Karnataka HC and BDA Commissioner Rajesh Gowda M B 
ಸುದ್ದಿಗಳು

ಬಿಡಿಎ ಅಧ್ಯಕ್ಷ ವಿಶ್ವನಾಥ್‌, ಆಯುಕ್ತ ರಾಜೇಶ್‌ ಗೌಡ ಇಬ್ಬರೂ ಹುದ್ದೆ ಕಳೆದುಕೊಳ್ಳಲಿದ್ದಾರೆ ಎಂದ ಹೈಕೋರ್ಟ್‌

ಪ್ರಾದೇಶಿಕ ಆಯುಕ್ತರ ಹುದ್ದೆ ಈಗ ಅಸ್ತಿತ್ವದಲ್ಲಿ ಇಲ್ಲ. ಹೀಗಾಗಿ, ರಾಜೇಶ್‌ ಗೌಡ ನೇಮಕಾತಿಗೆ ಸಂಬಂಧಿಸಿದಂತೆ ಅರ್ಜಿದಾರರು ಉಲ್ಲೇಖಿಸುತ್ತಿರುವ ಬಿಡಿಎ ಕಾಯಿದೆ ಸೆಕ್ಷನ್‌ 12 ಇಲ್ಲಿ ಅನ್ವಯಿಸುವ ಸಾಧ್ಯತೆ ಇಲ್ಲ ಎಂದ ಹಿರಿಯ ವಕೀಲ ನಾಗಾನಂದ್‌.

Bar & Bench

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧ್ಯಕ್ಷರಾಗಿರುವ ಶಾಸಕ ಎಸ್‌ ಆರ್‌ ವಿಶ್ವನಾಥ್‌ ಮತ್ತು ಆಯುಕ್ತರಾಗಿರುವ ಕೆಎಎಸ್‌ನಿಂದ ಐಎಎಸ್‌ ಅಧಿಕಾರಿಯಾಗಿ ಪದೋನ್ನತಿ ಪಡೆದಿರುವ ಎಂ ಬಿ ರಾಜೇಶ್‌ ಗೌಡ ಅವರು ಹುದ್ದೆ ಕಳೆದುಕೊಳ್ಳಲಿದ್ದಾರೆ. ಅರ್ಹತೆ ಇಲ್ಲದವರಿಗೆ ನಾವೇಕೆ ಅನುಮತಿಸಬೇಕು ಎಂದು ಬುಧವಾರ ಕರ್ನಾಟಕ ಹೈಕೋರ್ಟ್‌ ಮೌಖಿಕವಾಗಿ ಹೇಳಿತು.

ಬಿಡಿಎ ಆಯುಕ್ತರನ್ನಾಗಿ ರಾಜೇಶ್ ಗೌಡ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ರದ್ದುಪಡಿಸುವಂತೆ ಕೋರಿ ವಕೀಲ ಜಿ ಮೋಹನ್ ಕುಮಾರ್‌ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

“ಬಿಡಿಎ ಅಧ್ಯಕ್ಷ ಎಸ್‌ ಆರ್‌ ವಿಶ್ವನಾಥ್‌ ನೇಮಕಾತಿ ಪ್ರಶ್ನಿಸಿರುವ ಮನವಿ ನಮ್ಮ ಮುಂದಿದೆ. ಆ ಸಂಬಂಧದ ಮನವಿಯನ್ನು ನೀವೆ ಸಲ್ಲಿಸಿದ್ದೀರಾ” ಎಂದು ಪೀಠವು ಅರ್ಜಿದಾರರ ಪರ ವಕೀಲ ಎಕ್ಸ್‌ ಎಂ ಜೋಸೆಫ್‌ ಅವರನ್ನು ಪ್ರಶ್ನಿಸಿತು. ಇದಕ್ಕೆ ಇಲ್ಲ ಎಂದು ಜೋಸೆಫ್‌ ಉತ್ತರಿಸಿದರು. ಆಗ ಪೀಠವು ಮೇಲಿನಂತೆ ಹೇಳಿತು.

ರಾಜೇಶ್‌ ಗೌಡರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಎಸ್‌ ಎಸ್‌ ನಾಗಾನಂದ್‌ ಅವರು “ಪ್ರಾದೇಶಿಕ ಆಯುಕ್ತರ ಹುದ್ದೆ ಈಗ ಅಸ್ತಿತ್ವದಲ್ಲಿ ಇಲ್ಲ. ಹೀಗಾಗಿ, ರಾಜೇಶ್‌ ಗೌಡ ಅವರ ನೇಮಕಾತಿಗೆ ಸಂಬಂಧಿಸಿದಂತೆ ಅರ್ಜಿದಾರರು ಉಲ್ಲೇಖಿಸುತ್ತಿರುವ ಬಿಡಿಎ ಕಾಯಿದೆ ಸೆಕ್ಷನ್‌ 12 ಇಲ್ಲಿ ಅನ್ವಯಿಸುವ ಸಾಧ್ಯತೆ ಇಲ್ಲ” ಎಂದರು.

ಆಗ ಸಿಜೆ ಅವಸ್ಥಿ ಅವರು “ನಾವು ಈಗ ಪ್ರಕರಣವನ್ನು ಆಲಿಸುತ್ತಿಲ್ಲ. ಬಿಡಿಎ ಅಧ್ಯಕ್ಷ ಎಸ್‌ ಆರ್‌ ವಿಶ್ವನಾಥ್‌ ನೇಮಕಾತಿ ಪ್ರಶ್ನಿಸಿರುವ ಮನವಿ ಮತ್ತು ಹಾಲಿ ಪ್ರಕರಣ ಎರಡನ್ನೂ ಒಟ್ಟಿಗೆ ನಿರ್ಧರಿಸುತ್ತೇವೆ” ಎಂದರು. ಪ್ರತಿವಾದಿಗಳು ಮೂರು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸಬೇಕು ಎಂದು ಅರ್ಜಿದಾರರ ಪರ ವಕೀಲರಿಗೆ ಸೂಚಿಸಿದ ಪೀಠವು ವಿಚಾರಣೆಯನ್ನು ಜುಲೈ 21ಕ್ಕೆ ಮುಂದೂಡಿತು.

ಕಳೆದ ವಿಚಾರಣೆಯಲ್ಲಿ “ಮೇಲ್ನೋಟಕ್ಕೆ ಇಲ್ಲಿ ಏನೋ ತಪ್ಪಾಗಿದೆ ಎಂದು ತೋಚುತ್ತದೆ. ಮೂರು ದಿನಗಳಲ್ಲಿ ಆಕ್ಷೇಪಣೆ ಸಲ್ಲಿಸಿ. ಮೇಲ್ನೋಟಕ್ಕೆ ತಪ್ಪು ಎಂದು ಕಂಡಾಗ ನಾವೇಕೆ ನಿಮಗೆ (ರಾಜ್ಯ ಸರ್ಕಾರಕ್ಕೆ) ಸಮಯ ನೀಡಬೇಕು? ನಾವು ಕಣ್ಮುಚ್ಚಿ ಕೂರಲಾಗದು” ಎಂದು ಪೀಠ ಹೇಳಿತ್ತು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಎಕ್ಸ್‌ ಎಂ ಜೋಸೆಫ್‌ ಅವರು “ಬಿಡಿಎ ಕಾಯಿದೆ ಸೆಕ್ಷನ್‌ 12ರ ಅಡಿ ಆಯುಕ್ತರನ್ನು ನೇಮಿಸುವ ಸಂಬಂಧ ಅರ್ಹತೆಗಳನ್ನು ವಿವರಿಸಲಾಗಿದೆ. ಇದರಲ್ಲಿ ಪ್ರಾದೇಶಿಕ ಆಯುಕ್ತರ ಶ್ರೇಣಿಗಿಂತ ಕೆಳಗಿರುವವರನ್ನು ಆಯುಕ್ತರನ್ನಾಗಿ ನೇಮಕ ಮಾಡುವಂತಿಲ್ಲ ಎಂದು ಹೇಳಲಾಗಿದೆ. ಹಾಲಿ ಬಿಡಿಎ ಆಯುಕ್ತ ರಾಜೇಶ್‌ ಗೌಡ ಅವರು ಕೆಎಎಸ್‌ ಅಧಿಕಾರಿಯಾಗಿದ್ದು, 2018ರಲ್ಲಿ ಐಎಎಸ್‌ ಶ್ರೇಣಿಗೆ ಪದೋನ್ನತಿ ಪಡೆದಿದ್ದಾರೆ. ಪ್ರಾದೇಶಿಕ ಆಯುಕ್ತರಾಗಲು 15-16 ವರ್ಷ ಸೇವೆ ಸಲ್ಲಿಸಿರಬೇಕು” ಎಂದು ಹೇಳಿದ್ದರು.

ಬೆಂಗಳೂರು ಅಭಿವೃದ್ಧಿ ಕಾಯಿದೆ-1976ರ ಸೆಕ್ಷನ್ 12ರ ಪ್ರಕಾರ ವಿಭಾಗೀಯ ಆಯುಕ್ತರಿಗಿಂತ ಕಡಿಮೆ ಇರದ ಶ್ರೇಣಿಯ ಅಧಿಕಾರಿಯನ್ನು ಬಿಡಿಎ ಆಯುಕ್ತರ ಹುದ್ದೆಗೆ ನೇಮಕ ಮಾಡಬೇಕಿದೆ. ಆದರೆ, ವಿಭಾಗೀಯ ಆಯುಕ್ತರಿಗಿಂತ ಕಡಿಮೆ ಶ್ರೇಣಿಯ ಅಧಿಕಾರಿಯಾಗಿರುವ ಎಂ ಬಿ ರಾಜೇಶ್ ಗೌಡ ಅವರನ್ನು ಬಿಡಿಎ ಆಯುಕ್ತ ಹುದ್ದೆಗೆ ನೇಮಿಸಿ ಸರ್ಕಾರ 2021ರ ಏಪ್ರಿಲ್‌ 30ರಂದು ಆದೇಶಿಸಿದೆ. ಹಾಗಾಗಿ, ಬಿಡಿಎ ಆಯುಕ್ತರ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಲು ರಾಜೇಶ್ ಗೌಡ ಅವರಿಗೆ ಅಗತ್ಯ ಅರ್ಹತೆ ಇಲ್ಲವಾಗಿದೆ. ಅರ್ಹತೆ ಇಲ್ಲದವರನ್ನು ನೇಮಿಸುವುದರಿಂದ ಆಯುಕ್ತರ ಹುದ್ದೆಯ ಕರ್ತವ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಗುವುದಿಲ್ಲ ಎಂದು ಅರ್ಜಿಯಲ್ಲಿ ದೂರಲಾಗಿದೆ.