ಸುಪ್ರೀಂ ಕೋರ್ಟ್ ಕಲಾಪದ ನೇರಪ್ರಸಾರಕ್ಕೆ ಶೀಘ್ರವೇ ತನ್ನದೇ ಆದ ವೇದಿಕೆಯನ್ನು ಸುಪ್ರೀಂ ಕೋರ್ಟ್ ಹೊಂದಲಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಯು ಯು ಲಲಿತ್ ಹೇಳಿದ್ದಾರೆ.
ಸಂವಿಧಾನ ಪೀಠದ ಕಲಾಪಗಳ ನೇರ ಪ್ರಸಾರಕ್ಕೆ ಸಂಬಂಧಿಸಿದ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಬೇಕು ಎಂದು ವಕೀಲರೊಬ್ಬರು ಸೋಮವಾರ ಕೋರಿದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಮಾಹಿತಿ ನೀಡಿತು.
ಕಲಾಪವನ್ನು ಯೂಟ್ಯೂಬ್‌ನಲ್ಲಿ ಪ್ರಸಾರ ಮಾಡುವ ಉದ್ದೇಶವಿದ್ದರೆ ಅದರ ಹಕ್ಕುಸ್ವಾಮ್ಯ ಪಡೆದುಕೊಳ್ಳಬೇಕು ಎಂದು ವಕೀಲರು ವಿಷಯ ಪ್ರಸ್ತಾಪಿಸಿದರು. ಆಗ ಸಿಜೆಐ ಸುಪ್ರೀಂ ಕೋರ್ಟ್ ಕಲಾಪಗಳ ನೇರಪ್ರಸಾರಕ್ಕೆ ಶೀಘ್ರ ಸ್ವಂತದ ವೇದಿಕೆಯನ್ನು (ಪ್ಲಾಟ್‌ಫಾರ್ಮ್) ಸರ್ವೋಚ್ಚ ನ್ಯಾಯಾಲಯ ಹೊಂದಲಿದೆ ಎಂದು ಸ್ಪಷ್ಟಪಡಿಸಿದರು.
ಸಾಂವಿಧಾನಿಕ ಪೀಠದ ಕಲಾಪದ ನೇರ ಪ್ರಸಾರವನ್ನು ಸೆಪ್ಟೆಂಬರ್ 27ರಂದು ಅಂದರೆ ನಾಳೆಯಿಂದ ಆರಂಭಿಸಲು ಸುಪ್ರೀಂ ಕೋರ್ಟ್ ಪೂರ್ಣ ನ್ಯಾಯಾಲಯ ಸೆಪ್ಟೆಂಬರ್ 22ರಂದು ನಿರ್ಧಾರ ಕೈಗೊಂಡಿತ್ತು. ನಿರ್ಧಾರ ಸರ್ವಾನುಮತದಿಂದ ಕೂಡಿದ್ದು ಆರಂಭಿಕ ಹಂತದಲ್ಲಿ ವಿಚಾರಣೆಗಳನ್ನು ಯೂಟ್ಯೂಬ್‌ನಲ್ಲಿ ನೇರ ಪ್ರಸಾರ ಮಾಡಲಾಗುವುದು ಎಂದು ಮೂಲಗಳು ಬಾರ್ & ಬೆಂಚ್‌ಗೆ ತಿಳಿಸಿದ್ದವು.