Arjun Ram Meghwa 
ಸುದ್ದಿಗಳು

ಸರಿ ಇರುವ ತೀರ್ಪುಗಳನ್ನೂ ಪ್ರಶ್ನಿಸುವ ಸರ್ಕಾರಿ ಇಲಾಖೆಗಳ ರೂಢಿ ತಪ್ಪಬೇಕು: ಕಾನೂನು ಸಚಿವ ಮೇಘವಾಲ್

ಅಧಿಕಾರಿಗಳು ಪ್ರತಿಯೊಂದು ಆದೇಶವನ್ನೂ ಪ್ರಶ್ನಿಸುವ ನಿಯಮಿತ ವಿಧಾನ ಅನುಸರಿಸುತ್ತಾರೆ. ನಂತರ ಅದರ ಅಗತ್ಯವಿರಲಿಲ್ಲ ಎಂಬುದು ತಿಳಿಯುತ್ತದೆ ಎಂದು ಮೇಘವಾಲ್ ಬೇಸರ ವ್ಯಕ್ತಪಡಿಸಿದರು.

Bar & Bench

ನ್ಯಾಯಾಲಯ ಮತ್ತು ನ್ಯಾಯಮಂಡಳಿಗಳು ನೀಡಿದ್ದ ಆದೇಶ ಕಾನೂನುಬದ್ಧವಾಗಿ ಸರಿಯಾಗಿದ್ದರೂ, ಸರ್ಕಾರಿ ಇಲಾಖೆಗಳು ವಾಡಿಕೆಯಂತೆ ಪೂರ್ವನಿಯೋಜಿತವಾಗಿ ಮೇಲ್ಮನವಿ ಸಲ್ಲಿಸುತ್ತಿವೆ ಎಂದು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಶನಿವಾರ ಟೀಕಿಸಿದರು.

2025ರ ಕೇಂದ್ರ ಆಡಳಿತ ನ್ಯಾಯಮಂಡಳಿಯ 10ನೇ ಅಖಿಲ ಭಾರತ ಸಮ್ಮೇಳನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಇಲಾಖೆಗಳು ಮತ್ತು ಸೇವೆಯಲ್ಲಿರುವ ಅಧಿಕಾರಿಗಳು ಪ್ರತಿಯೊಂದು ಆದೇಶವನ್ನು ನಿಯಮಿತ ವಿಷಯವಾಗಿ ಪ್ರಶ್ನಿಸುತ್ತಾರೆ. ಸಂಬಂಧಪಟ್ಟ ಅಧಿಕಾರಿ ನಿವೃತ್ತರಾದ ಬಳಿಕ ಆ ಸ್ಥಾನಕ್ಕೆ ಬರುವ ಮತ್ತೊಬ್ಬ ಅಧಿಕಾರಿ, ಮೇಲ್ಮನವಿ ಸಲ್ಲಿಸುವ ಅಗತ್ಯವಿಲ್ಲ ಎಂದು ಸರ್ಕಾರಕ್ಕೆ ತಿಳಿಸುತ್ತಾರೆ ಎಂದು ಮೇಘವಾಲ್ ಹೇಳಿದರು.

ಈ ರೂಢಿಯನ್ನು ಸರಿಪಡಿಸಿಕೊಳ್ಳಬೇಕಿದೆ. ಯಾಂತ್ರಿಕವಾಗಿ ಮನವಿ ಸಲ್ಲಿಸುವ ಪ್ರವೃತ್ತಿಯನ್ನು ಮರುಪರಿಶೀಲಿಸಬೇಕಿದೆ ಎಂದು ಅವರು ಒತ್ತಿ ಹೇಳಿದರು.

ಆದೇಶ ಸರಿ ಇದ್ದರೂ, ಅಧಿಕಾರಿಗಳು ‘ಮೇಲ್ಮನವಿ ಸಲ್ಲಿಸಲೇಬೇಕು ಎಂದು ಒತ್ತಾಯಿಸುತ್ತಾರೆ. 
ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್

ಕೇಂದ್ರ ಆಡಳಿತ ನ್ಯಾಯಮಂಡಳಿ (ಸಿಎಟಿ) ಅಧಿಕಾರಿಗಳಿಗೆ ನ್ಯಾಯ ಒದಗಿಸಲು ಸ್ಥಾಪನೆಯಾದರೂ, ಇಲಾಖೆಗಳು ತಪ್ಪಾದ ಅಭ್ಯಾಸ ಮುಂದುವರೆಸುತ್ತಿವೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು. ಆದೇಶ ಸರಿ ಇದ್ದರೂ, ಅಧಿಕಾರಿಗಳು ‘ಮೇಲ್ಮನವಿ ಸಲ್ಲಿಸಲೇಬೇಕು ಎಂದು ಒತ್ತಾಯಿಸುತ್ತಾರೆ.  ಒತ್ತಡ ಹಾಕಿದ್ದ ಅಧಿಕಾರಿಗಳು ನಿವೃತ್ತರಾದ ಬಳಿಕ ಮೇಲ್ಮನವಿ ಬೇಕೆ ಬೇಡವೇ ಎಂಬುದು ಸ್ಪಷ್ಟವಾಗುತ್ತದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್. ಗವಾಯಿ, ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಕೂಡ ಸಭೆಯಲ್ಲಿ ಮಾತನಾಡಿದರು.