Calcutta High Court 
ಸುದ್ದಿಗಳು

ಬಂಗಾಳ ಪಂಚಾಯಿತಿ ಚುನಾವಣೆ: 20,585 ನಾಮಪತ್ರ ಏಕಾಏಕಿ ಹಿಂಪಡೆದಿರುವ ಆರೋಪಕ್ಕೆ ಉತ್ತರಿಸಲು ಆಯೋಗಕ್ಕೆ ಹೈಕೋರ್ಟ್‌ ಆದೇಶ

20,585 ಉಮೇದುವಾರಿಕೆಯನ್ನು ಮೂರು ದಿನಗಳಲ್ಲಿ ಹಿಂಪಡೆಯಲಾಗಿದ್ದು, ಒಂದೇ ಗಂಟೆಯಲ್ಲಿ 40,000 ಟಿಎಂಸಿ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ ಎಂದು ಆರೋಪಿಸಲಾಗಿದೆ.

Bar & Bench

ಪಶ್ಚಿಮ ಬಂಗಾಳ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಿಸಿದ್ದ 20,585 ಅಭ್ಯರ್ಥಿಗಳು ಮೂರು ದಿನಗಳ ಅಂತರದಲ್ಲಿ ಉಮೇದುವಾರಿಕೆ  ಹಿಂಪಡೆದಿರುವ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಲು ರಾಜ್ಯ ಚುನಾವಣಾ ಆಯೋಗಕ್ಕೆ ಶುಕ್ರವಾರ ಕಲ್ಕತ್ತಾ ಹೈಕೋರ್ಟ್‌ ಆದೇಶಿಸಿದೆ [ಸುವೇಂದು ಅಧಿಕಾರಿ ಮತ್ತು ಇತರರು ವರ್ಸಸ್‌ ರಾಜೀವ್‌ ಸಿನ್ಹಾ, ರಾಜ್ಯ ಚುನಾವಣಾ ಆಯುಕ್ತರು].

ನ್ಯಾಯಸಮ್ಮತ ಚುನಾವಣೆ ನಡೆಸುವುದಕ್ಕೆ ಸಂಬಂಧಿಸಿದಂತೆ ಈ ಹಿಂದೆ ಹೈಕೋರ್ಟ್‌ ನೀಡಿರುವ ನಿರ್ದೇಶನಗಳನ್ನು ಪಾಲಿಸಲು ರಾಜ್ಯ ಚುನಾವಣಾ ಆಯುಕ್ತರು ವಿಫಲರಾಗಿದ್ದಾರೆ ಎಂದು ಆಕ್ಷೇಪಿಸಿ ಪ್ರತಿಪಕ್ಷದ ನಾಯಕ, ಬಿಜೆಪಿ ಮುಖಂಡ ಸುವೇಂದು ಅಧಿಕಾರಿ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಟಿ ಎಸ್‌ ಶಿವಜ್ಞಾನಂ ಮತ್ತು ನ್ಯಾಯಮೂರ್ತಿ ಉದಯ್‌ ಕುಮಾರ್‌ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.

“20,585 ಮಂದಿ ಉಮೇದುವಾರಿಕೆ ಪಡೆದಿರುವ ಅನೂಹ್ಯ ಸಂದರ್ಭ ಘಟಿಸಿದೆ ಎಂದು ಅರ್ಜಿದಾರರ ಪರ ವಕೀಲರು ಹೇಳಿದ್ದಾರೆ. ಹಲವು ಪ್ರಕರಣಗಳಲ್ಲಿ ಈ ವಿಚಾರ ಪ್ರಸ್ತಾಪಿಸಿರುವುದರಿಂದ ರಾಜ್ಯ ಚುನಾವಣಾ ಆಯೋಗವು ತಾನು ಸಲ್ಲಿಸಲು ಅಫಿಡವಿಟ್‌ನಲ್ಲಿ ಇದಕ್ಕೆ ಉತ್ತರಿಸಬೇಕು” ಎಂದು ನ್ಯಾಯಾಲಯ ಆದೇಶ ಮಾಡಿದೆ.

ಭಾರಿ ಸಂಖ್ಯೆಯಲ್ಲಿ ಉಮೇದುವಾರಿಕೆ ಹಿಂಪಡೆದಿರುವ ಮಧ್ಯೆಯೇ ಆಡಳಿತರೂಢ ತೃಣಮೂಲ ಕಾಂಗ್ರೆಸ್‌ನ 40,000 ಅಭ್ಯರ್ಥಿಗಳು ಒಂದೇ ತಾಸಿನಲ್ಲಿ ನಾಮಪತ್ರ ಸಲ್ಲಿಸಿದ್ದಾರೆ ಎಂದು ಅರ್ಜಿದಾರರ ಪರ ವಕೀಲರು ಪೀಠಕ್ಕೆ ತಿಳಿಸಿದರು. ನ್ಯಾಯಯುತ ಚುನಾವಣೆ ನಡೆಸುವ ನಿಟ್ಟಿನಲ್ಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯೊಬ್ಬರನ್ನು ವೀಕ್ಷಕರನ್ನಾಗಿ ನೇಮಿಸಲು ಕೋರಿ ಅರ್ಜಿ ತಿದ್ದುಪಡಿ ಮಾಡಲು ಅವಕಾಶ ಮಾಡಿಕೊಂಡುವಂತೆ ಅರ್ಜಿದಾರರು ಕೋರಿದರು. ಇದಕ್ಕೆ ಪೀಠವು ರಾಜ್ಯ ಚುನಾವಣಾ ಆಯೋಗ ತನ್ನ ಅಫಿಡವಿಟ್‌ ಸಲ್ಲಿಸಿದ ಬಳಿಕ ಈ ವಿಚಾರದ ಬಗ್ಗೆ ಪರಿಶೀಲಿಸಲಾಗುವುದು ಎಂದಿದೆ.

ಕೇಂದ್ರೀಯ ಅರೆಸೇನಾ ಪಡೆ ಕೋರಿಕೆಗೆ ಸಂಬಂಧಿಸಿಂತೆ ನ್ಯಾಯಾಲಯ ಈ ಹಿಂದೆ ಮಾಡಿರುವ ಆದೇಶ ಪಾಲನೆಯನ್ನು ಉದ್ದೇಶಪೂರ್ವಕವಾಗಿ ತಡೆ ಮಾಡಿಲ್ಲ. 315 ಅರೆ ಸೇನಾ ಪಡೆಗಳನ್ನು ಕೇಂದ್ರ ಸರ್ಕಾರ ನಿಯೋಜಿಸಿದೆ. ಈಗಾಗಲೇ 22 ಅರೆಸೇನಾ ಪಡೆಯ ತುಕಡಿಗಳನ್ನು ನಿಯೋಜಿಸಲಾಗಿದೆ. 485 ಅರೆಸೇನಾ ಪಡೆಗಳ ನಿಯೋಜನೆಗೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಆಯೋಗವು ಪೀಠಕ್ಕೆ ವಿವರಿಸಿತು.

ಕೆಲ ಕಾಲ ವಾದ ಆಲಿಸಿದ ನ್ಯಾಯಾಲಯವು ಚುನಾವಣಾ ಬೂತ್‌ಗಳಲ್ಲಿನ ಪ್ರಕ್ರಿಯೆ ದಾಖಲಿಸಲು ಅಗತ್ಯ ಕ್ಯಾಮೆರಾಗಳಿಗೆ ಬೇಡಿಕೆ ಸಲ್ಲಿಸಲಾಗಿದೆಯೇ ಎಂಬುದೂ ಅಫಿಡವಿಟ್‌ನಲ್ಲಿ ಸೇರಬೇಕು. ಜೂನ್‌ 27ರ ಒಳಗೆ ಅಫಿಡವಿಟ್‌ ಸಲ್ಲಿಸಬೇಕು ಎಂದು ನ್ಯಾಯಾಲಯ ಗಡುವು ವಿಧಿಸಿದ್ದು, ಜೂನ್‌ 28ಕ್ಕೆ ವಿಚಾರಣೆ ನಡೆಸಲಾಗುವುದು ಎಂದಿದೆ.