ಸುದ್ದಿಗಳು

ಇಂದ್ರಾಣಿ ಮುಖರ್ಜಿ ವೆಬ್ ಸರಣಿ: ಸಿಬಿಐಗೆ ಪ್ರದರ್ಶನ ಏರ್ಪಡಿಸಲು ನೆಟ್‌ಫ್ಲಿಕ್ಸ್‌ಗೆ ಬಾಂಬೆ ಹೈಕೋರ್ಟ್‌ ಸೂಚನೆ

ಸರಣಿ ಬಿಡುಗಡೆಗೆ ತಡೆ ಕೋರಿರುವ ಸಿಬಿಐ ಅರ್ಜಿಯ ಮುಂದಿನ ವಿಚಾರಣೆ ಫೆಬ್ರವರಿ 29ರಂದು ನಡೆಯಲಿದ್ದು ಅಲ್ಲಿಯವರೆಗೆ ಸರಣಿ ಪ್ರಸಾರ ಮಾಡುವುದಿಲ್ಲ ಎಂದು ನೆಟ್‌ಫ್ಲಿಕ್ಸ್‌ ನ್ಯಾಯಾಲಯಕ್ಕೆ ಭರವಸೆ ನೀಡಿದೆ.

Bar & Bench

ಶೀನಾ ಬೋರಾ ಕೊಲೆ ಪ್ರಕರಣದ ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿ ಕುರಿತ ವೆಬ್‌ ಸರಣಿ 'ದಿ ಇಂದ್ರಾಣಿ ಮುಖರ್ಜಿ ಸ್ಟೋರಿ: ಬರೀಡ್ ಟ್ರೂತ್'ನ ಬಿಡುಗಡೆ ಪೂರ್ವ ಪ್ರದರ್ಶನ ಏರ್ಪಡಿಸುವಂತೆ ನೆಟ್‌ಫ್ಲಿಕ್ಸ್‌ಗೆ ಬಾಂಬೆ ಹೈಕೋರ್ಟ್ ಇಂದು ಆದೇಶಿಸಿದೆ [ಸಿಬಿಐ ಮತ್ತು ನೆಟ್‌ಫ್ಲಿಕ್ಸ್‌ ನಡುವಣ ಪ್ರರಕಣ].

ಶೀನಾ ಬೋರಾ ಪ್ರಕರಣದ ವಿಚಾರಣೆ ಇನ್ನೂ ಮುಕ್ತಾಯಗೊಳ್ಳದ ಹಿನ್ನೆಲೆಯಲ್ಲಿ ವೆಬ್ ಸರಣಿ ಬಿಡುಗಡೆಗೆ ತಡೆ ನೀಡುವಂತೆ ಸಿಬಿಐ ಮನವಿ ಸಲ್ಲಿಸಿತ್ತು.

ಸರಣಿಗೆ ತಡೆಯಾಜ್ಞೆ ಕೋರಿರುವ ಸಿಬಿಐ ತನ್ನ ವಾದ ಮಂಡಿಸುವುದಕ್ಕೂ ಮೊದಲು ಸರಣಿಯನ್ನು ವೀಕ್ಷಿಸುವುದು ಸೂಕ್ತ ಎಂದು ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಡೇರೆ ಮತ್ತು ಮಂಜೂಷಾ ದೇಶಪಾಂಡೆ ಅವರಿದ್ದ ವಿಭಾಗೀಯ ಪೀಠ ಸಲಹೆ ನೀಡಿತು.

ಹಾಗೆ ಮಾಡುವುದು ಪ್ರದರ್ಶನ ಪೂರ್ವ ಸೆನ್ಸಾರ್‌ಗೆ ಕಾರಣವಾಗಬಹುದು ಎಂದು ನೆಟ್‌ಫ್ಲಿಕ್ಸ್‌ ಆರಂಭದಲ್ಲಿ ಕಳವಳ ವ್ಯಕ್ತಪಡಿಸಿತಾದರೂ ಅಂತಿಮವಾಗಿ ಪೀಠದ ಸಲಹೆಗೆ ಒಪ್ಪಿತು. ಅದರಂತೆ ಅರ್ಜಿಯ ವಿಚಾರಣೆ ನಡೆಯಲಿರುವ ಫೆಬ್ರವರಿ 29ರವರೆಗೆ ಸರಣಿ ಪ್ರಸಾರ ಮಾಡುವುದಿಲ್ಲ ಎಂದು ನೆಟ್‌ಫ್ಲಿಕ್ಸ್‌ ನ್ಯಾಯಾಲಯಕ್ಕೆ ಭರವಸೆ ನೀಡಿತು.

ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಡೇರೆ ಮತ್ತು ಮಂಜೂಷಾ ದೇಶಪಾಂಡೆ

ವೆಬ್‌ ಸರಣಿಗೆ ತಡೆ ನೀಡುವಂತೆ ಕೋರಿದ್ದ ತನ್ನ ಅರ್ಜಿಯನ್ನು ಸಿಬಿಐ ವಿಶೇಷ ನ್ಯಾಯಾಲಯ ತಿರಸ್ಕರಿಸಿದ್ದ ಹಿನ್ನೆಲೆಯಲ್ಲಿ ಫೆಬ್ರವರಿ 21ರಂದು ಸಿಬಿಐ ಹೈಕೋರ್ಟ್‌ ಮೆಟ್ಟಿಲೇರಿತ್ತು. ಸರಣಿಯಲ್ಲಿ ಆರೋಪಿಗಳು ಮತ್ತು ಕೆಲ ಸಾಕ್ಷಿಗಳನ್ನು ಸಂದರ್ಶಿಸಲಾಗಿದ್ದು ತಾನು ಟ್ರೇಲರ್‌ ಮಾತ್ರ ನೋಡಿರುವುದರಿಂದ ಹಾಗೆ ಸಂದರ್ಶನ ನೀಡಿದವರ ನಿಖರ ಸಂಖ್ಯೆ ಒದಗಿಸುವಂತೆ ಸಿಬಿಐ ಪರ ಹಾಜರಿದ್ದ ವಕೀಲರ ಶ್ರೀರಾಮ್‌ ಶಿರ್ಸಾಟ್‌ ಕೋರಿದರು.

ನೆಟ್‌ಫ್ಲಿಕ್ಸ್‌ ಪರವಾಗಿ ಹಾಜರಾದ ಹಿರಿಯ ವಕೀಲ ರವಿ ಕದಮ್ , ಸರಣಿಯಲ್ಲಿ ಇಂದ್ರಾಣಿ ಅವರ ಮಗ ಮೈಖೆಲ್‌ ಮತ್ತು ಅವರ ಮಗಳು ವಿಧಿ ಮುಖರ್ಜಿ ಸೇರಿದಂತೆ ಐದು ಸಾಕ್ಷಿಗಳನ್ನು ಸಂದರ್ಶಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸರಣಿಗಾಗಿ ಸಂದರ್ಶಿಸಲಾದ ಐದು ಜನರಲ್ಲಿ, ಇಬ್ಬರು ಸಾಕ್ಷಿಗಳ ವಿಚಾರಣೆ ಮುಗಿದಿದೆ ಮತ್ತು ಮೂವರ ವಿಚಾರಣೆಯನ್ನು ಇನ್ನಷ್ಟೇ ನಡೆಸಬೇಕಿದೆ ಎಂದು ಅವರು ಹೇಳಿದರು. ಈ ಹಂತದಲ್ಲಿ ನ್ಯಾಯಾಲಯ ಪ್ರಕರಣವನ್ನು ಇನ್ನಷ್ಟು ಆಲಿಸುವ ಮೊದಲು ನೆಟ್‌ಫ್ಲಿಕ್ಸ್‌ ಸರಣಿಯನ್ನು ಸಿಬಿಐಗೆ ತೋರಿಸಬಹುದು ಎಂದು ಸೂಚಿಸಿತು. ಸರಣಿ ನಾಳೆಯಿಂದ (ಫೆಬ್ರವರಿ 23) ಪ್ರದರ್ಶನಗೊಳ್ಳಬೇಕಿತ್ತು.

ತನ್ನ ಮಗಳು ಶೀನಾ ಬೋರಾಳನ್ನು ಮಾಜಿ ಪತಿ ಸಂಜೀವ್ ಖನ್ನಾ, ಪ್ರಸ್ತುತ ಪತಿ ಪೀಟರ್ ಮುಖರ್ಜಿಯಾ ಮತ್ತು ಚಾಲಕ ಶ್ಯಾಮ್ವರ್ ರಾಯ್ ಅವರ ಸಹಾಯದಿಂದ ಇಂದ್ರಾಣಿ ಕೊಲೆ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ಇಂದ್ರಾಣಿ ಅವರನ್ನು ಬಂಧಿಸಿತ್ತು. ಮೇ 2022ರಲ್ಲಿ, ಸುಪ್ರೀಂ ಕೋರ್ಟ್‌ ಆಕೆಗೆ ಜಾಮೀನು ನೀಡಿತ್ತು.