ವಜಾಗೊಂಡಿದ್ದ ಶಾಲಾ ನೌಕರರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳದಲ್ಲಿ ಅವರ ಮೇಲೆ ಹಲ್ಲೆ ಮಾಡಿದ ಆರೋಪದಡಿ ತಮ್‌ಲುಕ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮತ್ತು ಕಲ್ಕತ್ತಾ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಅವರ ವಿರುದ್ಧ ಪಶ್ಚಿಮ ಬಂಗಾಳ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
ಎಫ್‌ಐಆರ್‌ನಲ್ಲಿ ಭಾರತೀಯ ಯುವ ಮೋರ್ಚಾ (ಬಿಜೆವೈಎಂ) ನಾಯಕ ಪ್ರಶಾಂತ ದಾಸ್ ಹೆಸರೂ ಇದೆ.
ಕಲ್ಕತ್ತಾ ಹೈಕೋರ್ಟ್ ತೀರ್ಪಿನ ನಂತರ ಕೆಲಸ ಕಳೆದುಕೊಂಡಿರುವ ಕೆಲವು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಗಂಗೋಪಾಧ್ಯಾಯ ಮತ್ತು ದಾಸ್ ವಿರುದ್ಧ ಐಪಿಸಿಯಡಿ ಕೊಲೆ ಯತ್ನ ಮತ್ತಿತರ ಆರೋಪಗಳನ್ನು ಮಾಡಿದ್ದಾರೆ.
ಮೇ 4ರಂದು ಗಂಗೋಪಾಧ್ಯಾಯ ಅವರು ಬಿಜೆಪಿಯ ಮತ್ತೊಬ್ಬ ನಾಯಕ ಸುವೇಂದು ಅಧಿಕಾರಿ ಅವರೊಂದಿಗೆ ತಮ್‌ಲುಕ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಮುನ್ನ ನಡೆದಿದ್ದ ಮೆರವಣಿಗೆ ವೇಳೆ ಈ ಘಟನೆ ನಡೆದಿತ್ತು.
ಆ ವೇಳೆ ಕೆಲ ಬಿಜೆಪಿ ಬೆಂಬಲಿಗರು ಕೆಲಸ ಕಳೆದುಕೊಂಡಿದ್ದ ಪ್ರಾಥಮಿಕ ಶಿಕ್ಷಕರ ಪ್ರತಿಭಟನಾ ಸ್ಥಳದ ಮೇಲೆ ದಾಳಿ ಮಾಡಿದ್ದರು.