Justice Ashim Kumar Roy and New Criminal Laws.  
ಸುದ್ದಿಗಳು

ನೂತನ ಅಪರಾಧಿಕ ಕಾನೂನುಗಳಿಗೆ ತಿದ್ದುಪಡಿ: ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಸಮಿತಿ ರಚಿಸಿದ ಬಂಗಾಳ ಸರ್ಕಾರ

Bar & Bench

ಜುಲೈ 1ರಿಂದ ಜಾರಿಗೆ ಬಂದಿರುವ ಮೂರು ಹೊಸ ಅಪರಾಧಿಕ ಕಾನೂನುಗಳಾದ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್), ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್) ಹಾಗೂ ಭಾರತೀಯ ಸಾಕ್ಷ್ಯ ಅಧಿನಿಯಮಕ್ಕೆ (ಬಿಎಸ್‌ಎ) ತಿದ್ದುಪಡಿ  ಸೂಚಿಸಲು ಪಶ್ಚಿಮ ಬಂಗಾಳ ಸರ್ಕಾರ ಸಮಿತಿಯೊಂದನ್ನು ರಚಿಸಿದೆ.

ಹೊಸ ಅಪರಾಧಿಕ ಕಾನೂನುಗಳ ಜಾರಿ ಮುಂದೂಡುವಂತೆ ಪಶ್ಚಿಮ ಬಂಗಾಳ ಸರ್ಕಾರದ ಮನವಿಯನ್ನು ಕೇಂದ್ರ ಸರ್ಕಾರ ಗಣನೆಗೆ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಸಮಿತಿ  ರಚಿಸಲಾಗಿದೆ.

ಜುಲೈ 16ರಂದು ಹೊರಡಿಸಲಾದ ಅಧಿಸೂಚನೆಯಲ್ಲಿ, ಹೊಸ ಅಪರಾಧಿಕ ಸಂಹಿತೆಗಳಿಗೆ ಸಂಬಂಧಿಸಿದಂತೆ ನಿರ್ದಿಷ್ಟ ತಿದ್ದುಪಡಿಗಳನ್ನು ಸಮಿತಿ ಸೂಚಿಸಲಿದ್ದು ಕಾಯಿದೆಗಳ ಹೆಸರನ್ನು ರಾಜ್ಯ ಮಟ್ಟದಲ್ಲಿ ಬದಲಾಯಿಸುವ ಅಗತ್ಯವಿದೆಯೇ ಎಂದು ಕೂಡ ಪರಿಶೀಲಿಸಲಿದೆ ಎಂದು ರಾಜ್ಯ ಗೃಹ ಇಲಾಖೆ ತಿಳಿಸಿದೆ.

ಪ್ರಸ್ತುತ ಪಶ್ಚಿಮ ಬಂಗಾಳ ಲೋಕಾಯುಕ್ತರಾಗಿ ಸೇವೆ ಸಲ್ಲಿಸುತ್ತಿರುವ ಕಲ್ಕತ್ತಾ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಆಶಿಮ್ ಕುಮಾರ್ ರಾಯ್ ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಸಮಿತಿಯು ತನ್ನ ಕರ್ತವ್ಯ ನಿರ್ವಹಿಸುವುದಕ್ಕಾಗಿ ಶೈಕ್ಷಣಿಕ ತಜ್ಞರು, ಹಿರಿಯ ವಕೀಲರು, ಸಂಶೋಧನಾ ಸಹಾಯಕರು ಹಾಗೂ ಕಾನೂನು ತಜ್ಞರನ್ನು ತೊಡಗಿಸಿಕೊಳ್ಳುವ ಅಧಿಕಾರ ಪಡೆದಿದೆ.

ಪ್ರಸ್ತಾವಿತ ತಿದ್ದುಪಡಿಗಳ ಬಗ್ಗೆ ಸಾರ್ವಜನಿಕ ಅಭಿಪ್ರಾಯ ಪಡೆಯುವ ಜವಾಬ್ದಾರಿಯನ್ನು ಸಮಿತಿಗೆ ವಹಿಸಲಾಗಿದೆ. ಮೂರು ತಿಂಗಳೊಳಗೆ ವರದಿ ಸಲ್ಲಿಸುವಂತೆ ಸಮಿತಿಗೆ ಸೂಚಿಸಲಾಗಿದೆ.

ಪಶ್ಚಿಮ ಬಂಗಾಳ ವಕೀಲರ ಸಂಘ ಮೂರು ಹೊಸ ಅಪರಾಧಿಕ ಕಾನೂನುಗಳ ವಿರುದ್ಧ ಪ್ರತಿಭಟನೆಯ ಧ್ಯೋತಕವಾಗಿ ಜುಲೈ 1 ಅನ್ನು 'ಕಪ್ಪು ದಿನ' ಎಂದು ಆಚರಿಸಲು ಸರ್ವಾನುಮತದಿಂದ ನಿರ್ಧರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಭಾರತೀಯ ದಂಡ ಸಂಹಿತೆ, ಅಪರಾಧಿಕ ಪ್ರಕ್ರಿಯಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಕಾಯಿದೆಗಳ ಬದಲಿಗೆ ಮೂರು ಹೊಸ ಅಪರಾಧಿಕ ಕಾನೂನುಗಳು ಜುಲೈ 1ರಿಂದ ಜಾರಿಗೆ ಬಂದಿವೆ.

ಹೊಸ ಕಾನೂನುಗಳು ದೇಶದ ವಸಾಹತುಶಾಹಿ-ಯುಗದ ಅಪರಾಧಿಕ ಕಾನೂನುಗಳನ್ನು ಬದಲಿಸುವ ಉದ್ದೇಶವನ್ನು ಹೊಂದಿವೆಯಾದರೂ ಸಂಸತ್ತಿನಲ್ಲಿ ಅದನ್ನು ಅಂಗೀಕರಿಸಿದ ರೀತಿ, ಅವುಗಳ ಹೆಸರುಗಳು, ಅಸ್ತಿತ್ವದಲ್ಲಿರುವ ಅಪರಾಧ ಪ್ರಕರಣಗಳ ಮೇಲೆ ಅವುಗಳ ಸಂಭಾವ್ಯ ಪ್ರಭಾವ ಮತ್ತು ಅಪರಾಧಿಕ ನ್ಯಾಯ ವ್ಯವಸ್ಥೆಯ ಕೂಲಂಕಷ ಪರೀಕ್ಷೆಯನ್ನು ಅನುಷ್ಠಾನಗೊಳಿಸುವಲ್ಲಿನ ಪ್ರಾಯೋಗಿಕ ತೊಂದರೆಗಳ ಬಗ್ಗೆ ವಿವಾದ ಹುಟ್ಟುಹಾಕಿವೆ.

ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ಕೂಡ ಈ ಕಾನೂನುಗಳಿಗೆ ರಾಜ್ಯಮಟ್ಟದಲ್ಲಿ ತಿದ್ದುಪಡಿ ಮಾಡಲು ಚಿಂತಿಸುತ್ತಿವೆ.