Sexual Assault 
ಸುದ್ದಿಗಳು

ಅತ್ಯಾಚಾರ ಅಪರಾಧಿಗಳಿಗೆ ಮರಣದಂಡನೆ: ಅಪರಾಜಿತಾ ಮಸೂದೆ ಅಂಗೀಕರಿಸಿದ ಪಶ್ಚಿಮ ಬಂಗಾಳ ವಿಧಾನಸಭೆ

Bar & Bench

ಅತ್ಯಾಚಾರ-ವಿರೋಧಿ ಮಸೂದೆ ಎಂದು ಕರೆಯಲಾಗುವ ಅಪರಾಜಿತಾ ಮಹಿಳೆ ಮತ್ತು ಮಕ್ಕಳ (ಪಶ್ಚಿಮ ಬಂಗಾಳ ಕ್ರಿಮಿನಲ್ ಕಾನೂನುಗಳ ತಿದ್ದುಪಡಿ) ಮಸೂದೆ- 2024 ಅನ್ನು ಪಶ್ಚಿಮ ಬಂಗಾಳ ವಿಧಾನಸಭೆ ಮಂಗಳವಾರ ಸರ್ವಾನುಮತದಿಂದ ಅಂಗೀಕರಿಸಿದೆ.

ಈ ಮಸೂದೆಯು ಅತ್ಯಾಚಾರ ಅಪರಾಧಿಗಳಿಗೆ ವಿಧಿಸಲಾಗುವ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಲಿದ್ದು ಅತ್ಯಾಚಾರ ಸಂತ್ರಸ್ತೆ ಮರಣಹೊಂದಿದರೆ ಅಥವಾ ಅವಳನ್ನು ಜೀವಚ್ಛವವಾದರೆ ಅವರಿಗೆ ಮರಣದಂಡನೆ ವಿಧಿಸುವುದನ್ನು ಕಡ್ಡಾಯಗೊಳಿಸುತ್ತದೆ.

ಆಗಸ್ಟ್ 9ರಂದು ಕೋಲ್ಕತ್ತಾದ ಆರ್‌ ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸ್ಥಾನಿಕ ವೈದ್ಯೆಯ ಬೀಭತ್ಸ ಅತ್ಯಾಚಾರ ಮತ್ತು ಕೊಲೆ ಹಿನ್ನೆಲೆಯಲ್ಲಿ ಮಸೂದೆ ಜಾರಿಗೆ ತರಲಾಗಿದೆ.

ಟಿಎಂಸಿ ಮಂಡಿಸಿದ ಮಸೂದೆಗೆ ಬಿಜೆಪಿ ಸೇರಿದಂತೆ ಪ್ರತಿಪಕ್ಷಗಳು ಬೆಂಬಲ ವ್ಯಕ್ತಪಡಿಸುವ ಮೂಲಕ ಅದನ್ನು ಅವಿರೋಧವಾಗಿ ಅಂಗೀಕರಿಸಲಾಯಿತು.

ಮಸೂದೆಯ ಪ್ರಮುಖಾಂಶಗಳು

  • ಅತ್ಯಾಚಾರಕ್ಕೆ ವಿಧಿಸಲಾಗುವ ಶಿಕ್ಷೆಯ ಪ್ರಮಾಣ ಹೆಚ್ಚಳ. ಜೊತೆಗೆ ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಘೋರ ಅಪರಾಧಗಳ ತ್ವರಿತ ತನಿಖೆ ಮತ್ತು ವಿಚಾರಣೆ.

  • ಈ ನಿಟ್ಟಿನಲ್ಲಿ, ಪಶ್ಚಿಮ ಬಂಗಾಳಕ್ಕೆ ಅನ್ವಯವಾಗುವಂತೆ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್), ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (ಬಿಎನ್‌ಎಸ್‌ಎಸ್‌) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆಯ (ಪೊಕ್ಸೋ ಕಾಯಿದೆ) ಭಾಗಗಳ ತಿದ್ದುಪಡಿ.

  • ಅತ್ಯಾಚಾರ ಸಂತ್ರಸ್ತೆ ಮೃತಪಟ್ಟರೆ ಅಥವಾ ಜೀವಂತ ಶವವಾಗಿ ಉಳಿದರೆ ಗಲ್ಲು ಶಿಕ್ಷೆ ಕಡ್ಡಾಯ

  • ಅತ್ಯಾಚಾರ ಸಂತ್ರಸ್ತೆಯ ಗುರುತನ್ನು ಬಹಿರಂಗಪಡಿಸುವ ಅಪರಾಧಕ್ಕಾಗಿ ಶಿಕ್ಷೆಯನ್ನು 3-5 ವರ್ಷಗಳ ಜೈಲು ಶಿಕ್ಷೆ ಮತ್ತು ದಂಡದ ಮೊತ್ತ ಹೆಚ್ಚಳ.

  • ತನಿಖೆ ಮತ್ತು ವಿಚಾರಣೆಗೆ ಕಡಿಮೆ ಕಾಲಮಿತಿ. ಬಿಎನ್‌ಎಸ್‌ನಲ್ಲಿ ಪ್ರಸ್ತುತ ಇರುವ ಎರಡು ತಿಂಗಳ ಮಿತಿಯಿಂದ 21 ದಿನಕ್ಕೆ ತನಿಖೆಯ ಕಾಲಮಿತಿ ನಿಗದಿ. ಅನಿವಾರ್ಯವಾದಲ್ಲಿ ಗರಿಷ್ಠ 15 ದಿನದ ಅವಧಿಗೆ ವಿಸ್ತರಣೆ.

  • ಬಿಎಎffಎಸ್‌ಎಸ್‌ ಸೆಕ್ಷನ್ 346(1) ತಿದ್ದುಪಡಿ ಮಾಡಲು ಮಸೂದೆ ಪ್ರಸ್ತಾಪಿಸಿದ್ದು, ಇದರಿಂದಾಗಿ ಅಂತಹ ಪ್ರಕರಣಗಳ ತನಿಖೆ ಅಥವಾ ವಿಚಾರಣೆ ಆರೋಪ ಪಟ್ಟಿ ಸಲ್ಲಿಸಿದ ದಿನದಿಂದ 30 ದಿನಗಳಲ್ಲಿ ಪೂರ್ಣಗೊಳ್ಳಬೇಕು.

  • ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಪ್ರಕರಣಗಳ ವಿಚಾರಣೆಗೆಂದು ವಿಶೇಷ ನ್ಯಾಯಾಲಯಗಳು ಮತ್ತು ಅಪರಾಜಿತಾ ಟಾಸ್ಕ್ ಫೋರ್ಸ್ ಹೆಸರಿನ ಕಾರ್ಯಪಡೆ ರಚನೆ.

  • ತನಿಖೆಯನ್ನು ಸಾಧ್ಯವಾದಷ್ಟೂ ಮಹಿಳಾ ಪೊಲೀಸ್‌ ಅಧಿಕಾರಿಯೇ ನಡೆಸಬೇಕು. ತನಿಖೆಗೆ ಸಹಕರಿಸದವರಿಗೆ ಜೈಲು ಶಿಕ್ಷೆ.