CJI BR Gavai 
ಸುದ್ದಿಗಳು

ಸಮಾಜದ ಅಂಚಿನಲ್ಲಿರುವವರ ಹಕ್ಕುಗಳ ರಕ್ಷಿಸಿ, ಸ್ವಾತಂತ್ರ್ಯವನ್ನು ವಿಸ್ತರಿಸಿ: ಕಾನೂನು ಸಮುದಾಯಕ್ಕೆ ಸಿಜೆಐ ಗವಾಯಿ ಕರೆ

ವಕೀಲರು ಮತ್ತು ನ್ಯಾಯಾಧೀಶರು ಭಾರತದ ಸಂವಿಧಾನವನ್ನು ಎತ್ತಿಹಿಡಿಯುವ ಕರ್ತವ್ಯವನ್ನು ಹೊಂದಿದ್ದಾರೆ. ಈ ದಿಸೆಯಲ್ಲಿ ತಮ್ಮ ಗಮನಕ್ಕೆ ತೆಗೆದುಕೊಳ್ಳಲು ಯಾವುದೇ ಕೆಲಸವೂ ಚಿಕ್ಕದಲ್ಲ ಎನ್ನುವುದ ಅರಿತಿದಿದ್ದಾರೆ ಎಂದು ಅಭಿಪ್ರಾಯಪಟ್ಟ ಸಿಜೆಐ.

Bar & Bench

ಸಮಾಜದ ಅಂಚಿನಲ್ಲಿರುವವರ ಹಕ್ಕುಗಳನ್ನು ರಕ್ಷಿಸುವ, ಸ್ವಾತಂತ್ರ್ಯವನ್ನು ವಿಸ್ತರಿಸುವ ಹಾಗೂ ಕಾನೂನಾತ್ಮಕ ಆಡಳಿತವನ್ನು ಗಟ್ಟಿಗೊಳಿಸುವ ರೀತಿಯಲ್ಲಿ ಕಾನೂನು ವೃತ್ತಿಪರರು, ನ್ಯಾಯಾಧೀಶರು ಕಾನೂನನ್ನು ಅರ್ಥೈಸಬೇಕು ಎಂದು ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ ಆರ್‌ ಗವಾಯಿ ಅವರು ಶುಕ್ರವಾರ ಕರೆ ನೀಡಿದರು.

ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ (ಎಸ್‌ಸಿಬಿಎ) ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಸಿಜೆಐ ಬಿ ಆರ್ ಗವಾಯಿ ಅವರು ಮಾತನಾಡಿದರು.

ದೇಶದ ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆಗಳನ್ನು ಸದಾ ನೆನಪಿಸಿಕೊಳ್ಳುವಂತೆ ಅವರು ವಕೀಲ ಸಮುದಾಯಕ್ಕೆ ತಿಳಿಸಿದರು. ಮುಂದುವರಿದು, ವಕೀಲರು ಮತ್ತು ನ್ಯಾಯಾಧೀಶರು ಭಾರತದ ಸಂವಿಧಾನವನ್ನು ಎತ್ತಿಹಿಡಿಯುವ ಕರ್ತವ್ಯವನ್ನು ಹೊಂದಿದ್ದಾರೆ. ಈ ದಿಸೆಯಲ್ಲಿ ತಮ್ಮ ಗಮನಕ್ಕೆ ಅರ್ಹವಾಗಲು ಯಾವುದೇ ಕೆಲಸವೂ ಚಿಕ್ಕದಲ್ಲ ಎನ್ನುವುದನ್ನು ಅರಿತಿದಿದ್ದಾರೆ ಎಂದು ಅವರು ಹೇಳಿದರು.

“ಕಾನೂನು ವೃತ್ತಿಪರರಾಗಿ, ನಿಮ್ಮ ಗಮನವನ್ನು ಸೆಳೆಯಲು ಯಾವುದೇ ಕಾರಣವು ತುಂಬಾ ಚಿಕ್ಕದಲ್ಲ ಎಂಬುದನ್ನು ನೀವು ಗುರುತಿಸಬೇಕು. ಒಬ್ಬರಿಗೆ ಸಣ್ಣ ವಿವಾದ ಅಥವಾ ಕ್ಷುಲ್ಲಕ ದೂರು ಎನಿಸುವಂತಹ ವಿಷಯವು, ವಾಸ್ತವದಲ್ಲಿ ಮತ್ತೊಬ್ಬರಿಗೆ ಜೀವನ್ಮರಣದ, ಘನತೆಯ ವಿಷಯವಾಗಿರಬಹುದು. ನೀವು ನಿರ್ವಹಿಸುವ ಪ್ರತಿಯೊಂದು ಪ್ರಕರಣ ಮತ್ತು ನೀವು ಮಂಡಿಸುವ ಪ್ರತಿಯೊಂದು ವಾದವು ನಮ್ಮ ರಾಷ್ಟ್ರದ ನೈತಿಕ ಮತ್ತು ಸಾಮಾಜಿಕ ರಚನೆಗೆ ಕೊಡುಗೆ ನೀಡುತ್ತದೆ. ನ್ಯಾಯಾಧೀಶರಿಗೆ, ಈ ಜವಾಬ್ದಾರಿ ಇನ್ನೂ ಆಳವಾದ ಆಯಾಮವನ್ನು ಹೊಂದಿದೆ. ಕಾನೂನಿನ ಅಕ್ಷರವನ್ನು ಮೀರಿ, ಸಂವಿಧಾನದ ಮೌಲ್ಯಗಳಿಗೆ ವಿಶಾಲ ಮತ್ತು ಹೆಚ್ಚು ಉದ್ದೇಶಪೂರ್ವಕವಾದ ವ್ಯಾಖ್ಯಾನವನ್ನು ನೀಡಲು ನಾವು ಶ್ರಮಿಸಬೇಕು. ಸ್ವಾತಂತ್ರ್ಯವನ್ನು ವಿಸ್ತರಿಸುವ, ಸಮಾಜದ ಅಂಚಿನಲ್ಲಿರುವವರ ಹಕ್ಕುಗಳನ್ನು ರಕ್ಷಿಸುವ ಮತ್ತು ಕಾನೂನಾತ್ಮಕ ಆಡಳಿತವನ್ನು ಬಲಪಡಿಸುವ ರೀತಿಯಲ್ಲಿ ನಾವು ಕಾನೂನನ್ನು ಅರ್ಥೈಸಬೇಕು, ”ಎಂದು ಅವರು ಹೇಳಿದರು.

ಇದೇ ವೇಳೆ, ಸುಪ್ರೀಂ ಕೋರ್ಟ್ ಹುಲ್ಲುಹಾಸಿನ ಮೇಲೆ ಶಾಶ್ವತ ಧ್ವಜ ಸ್ತಂಭ ಸ್ಥಾಪನೆಗೆ ಸುಪ್ರೀಂ ಕೋರ್ಟ್‌ ವಕೀಲರ ಪರಿಷತ್ತಿನ ಅಧ್ಯಕ್ಷ ವಿಕಾಸ್ ಸಿಂಗ್ ಅವರ ಮನವಿಗೆ ಪ್ರತಿಕ್ರಿಯಿಸಿದ ಸಿಜೆಐ ಗವಾಯಿ, ಈ ವರ್ಷದ ನವೆಂಬರ್ ಅಂತ್ಯದ ವೇಳೆಗೆ ಶಾಶ್ವತ ಧ್ವಜ ಸ್ತಂಭ ಸಿದ್ಧವಾಗಲಿದೆ ಎಂದು ಅವರು ಭರವಸೆ ನೀಡಿದರು.

ಸುಪ್ರೀಂ ಕೋರ್ಟ್‌ ಹೈಕೋರ್ಟ್‌ಗಿಂತ ಮೇಲಲ್ಲ, ಹೈಕೋರ್ಟ್‌ ಕೊಲಿಜಿಯಂಗೆ ನಿರ್ದೇಶಿಸಲಾಗದು: ಸಿಜೆಐ

ಸುಪ್ರೀಂ ಕೋರ್ಟ್ ಹೈಕೋರ್ಟ್‌ಗಿಂತ ಮೇಲಲ್ಲ. ಹಾಗಾಗಿ, ಸುಪ್ರೀಂ ಕೋರ್ಟ್ ಕೊಲಿಜಿಯಂ ಹೈಕೋರ್ಟ್ ನ್ಯಾಯಮೂರ್ತಿಗಳ ಹುದ್ದೆಗೆ ಯಾವ ರೀತಿಯಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಶಿಫಾರಸ್ಸು ಮಾಡಬೇಕೆಂದು ನಿರ್ದೇಶಿಸಲು ಸಾಧ್ಯವಿಲ್ಲ ಎಂದು ಸಿಜೆಐ ಗವಾಯಿ ಅವರು ತಮ್ಮ ಭಾಷಣದ ವೇಳೆ ಹೇಳಿದರು.

ಹೈಕೋರ್ಟ್‌ಗಳ ನ್ಯಾಯಾಧೀಶರ ನೇಮಕಾತಿಗೆ ಬಂದಾಗ ಯಾವ ಹೆಸರುಗಳನ್ನು ಶಿಫಾರಸು ಮಾಡಲಾಗಿದೆ ಎಂಬುದರ ಕುರಿತು ಹೈಕೋರ್ಟ್‌ಗಳು ಮೊದಲ ನಿರ್ಧಾರ ತೆಗೆದುಕೊಳ್ಳುತ್ತವೆ ಎಂದು ಅವರು ತಿಳಿಸಿದರು.

"ಸುಪ್ರೀಂ ಕೋರ್ಟ್ ಹೈಕೋರ್ಟ್‌ಗಿಂತ ಮೇಲಲ್ಲ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳು ಎರಡೂ ಸಾಂವಿಧಾನಿಕ ನ್ಯಾಯಾಲಯಗಳಾಗಿವೆ. ಮತ್ತು ಸಾಂವಿಧಾನಿಕ ವ್ಯವಸ್ಥೆಯ ವಿಷಯದಲ್ಲಿ, ಅವು ಒಂದಕ್ಕೊಂದು ಮೇಲಾಗಲಿ, ಕೆಳಗಾಗಲಿ ಇರುವುದಿಲ್ಲ. ಆದ್ದರಿಂದ, ಮೊದಲು ನಿರ್ಧಾರವನ್ನು ಹೈಕೋರ್ಟ್ ಕೊಲಿಜಿಯಂ ತೆಗೆದುಕೊಳ್ಳಬೇಕು. ನಾವು ಹೆಸರುಗಳನ್ನು ಹೈಕೋರ್ಟ್ ಕೊಲಿಜಿಯಂಗೆ ಶಿಫಾರಸು ಮಾತ್ರ ಮಾಡುತ್ತೇವೆ ಹಾಗೂ ಪರಿಗಣಿಸಲು ವಿನಂತಿಸುತ್ತೇವೆ. ಅವರು ಆ ಬಗ್ಗೆ ತೃಪ್ತಿ ಹೊಂದಿದ ನಂತರವೇ ಹೆಸರುಗಳು ಸುಪ್ರೀಂ ಕೋರ್ಟ್‌ಗೆ ಬರುತ್ತವೆ" ಎಂದು ಸಿಜೆಐ ಗವಾಯಿ ಹೇಳಿದರು.