Supreme Court, PMLA 
ಸುದ್ದಿಗಳು

ಕಾಯಿದೆಗಳ ಸಿಂಧುತ್ವವನ್ನೇ ಪ್ರಶ್ನಿಸುವ ಶ್ರೀಮಂತರ ನಡೆ ಬಗ್ಗೆ ಸುಪ್ರೀಂ ಕೋರ್ಟ್ ಕಿಡಿ

"ಉಳಿದವರಂತೆ ವಿಚಾರಣೆ ಎದುರಿಸಿ" ಎಂದು ಆಗಸ್ಟಾ ವೆಸ್ಟ್‌ಲ್ಯಾಂಡ್‌ ವಿವಿಐಪಿ ಹೆಲಿಕಾಪ್ಟರ್ ಒಪ್ಪಂದ ಪ್ರಕರಣದ ಆರೋಪಿಯಾಗಿರುವ ವಕೀಲ ಗೌತಮ್ ಖೇತಾನ್ ಅವರಿಗೆ ನ್ಯಾಯಾಲಯ ತಾಕೀತು ಮಾಡಿತು.

Bar & Bench

ಹಣಕಾಸಿನ ದೃಷ್ಟಿಯಿಂದ ಉತ್ತಮ ಸ್ಥಿತಿಯಲ್ಲಿರುವ ಮಂದಿ ತಮ್ಮ ಮೇಲೆ ಪ್ರಕರಣ ದಾಖಲಿಸಲು ಕಾರಣವಾದ ಕಾನೂನಿನ ಸಿಂಧುತ್ವವನ್ನೇ ಪ್ರಶ್ನಿಸುವ ಪ್ರವೃತ್ತಿ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಮಂಗಳವಾರ ಅಸಮಾಧಾನ ವ್ಯಕ್ತಪಡಿಸಿದೆ.

ಆಗಸ್ಟಾ ವೆಸ್ಟ್‌ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ದೆಹಲಿ ಮೂಲದ ವಕೀಲ ಗೌತಮ್ ಖೇತಾನ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.

ಸೆಕ್ಷನ್ 44(1)(ಸಿ)  ಸೇರಿದಂತೆ ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯ (ಪಿಎಂಎಲ್‌ಎ) ಕೆಲ ಸೆಕ್ಷನ್‌ಗಳ ಸಿಂಧುತ್ವವನ್ನು ಖೇತಾನ್‌ ಪ್ರಶ್ನಿಸಿದ್ದಾರೆ ಎಂದ ಅವರ ಪರ ಹಾಜರಾದ ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ ಹೇಳಿದರು.

ಇದಕ್ಕೆ ಬೇಸರ ವ್ಯಕ್ತಪಡಿಸಿದ ನ್ಯಾಯಾಲಯ ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲೇ ಶ್ರೀಮಂತರು ಕಾಯಿದೆಗಳ ಸಿಂಧುತ್ವ ಪ್ರಶ್ನಿಸುವುದು ವಿನೂತನ ಪ್ರವೃತ್ತಿಯಾಗಿದೆ. ಉಳಿದ ಪ್ರಜೆಗಳಂತೆ ಖೇತಾನ್‌ ಅವರು ವಿಚಾರಣೆ ಎದುರಿಸಲಿ ಎಂದಿತು.

ಇದೇ ಪ್ರಕರಣಕ್ಕೆ ಸಂಬಂಧಿಸಿದ ಸವಾಲು ಈಗಾಗಲೇ ನ್ಯಾಯಾಲಯದೆದುರು ಬಾಕಿ ಇರುವುದರಿಂದ ಅರ್ಜಿ ಪರಿಗಣಿಸಲು ನಿರಾಕರಿಸಿದ ನ್ಯಾಯಾಲಯ ಕಾನೂನಿನ ಪ್ರಶ್ನೆಯನ್ನು ಸೂಕ್ತ  ವಿಚಾರಣೆ ಮೂಲಕ ನಿರ್ಧರಿಸಲು ಮುಕ್ತವಾಗಿಡಲಾಗಿದೆ ಎಂಬುದಾಗಿ ತಿಳಿಸಿತು.