾಗ್ಯೂ, ಅರ್ಜಿದಾರರ ಮನವಿ ಅಸ್ಪಷ್ಟವಾಗಿದ್ದು ಅದಕ್ಕೀಗ ಯಾವುದೇ ಪರಿಹಾರ ನೀಡಲಾಗದು” ಎಂದು ತಿಳಿಸಿದೆ.

“ಅರ್ಜಿದಾರರು ಭಾರತದ ಇತಿಹಾಸದ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ತಮ್ಮ ಕೋರಿಕೆಯ ನಿಟ್ಟಿನಲ್ಲಿ ವಿವಿಧ ಅಧಿಕಾರಿಗಳಿಗೆ ಹಲವಾರು ಪತ್ರಗಳನ್ನೂ ಬರೆದಿದ್ದಾರೆ. ಅರ್ಜಿದಾರರ ಪ್ರಕಾರ ಇತಿಹಾಸದಲ್ಲಿನ ಅಂತರಗಳ ಬಗ್ಗೆ ಉತ್ತರಿಸಬೇಕಾಗಿದೆ ಎಂಬ ಮನವಿಯನ್ನು ಪರಿಗಣಿಸಿದಾಗ ಈ ಕುರಿತಂತೆ ಯಾವುದೇ ಸ್ಪಷ್ಟ ಆದೇಶ ಹೊರಡಿಸಲು ಆಗದು’ ಎಂಬ ಅಭಿಪ್ರಾಯ ವ್ಯಕ್ತಪಡಿಸಿ ಅರ್ಜಿ ವಜಾಗೊಳಿಸಿದೆ.

ಹಿನ್ನೆಲೆ: ಗಾಂಧೀಜಿಯವರ ಆತ್ಮಕಥೆಯ ಸಂಪುಟ - 2 ಅನ್ನು ಸಂಗ್ರಹಾಲಯದಿಂದ ಸ್ಥಳಾಂತರಿಸಲಾಗಿದೆ. 51 ಪೆಟ್ಟಿಗೆಗಳಲ್ಲಿ ಇರುವ ಇದಕ್ಕೆ ಸಂಬಂಧಿಸಿದ ದಸ್ತಾವೇಜುಗಳು ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂದಿ ಅವರ ಬಳಿ ಇವೆ. ಅವುಗಳನ್ನು ಪತ್ತೆ ಹಚ್ಚಿ ಹಿಂಪಡೆಯಲು ಸರ್ಕಾರಕ್ಕೆ ಸೂಚಿಸಬೇಕು ಎನ್ನುವುದು ಅರ್ಜಿದಾರರ ಕೋರಿಕೆಯಾಗಿತ್ತು.

ಅರ್ಜಿದಾರರು ಮನವಿಯಲ್ಲಿ ಯಾವುದೇ ಸಮರ್ಥನೀಯ ಅಂಶಗಳಿಲ್ಲದ ಕಾರಣ ವಿಚಾರಣಾರ್ಹತೆಯಿಲ್ಲವೆಂದು ಈ ಹಿಂದೆ ಹೈಕೋರ್ಟ್‌ನ ಮೂಖ್ಯ ನ್ಯಾಯಮೂರ್ತಿಯವರ ವಿಭಾಗೀಯ ಪೀಠ ವಜಾಗೊಳಿಸಿತ್ತು. ಈ ಆದೇಶದ ಪುನರ್‌ ಪರಿಶೀಲನೆ ಕೋರಿದ್ದ ಅರ್ಜಿಯನ್ನು ಇದೀಗ ಸಿಜೆ ನೇತೃತ್ವದ ಪೀಠ ವಜಾಗೊಳಿಸಿದೆ.