West Bengal Post poll violence, Calcutta HC
West Bengal Post poll violence, Calcutta HC  
ಸುದ್ದಿಗಳು

ಪ. ಬಂಗಾಳ ಪಂಚಾಯತ್ ಚುನಾವಣೆ ಫಲಿತಾಂಶ ನ್ಯಾಯಾಲಯದ ಆದೇಶಗಳಿಗೆ ಒಳಪಟ್ಟಿರುತ್ತದೆ: ಕಲ್ಕತ್ತಾ ಹೈಕೋರ್ಟ್

Bar & Bench

ಪಶ್ಚಿಮ ಬಂಗಾಳ ಪಂಚಾಯತ್‌ ಚುನಾವಣೆ ಸಂದರ್ಭದಲ್ಲಿ ಹಿಂಸಾಚಾರದ ಘಟನೆಗಳು ನಡೆದ ಹಿನ್ನೆಲೆಯಲ್ಲಿ ಚುನಾವಣಾ ಫಲಿತಾಂಶ ಮತ್ತು ಅದಕ್ಕೆ ಸಂಬಂಧಿಸಿದ ಸಂಪೂರ್ಣ ಚುನಾವಣಾ ಪ್ರಕ್ರಿಯೆ ನ್ಯಾಯಾಲಯದ ಮುಂದಿನ ಆದೇಶಗಳಿಗೆ ಒಳಪಟ್ಟಿರುತ್ತದೆ ಎಂದು ಕಲ್ಕತ್ತಾ ಹೈಕೋರ್ಟ್‌ ಹೇಳಿದೆ [ಸುವೆಂದು ಅಧಿಕಾರಿ ಮತ್ತು ಪಶ್ಚಿಮ ಬಂಗಾಳ ಸರ್ಕಾರ ನಡುವಣ ಪ್ರಕರಣ].

ಪಂಚಾಯತಿ ಚುನಾವಣೆಗೆ ಅಧಿಸೂಚನೆ ಪ್ರಕಟವಾದ ದಿನದಿಂದ ನ್ಯಾಯಾಲಯ ವಿವಿಧ ಆದೇಶಗಳನ್ನು ಹೊರಡಿಸಿದ್ದು ಸಂಪೂರ್ಣ ಪ್ರಕ್ರಿಯೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಮುಖ್ಯ ನ್ಯಾಯಮೂರ್ತಿ ಟಿ ಎಸ್ ಶಿವಜ್ಞಾನಂ ಮತ್ತು ನ್ಯಾಯಮೂರ್ತಿ ಹಿರಣ್ಮಯ್ ಭಟ್ಟಾಚಾರ್ಯ ಅವರಿದ್ದ ವಿಭಾಗೀಯ ಪೀಠ ಹೇಳಿದೆ.

ರಾಜ್ಯದಲ್ಲಿ ನಡೆಯುತ್ತಿರುವ ಚುನಾವಣೋತ್ತರ ಹಿಂಸಾಚಾರದ ಬಗ್ಗೆ ಸ್ವತಂತ್ರ ಸಂಸ್ಥೆ ತನಿಖೆ ನಡೆಸಬೇಕು ಎಂದು ಕೋರಿ ಬಿಜೆಪಿ ನಾಯಕ ಸುವೇಂದು ಅಧಿಕಾರಿ  ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಆದೇಶ ನೀಡಿದೆ. ಪ್ರಕರಣದ ಮುಂದಿನ ವಿಚಾರಣೆ ಜು. 21ರಂದು ನಡೆಯುವ ಸಾಧ್ಯತೆಗಳಿವೆ.

ನ್ಯಾಯಾಲಯ ಅವಲೋಕನದ ಪ್ರಮುಖಾಂಶಗಳು

  • ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳಿಗೆ ಫಲಿತಾಂಶ ನ್ಯಾಯಾಲಯದ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ತಿಳಿಸಿ.

  • ಫಲಿತಾಂಶದ ನಂತರವೂ ರಾಜ್ಯ ಸರ್ಕಾರಕ್ಕೆ ಹಿಂಸಾಚಾರ ನಿಯಂತ್ರಿಸಲು ಸಾಧ್ಯವಾಗಲಿಲ್ಲ ಎಂಬುದು ಅಚ್ಚರಿಯ ಸಂಗತಿ.  

  • ನಾಗರಿಕ ಸ್ವಾತಂತ್ರ್ಯದೊಂದಿಗೆ ರಾಜಿ ಮಾಡಿಕೊಳ್ಳಲಾಗಿದ್ದು ಪೊಲೀಸರು ಜನರಿಗೆ ನೆರವಿನ ಹಸ್ತ ಚಾಚಲಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.

  • ಶಾಂತಿ ಭಂಗವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲಿದ್ದು ನಾಗರಿಕರನ್ನು ರಕ್ಷಿಸುವ ಸ್ಥಿತಿಯಲ್ಲಿ ಸರ್ಕಾರ ಇಲ್ಲದಿದ್ದರೆ ಅದು ಅತ್ಯಂತ ಗಂಭೀರ ವಿಚಾರವಾಗುತ್ತದೆ.

  • ಚುನಾವಣಾ ಪ್ರಕ್ರಿಯೆ ನ್ಯಾಯಾಲಯ ಊಹಿಸಿದ್ದಕ್ಕೆ ವಿರುದ್ಧವಾಗಿತ್ತು. ಅತ್ಯಾಚಾರ, ಕೊಲೆ ಮತ್ತು ಘೋರ ಅಪರಾಧ ಎಸಗಿದ ಆರೋಪ ಕೇಳಿಬಂದಿದೆ. ಮತದಾರರನ್ನು ಬೆದರಿಸಲಾಗಿದೆ. ಮತದಾನದ ದಿನ ಮತಯಂತ್ರಗಳನ್ನು ಲೂಟಿ ಮಾಡಲಾಗಿದೆ, ಮತಗಟ್ಟೆಗಳನ್ನು ವಶಪಡಿಸಿಕೊಳ್ಳಲಾಗಿದೆ, ನಕಲಿ ಮತದಾನ ನಡೆದಿದೆ.

  • ಇನ್ನೂ ಆಘಾತಕಾರಿ ಸಂಗತಿ ಎಂದರೆ ಮತಪೆಟ್ಟಿಗೆಯ ಮೇಲೆ ಮೂತ್ರ ವಿಸರ್ಜನೆ ಮಾಡುವ ವ್ಯಕ್ತಿಯ ಛಾಯಾಚಿತ್ರ ಪ್ರಜಾಪ್ರಭುತ್ವದ ಹಬ್ಬವನ್ನು (ಚುನಾವಣೆ) ಅಪಹಾಸ್ಯ ಮಾಡುವಂತಿದೆ.