Supreme Court 
ಸುದ್ದಿಗಳು

ಈ ವಿಚಾರಕ್ಕೆ ಕೈ ಹಾಕುವುದಿಲ್ಲ: ರಾಷ್ಟ್ರೀಯ ಮದ್ಯಪಾನ ತಡೆ ನೀತಿ ಜಾರಿಗೆ ವಿನಂತಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ

ನೀತಿ ಜಾರಿಗೆ ತರುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಲಾಗದು ಎಂದು ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್ ನೇತೃತ್ವದ ಪೀಠ ತಿಳಿಸಿತು.

Bar & Bench

ರಾಷ್ಟ್ರಮಟ್ಟದಲ್ಲಿ ಮದ್ಯಪಾನ ತಡೆ ನೀತಿ ಜಾರಿಗೆ ತರುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ [ವಿನಿಯೋಗ್ ಪರಿವಾರ್ ಟ್ರಸ್ಟ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್, ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಹಾಗೂ ಎಸ್ ರವೀಂದ್ರ ಭಟ್ ಅವರಿದ್ದ ಪೀಠ "ಇದಕ್ಕೆ ಆದಾಯದ ಆಯಾಮವಿದ್ದು ಕೆಲವು ಸಂದರ್ಭಗಳಲ್ಲಿ ಏನಾದರೂ ಮಾಡಲು ಹೋದರೆ, ಅವರ ಆದಾಯ ನಿರ್ಬಂಧಿಸಿದಂತಾಗುತ್ತದೆ. ಈ ಆದಾಯವನ್ನು ಸಾಮಾಜಿಕ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಸರ್ಕಾರ ನೀತಿ ರೂಪಿಸಲು ನಿರ್ದೇಶಿಸುವಂತೆ ಈ ಮನವಿ ಕೋರುತ್ತಿರುವಂತಿದ್ದು ಇದು ನಮ್ಮ ಕ್ಷೇತ್ರವಲ್ಲ" ಎಂದು ನ್ಯಾಯಾಲಯ ಹೇಳಿದೆ.

ಈ ವಿಚಾರ ಸಂವಿಧಾನದ ಪ್ರಕಾರ ಸಮವರ್ತಿ ಪಟ್ಟಿಗೆ ಸಂಬಂಧಿಸಿದ್ದಾದರೂ ಕೇಂದ್ರ ಸರ್ಕಾರ ಸಮಸ್ಯೆಯಿಂದ ಸಂಪೂರ್ಣ ವಿಮುಖವಾಗಿದೆ ಎಂದು ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ತಿಳಿಸಿದರು.

"ಈ ರೀತಿಯ ವಿಷಯಗಳನ್ನು ಪುರಸ್ಕರಿಸಿದರೆ ಅದು ಬೇರೆ ಹಾದಿ ಹಿಡಿಯುತ್ತದ. ನಿಮಗೆ ಬೇಕಾದುದನ್ನು ನೀವು ಮಾಡಬಹುದು. ನಾವು ಈ ವಿಚಾರಕ್ಕೆ ಕೈ ಹಾಕುವುದಿಲ್ಲ," ಎಂದು ಮನವಿಯನ್ನು ವಜಾಗೊಳಿಸುವಾಗ ನ್ಯಾಯಾಲಯ ಸ್ಪಷ್ಟಪಡಿಸಿತು.